Advertisement

ಲಾಂಗ್‌ ಬೀಸಿದ ಸರಗಳ್ಳನಿಗೆ ಗುಂಡೇಟು

12:19 PM Sep 04, 2018 | |

ಬೆಂಗಳೂರು: ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಸರಗಳವು ಮಾಡುತ್ತಿದ್ದ, ಪ್ರತಿರೋಧ ತೋರಿದರೆ ಡ್ರ್ಯಾಗರ್‌ನಿಂದ ಇರಿಯುತ್ತಿದ್ದ ಸರಗಳ್ಳ ಸೈಯದ್‌ ಸುಹೇಲ್‌ಗೆ (22) ಬಾಣಸವಾಡಿ ಪೊಲೀಸರು ಗುಂಡೇಟಿನ ರುಚಿ ತೋರಿಸಿ ಬಂಧಿಸಿದ್ದಾರೆ.

Advertisement

ಬಾಣಸವಾಡಿಯ ಅಗ್ನಿಶಾಮಕ ದಳದ ಕಚೇರಿ ಸಮೀಪ ಭಾನುವಾರ ತಡರಾತ್ರಿ 2.30ರ ಸುಮಾರಿಗೆ ಡಿಯೋ ಸ್ಕೂಟರ್‌ನಲ್ಲಿ ಕುಳಿದು ದರೋಡೆಗೆ ಹೊಂಚು ಹಾಕುತ್ತಿದ್ದ ಸುಹೈಲ್‌ನನ್ನು ಬಾಣಸವಾಡಿ ಠಾಣೆ ಪಿಎಸ್‌ಐ ಶರತ್‌ಕುಮಾರ್‌ ಹಾಗೂ ಮುಖ್ಯ ಪೇದೆ ರಫೀಕ್‌ ಬಂಧಿಸಲು ಮುಂದಾಗಿದ್ದರು. ಈ ವೇಳೆ  ಆರೋಪಿಯು ಪಿಎಸ್‌ಐ, ಪೇದೆ ಮೇಲೆ ಲಾಂಗ್‌ ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಈ ವೇಳೆ ಇನ್ಸ್‌ಪೆಕ್ಟರ್‌ ಮುನಿರಾಜು, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ಆರೋಪಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ, ಇದಕ್ಕೊಪ್ಪದ ಸುಹೈಲ್‌ ಮತ್ತೆ ಹಲ್ಲೆಗೆ ಯತ್ನಿಸಿದಾಗ ಪ್ರಾಣ ರಕ್ಷಣೆಗಾಗಿ ಇನ್ಸ್‌ಪೆಕ್ಟರ್‌, ಆರೋಪಿಯ ಎರಡೂ ಕಾಲುಗಳಿಗೆ ಒಂದೊಂದು ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಕುಸಿದು ಬಿದ್ದ ಆರೋಪಿಯನ್ನು ಬಂಧಿಸಿ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಸುಹೈಲ್‌ನಿಂದ ಹಲ್ಲೆಗೊಳಗಾದ ಪಿಎಸ್‌ಐ ಶರತ್‌ ಹಾಗೂ ಪೇದೆ ರಫೀಕ್‌ ಪ್ರಾಣಾಯದಿಂದ ಪಾರಾಗಿದ್ದು, ಅವರಿಗೂ ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದರೆ.

15 ಪ್ರಕರಣಗಳಲ್ಲಿ ಭಾಗಿ!: ಡಿ.ಜೆ.ಹಳ್ಳಿ ಮೋದಿ ರೋಡ್‌ ಅಕ್ಕಪಕ್ಕ ಸರಗಳವು ಮಾಡುವ ತಂಡದವನಾದ ಸುಹೈಲ್‌, ಕಳೆದ ನಾಲ್ಕು ವರ್ಷಗಳಿಂದ ಸರಗಳವು ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದಾನೆ. ಈತನ ವಿರುದ್ಧ ಡಿ.ಜೆ.ಹಳ್ಳಿ, ಜೆ.ಪಿ.ನಗರ, ಆರ್‌.ಟಿ.ನಗರ ಸೇರಿದಂತೆ ಹಲವು ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ 15 ಸರಗಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.

Advertisement

ಬಹುತೇಕ ವಾರಾಂತ್ಯದ ದಿನಗಳಲ್ಲೇ ಸರಗಳವು ನಡೆಸಡುತ್ತಿದ್ದ ಆರೋಪಿ, ಮುಂಜಾನೆ ನಡೆದುಕೊಂಡು ಹೋಗುವ ಹಿರಿಯರನ್ನು ಟಾರ್ಗೆಟ್‌ ಮಾಡಿಕೊಂಡು, ಚಿನ್ನಾಭರಣ ಕಿತ್ತುಕೊಂಡು ಹೋಗುತ್ತಿದ್ದª. ಒಂದು ವೇಳೆ ಅವರು ವಿರೋಧಿಸಿದರೆ ಡ್ರ್ಯಾಗರ್‌ನಿಂದ ಇರಿಯುತ್ತಿದ್ದ. ಕಳೆದ ಮೇ 16ರಂದು ಎಚ್‌ಆರ್‌ಬಿಆರ್‌ ಲೇಔಟ್‌ನಲ್ಲಿ ಮುಂಜಾನೆ 5.30ರ ಸುಮಾರಿಗೆ 63 ವರ್ಷದ ಚಂದ್ರಶೇಖರಯ್ಯ ಎಂಬುವವರು ವಾಕಿಂಗ್‌ ಹೋಗುವಾಗ ಅಡ್ಡಗಟ್ಟಿದ್ದ

ಸುಹೈಲ್‌ ಹಾಗೂ ಇನ್ನಿಬ್ಬರು ಆರೋಪಿಗಳು, ಚಂದ್ರಶೇಖರಯ್ಯ ಅವರ ಕತ್ತಿನಲ್ಲಿದ್ದ ಸರ ಹಾಗೂ ಉಂಗುರ ಬಿಚ್ಚಿಕೊಡುವಂತೆ ಬೆದರಿಸಿದ್ದರು. ಇದಕ್ಕೆ ಪ್ರತಿರೋಧ ತೋರಿದ ಚಂದ್ರಶೇಖರಯ್ಯ ಅವರ ಹೊಟ್ಟೆಗೆ ಡ್ರ್ಯಾಗರ್‌ನಿಂದ ಇರಿದು ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದರು. ಪರಿಣಾಮ ಚಂದ್ರಶೇಖರಯ್ಯ ಅವರ ಕರುಳು ಹೊರಬಂದಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವೀಕೆಂಡ್‌ ಸರಚೋರ, ಮೋಜಿನ ಜೀವನ: ಆರೋಪಿ ಸುಹೈಲ್‌ ಹಾಗೂ ಡಿ.ಜೆ.ಹಳ್ಳಿಯ ಇನ್ನಿತರೆ ಸರಗಳವು ಆರೋಪಿಗಳು ಬಹುತೇಕ ವಾರಾಂತ್ಯದ ದಿನಗಳಲ್ಲೇ ಕೃತ್ಯ ಎಸಗುತ್ತಿದ್ದರು. ಉಳಿದ ದಿನಗಳಲ್ಲಿ ಕದ್ದ ಆಭರಣಗಳನ್ನು ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದರು. ಸುಹೈಲ್‌ ಕೂಡ ಮುಂಜಾನೆ ಅಥವಾ ಸಂಜೆ ವಾಕಿಂಗ್‌ ಹೋಗುವ ವೃದ್ಧರನ್ನು ಗುರಿಯಾಗಿಸಿಕೊಂಡು ಸರಗಳವು ಮಾಡುತ್ತಿದ್ದ. ಸುಲಿಗೆ ಕೃತ್ಯಕ್ಕೆ ಒಳಗಾಗುವವರನ್ನು ಬೆದರಿಸಲು ಲಾಂಗ್‌, ಡ್ರ್ಯಾಗರ್‌, ಬ್ಲೇಡ್‌ಗಳನ್ನು ಜತೆಯಲ್ಲಿಯೇ ಇಟ್ಟುಕೊಳ್ಳುತ್ತಿದ್ದ.

ಕುಟುಂಬ ಸದಸ್ಯರ ಸಾಥ್‌: ಸರಗಳವು ಪ್ರಕರಣಗಳಲ್ಲಿ ಈ ಹಿಂದೆ ಹಲವು ಬಾರಿ ಜೈಲಿಗೆ ಹೋಗಿರುವ ಸುಹೈಲ್‌, ಜಾಮೀನು ಪಡೆದು ಹೊರಬಂದು ಮತ್ತದೇ ಕೃತ್ಯ ಮುಂದುವರಿಸುತ್ತಿದ್ದ. ಈತನ ಕೃತ್ಯಕ್ಕೆ ಕುಟುಂಬಸ್ಥರು ಸಾಥ್‌ ನೀಡುವುದಲ್ಲದೆ ಬಂಧನವಾದ ಕೂಡಲೇ ಪೊಲೀಸ್‌ ಠಾಣೆಗಳ ಮುಂದೆ ಬಂದು ಗಲಾಟೆ ಮಾಡುವ ಚಾಳಿ ಹೊಂದಿದ್ದಾರೆ ಎಂದು ಅಧಿಕಾರಿ ವಿವರಿಸಿದರು.

9 ತಿಂಗಳಲ್ಲಿ 16 ಫೈರಿಂಗ್‌: ರಾಜಧಾನಿ ಪೊಲೀಸರು ಕಳೆದ ಜನವರಿಯಿಂದ 16 ಪ್ರಕರಣಗಳಲ್ಲಿ ದರೊಡೆ, ಸರಗಳವು, ಮಾದಕ ವಸ್ತು ಮಾರಾಟ, ಕೊಲೆಯತ್ನ ಸೇರಿ ಇನ್ನಿತರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಬಂದೂಕಿನ ಮೂಲಕ ಪಾಠ ಹೇಳಿದ್ದಾರೆ. ಮಧ್ಯಪ್ರದೇಶದ ಭಿಲ್‌ ಗ್ಯಾಂಗ್‌,  ಕುಖ್ಯಾತ ಬವೇರಿಯಾ ಗ್ಯಾಂಗ್‌, ಮೋಸ್ಟ್‌ ವಾಂಟೆಂಡ್‌ ಸರಚೋರ ಅಚ್ಯುತ್‌ ಕುