Advertisement

ಫ‌ಲಪುಷ್ಪ ಪ್ರದರ್ಶನ ಇಂದೇ ಕಣ್ತುಂಬಿಕೊಳ್ಳಿ

07:20 AM Jan 28, 2019 | Team Udayavani |

ರಾಮನಗರ: ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ತೋಟ ಗಾರಿಕೆ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳು 70ನೇ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಫ‌ಲಪುಷ್ಪ ಪ್ರದರ್ಶನ ಮತ್ತು ಸುಗ್ಗಿ ಉತ್ಸವ ಜನರನ್ನು ಆಕರ್ಷಿಸುತ್ತಿದೆ. ಸೋಮವಾರ ಸಂಜೆಯವರೆಗೂ ಈ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರು ತರಹೇವಾರಿ ಫ‌ಲ ಪುಷ್ಪಗಳಲ್ಲಿ ಮೂಡಿ ಬಂದಿರುವ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಬಹುದು.

Advertisement

ಈ ಮೊದಲ ಬಾರಿಗೆ ಜಿಲ್ಲಾ ಕೇಂದ್ರ ರಾಮನಗರದಲ್ಲಿ ನಡೆಯುತ್ತಿರುವ ಫ‌ಲಪುಷ್ಪ ಪ್ರದರ್ಶನದಲ್ಲಿ ಸೇವಂತಿಗೆ ಮತ್ತು ಗುಲಾಬಿ ಹೂಗಳಿಂದ ಬೆಂಗಳೂರು -ಮೈಸೂರು ಹೆದ್ದಾರಿ, ರಾಮನಗರ ಮತ್ತು ಚನ್ನಪಟ್ಟಣ ತಾಲೂಕುಗಳ ಗಡಿಯಲ್ಲಿರುವ ಕೆಂಗಲ್‌ ಆಂಜನೇಯಸ್ವಾಮಿ ದೇವಾ ಲಯ ಮಾದರಿಯನ್ನು 20 ಅಡಿ ಅಗಲ, 20 ಅಡಿ ಉದ್ದ ಮತ್ತು 25 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದ್ದು, ಪ್ರದರ್ಶನದ ಮುಖ್ಯ ಆಕರ್ಷಣೆಯಾಗಿದೆ.

ಇಲ್ಲಿನ ಜೂನಿಯರ್‌ ಕಾಲೇಜು ಮೈದಾನದಲ್ಲಿ ಶನಿವಾರ ಗಣರಾ ಜ್ಯೋತ್ಸವದ ದಿನ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಶಾಸಕಿ ಅನಿತಾರಿಂದ ಉದ್ಘಾಟನೆಯಾದ ಈ ಪ್ರದರ್ಶನವನ್ನು ಈಗಾಗಲೇ ಸಾವಿರಾರು ಜಿಲ್ಲೆಯ ಜನರು ಕಣ್ತುಂಬಿಕೊಂಡಿದ್ದಾರೆ.

ಹೂಗಳಿಂದಲೇ ನಿರ್ಮಾಣವಾಗಿರುವ ಆಳೆತ್ತರದ ಅವಳಿ ‘ಬನ್ನಿ’ (ಕಾಮಿಕ್ಸ್‌ನ ಪ್ರಸಿದ್ಧ ಪ್ರಾಣಿ) ಪ್ರಾಣಿಗಳು ಚಿಣ್ಣರ‌ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಸೇವಂತಿಗೆ ಹೂಗಳಿಂದ ರಚನೆಯಾಗಿದ್ದ 10 ಅಡಿ ಎತ್ತರದ ಡಾಲ್ಫಿನ್‌ ಕೂಡ ಮಕ್ಕಳನ್ನು ಆಕರ್ಷಿಸುತ್ತಿದೆ. ಹಳದಿ ಹೂಗಳಿಂದ ರಚನೆಯಾಗಿದ್ದ ಅನಾನಸ್‌ ಮಕ್ಕಳ ಬಾಯಲ್ಲಿ ನೀರೂರಿಸುತ್ತಿದೆ.

