Advertisement

“ಆ್ಯಪ್‌’ನೋಡಿ, ಕಾರ್ಮಿಕರಿಗೆ ಕೆಲಸ ಕೊಡಿ

09:48 AM Dec 24, 2019 | Lakshmi GovindaRaj |

ಬಳ್ಳಾರಿ: ಅಸಂಘಟಿತ ಕಾರ್ಮಿಕರ ಅಭ್ಯುದಯಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಕಾರ್ಮಿಕ ಇಲಾಖೆ, ಇದೀಗ ಮತ್ತೂಂದು ಹೊಸ ಹೆಜ್ಜೆ ಇಟ್ಟಿದೆ. ಅಸಂಘಟಿತ ಕಾರ್ಮಿಕರ ಸಂಪೂರ್ಣ ಮಾಹಿತಿಯುಳ್ಳ “ಆ್ಯಪ್‌’ ಸಿದ್ಧಪಡಿಸಿ, ಕಾರ್ಮಿಕರ ಅಗತ್ಯವುಳ್ಳವರು ನೇರವಾಗಿ ಅವರನ್ನು ಸಂಪರ್ಕಿಸಿ ಕೆಲಸ ನೀಡುವ ಅವಕಾಶ ಕಲ್ಪಿಸಿದೆ.

Advertisement

ಕಾರ್ಮಿಕರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲರನ್ನಾಗಿಸಲು ಈಗಾಗಲೇ ಹಲವು ಯೋಜನೆಗಳು ಜಾರಿಯಲ್ಲಿವೆ. ಕಟ್ಟಡ, ಕಾರ್ಪೇಂಟರ್‌, ಪ್ಲಂಬರ್‌, ಸೆಂಟರಿಂಗ್‌, ಇಲೆಕ್ಟ್ರಿಷಿಯನ್‌ ಸೇರಿ ಇತರ ಅಸಂಘಟಿತ ವಲಯದ ಕಾರ್ಮಿಕರು ಇಲಾಖೆಯಲ್ಲಿ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಈ ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪರಿಣಿತಿ ಹೊಂದಿರುವ ಕಾರ್ಮಿಕರ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಸೇರಿ ಇನ್ನಿತರ ಮಾಹಿತಿಯುಳ್ಳ ಪ್ರತ್ಯೇಕ “ಆ್ಯಪ್‌’ ಸಿದ್ಧಪಡಿಸಲು ಇಲಾಖೆ ಮುಂದಾಗಿದೆ.

ಸಾರ್ವಜನಿಕರ ಬಳಕೆಗೆ ಅನುಕೂಲವಾಗುವಂತೆ ಈ “ಆ್ಯಪ್‌’ ಸಿದ್ಧಪಡಿಸಲಾಗುತ್ತಿದ್ದು, ಇದರ ಮೂಲಕ ಕಟ್ಟಡ ನಿರ್ಮಾಣ ಹಾಗೂ ಅದಕ್ಕೆ ಸಂಬಂಧಿಸಿದ ಯಾವುದೇ ಕೆಲಸಗಳಿದ್ದರೂ, ಅಂತಹ ಕಾರ್ಮಿಕರನ್ನು ಸಂಪರ್ಕಿಸಿ ಕೆಲಸ ವಹಿಸಬಹುದಾಗಿದೆ. ಇದರಿಂದ ಕಾರ್ಮಿಕರಿಗೆ ಉದ್ಯೋಗ ಲಭಿಸುವುದರ ಜತೆಗೆ ಸಾರ್ವಜನಿಕರಿಗೂ ಅನುಕೂಲವಾಗಲಿದೆ.

ಈ ಬಗ್ಗೆ ಇಲಾಖೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, “ಆ್ಯಪ್‌’ ಸಿದ್ಧಪಡಿಸುವ ಜವಾಬ್ದಾರಿಯನ್ನು ಕಿಯೋನಿಕ್ಸ್‌ ಸಂಸ್ಥೆಗೆ ವಹಿಸಿದೆ. ಒಂದು ವೇಳೆ, “ಆ್ಯಪ್‌’ನಲ್ಲಿನ ಮಾಹಿತಿಯನ್ನಾಧರಿಸಿ ಕಾರ್ಮಿಕರಿಗೆ ಕೆಲಸ ನೀಡಿದ ನಂತರ ಏನಾದರೂ ಸಮಸ್ಯೆ ಎದುರಾದರೂ ಸಹ ಕಾರ್ಮಿಕರಿಗೆ ಸಂಬಂಧಿ ಸಿದ ಎಲ್ಲ ಮಾಹಿತಿಯೂ ಇಲಾಖೆಯಲ್ಲಿ ಲಭ್ಯವಿರಲಿದೆ ಎನ್ನುತ್ತಾರೆ ಇಲಾಖೆ ಸಿಬ್ಬಂದಿ.

ಲಭ್ಯ ಕಾರ್ಮಿಕರು: ರಾಜ್ಯ ಸರ್ಕಾರವು ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗಿರುವ 43 ವಲಯ ಕಾರ್ಮಿಕರನ್ನು ಸಂಘಟಿತ ವಲಯವೆಂದು ಗುರುತಿಸಿದೆ. ಈ ಪೈಕಿ 12 ಅಸಂಘಟಿತ ವಲಯಗಳಾದ ಹಮಾಲರು, ಮನೆಗೆಲಸ ದವರು, ಚಿಂದಿ ಆಯುವವರು, ಟೇಲರ್, ಮೆಕ್ಯಾನಿಕ್‌, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಖಾಸಗಿ ವಾಣಿಜ್ಯ ಚಾಲಕರನ್ನು ನೋಂದಾಯಿಸಿ ಸ್ಮಾರ್ಟ್‌ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ.

Advertisement

ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗುವ ಪೇಂಟರ್‌, ಪ್ಲಂಬರ್‌, ಕಾರ್ಪೇಂಟರ್‌, ಸೆಂಟರಿಂಗ್‌ ಕೆಲಸಗಾರರು, ಕಟ್ಟಡ ನಿರ್ಮಾಣ ಕೆಲಸಗಾರರು, ಇಲೆಕ್ಟ್ರಿಷಿಯನ್ಸ್‌ ಇತ್ಯಾದಿ ಕಾರ್ಮಿಕರು ಅಸಂಘಟಿತ ವಲಯದ ವ್ಯಾಪ್ತಿಗೆ ಬರಲಿದ್ದಾರೆ. ಈ ವಲಯಗಳಲ್ಲಿನ ಅನುಭವಿ, ಕುಶಲತೆಯುಳ್ಳ ಕಾರ್ಮಿಕರ ವಿವರ ಹೊಸ “ಆ್ಯಪ್‌’ನಲ್ಲಿ ಸಿಗಲಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಶೀಘ್ರದಲ್ಲೇ ಈ “ಆ್ಯಪ್‌’ ಸಾರ್ವಜನಿಕರಿಗೆ ಸಿಗಲಿದೆ.

ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಇಲಾಖೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಅವರಿಗೆ ಉದ್ಯೋಗ ಭದ್ರತೆ ಕಲ್ಪಿಸುವ ಸಲುವಾಗಿ ಪ್ರತ್ಯೇಕ “ಆ್ಯಪ್‌’ ಸಿದ್ಧಪಡಿಸಲಾಗುತ್ತಿದೆ. ಸಾರ್ವಜನಿಕರು “ಆ್ಯಪ್‌’ ಬಳಸಿ ಅನುಭವ, ಕುಶಲತೆಯುಳ್ಳ ಕಾರ್ಮಿಕರ ಸೇವೆಯನ್ನು ಸದುಪಯೋಗಪಡಿಸಿ ಕೊಳ್ಳುವ ಮೂಲಕ ಅವರಿಗೆ ಉದ್ಯೋಗ ಅವಕಾಶ ಕಲ್ಪಿಸುವಂತಾಗಬೇಕು.
-ಎಲ್‌.ಎಸ್‌.ಶ್ರೀಕಂಠಬಾಬು, ಉಪಕಾರ್ಯದರ್ಶಿ, ಕಾರ್ಮಿಕ ಇಲಾಖೆ

* ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next