ಗುಲಾಬಿ ಹೃದಯ: ಯುವಕ, ಯುವತಿಯರನ್ನು ಅತಿಯಾಗಿ ಸೆಳೆಯುತ್ತಿ ರುವುದು ಸಂಪೂರ್ಣ ಗುಲಾಬಿ ಹೂಗಳಿಂದಲೇ ನಿರ್ಮಾಣವಾಗಿರುವ ಮಾನವನ ಹೃದಯ. ಕಡುಕೆಂಪು ಬಣ್ಣದ ಗುಲಾಬಿ ಹೂಗಳ ಹೃದಯದ ಮುಂಭಾಗ ನಿಂತು ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾ ನ್ಯವಾಗಿತ್ತು. ಇಕೆಬಾನ – ಹೂಗಳನ್ನು ಬಗೆಬಗೆಯ ರೀತಿಯಲ್ಲಿ ಪ್ರದರ್ಶಿ ಸುವ ಜಪಾನಿಯರ ಕಲೆ, ಫ‌ಲಪುಷ್ಪ ಪ್ರದರ್ಶನದಲ್ಲೂ ಇಕೆಬಾನ ಪ್ರದರ್ಶನ ಇದೆ.

Advertisement

ಸುಗ್ಗಿ ಉತ್ಸವ: ಫ‌ಲಪುಷ್ಪ ಪ್ರದರ್ಶನದ ವೇಳೆ ಸುಗ್ಗಿ ಉತ್ಸವವನ್ನು ಆಚರಿಸಬೇಕು ಎಂದು ರೈತರ ಸಂಘ, ತೋಟಗಾರಿಕೆ ಸಂಘಗಳ ಆಗ್ರಹಿಸಿದ್ದರಿಂದ ಈ ಬಾರಿ ಸುಗ್ಗಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಸಿರಿ ಧಾನ್ಯಗಳನ್ನು ಒಳಗೊಂಡ ರಾಶಿ ಪಾರಂಪರಿಕ ದೃಶ್ಯವನ್ನು ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳು ಕಟ್ಟಿ ಕೊಟ್ಟಿವೆ.

ಮಾಹಿತಿಯ ಕಣಜ!: ಫ‌ಲಪುಷ್ಪ ಪ್ರದರ್ಶನ ಕೇವಲ ಆಕರ್ಷಣೆಯ ಮೂಲವಾಗಿರದೆ, ಮಾಹಿತಿಯ ಕಣಜವೂ ಆಗಿತ್ತು. ವರ್ಟಿಕಲ್‌ ಗಾರ್ಡನ್‌ ಮಾದರಿ ಪ್ರದರ್ಶನವಾಗಿತ್ತು. ಈ ಬಗ್ಗೆ ಆಸಕ್ತ ನಾಗರಿಕರಿಗೆ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಅಗತ್ಯ ಮಾಹಿತಿ ಕೊಟ್ಟರು.

ಮೀನುಗಾರಿಕೆ ಇಲಾಖೆ ಕೂಡ ಕೃತಕವಾಗಿ ನಿರ್ಮಾಣವಾಗಿದ್ದ ಕೊಳದಲ್ಲಿ ಬಗೆಬಗೆಯ ಮೀನುಗಳನ್ನು ಬಿಟ್ಟಿತ್ತು ಮೀನು ಸಾಕಾಣಿಕೆಯ ಬಗ್ಗೆ ಅಧಿಕಾರಿಗಳು ಆಸಕ್ತರಿಗೆ ಮಾಹಿತಿ ಕೊಟ್ಟರು. ದೇಶಿ ತಳಿಗಳ ಹಸು ಗಳು, ಕುರಿಗಳು ಪ್ರದರ್ಶನದಲ್ಲಿದ್ದವು. ಕಾಲು-ಬಾಯಿ ಜ್ವರ ಸೇರಿದಂತೆ ಜಾನುವಾರುಗಳು, ಸಾಕು ಪ್ರಾಣಿಗಳ ಆರೋಗ್ಯ ಕಾಪಾಡಿಕೊಳ್ಳಲು ಪಶು ಇಲಾಖೆಯ ಸಿಬ್ಬಂದಿ ಅಗತ್ಯ ಮಾಹಿತಿ ಕೊಟ್ಟರು.

ಅರಣ್ಯ ಸಂರಕ್ಷಣೆಯ ಮಹತ್ವ ಸಾರುವ ಪ್ರದರ್ಶನವನ್ನು ಅರಣ್ಯ ಇಲಾಖೆ ಏರ್ಪಡಿಸಿತ್ತು. ಸರ್ಕಾರದ ಸಾಧನೆಗಳ ಬಗ್ಗೆ ಮಾಹಿತಿ ನೀಡುವ ಮಳಿಗೆಯನ್ನು ವಾರ್ತಾ ಇಲಾಖೆ ಸ್ಥಾಪಿಸಿತ್ತು. ರೈತರಿಗೆ ಉಪಯುಕ್ತವಾಗಿರುವ ಅನೇಕ ಮಳಿಗೆಗಳು ಪ್ರದರ್ಶನದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next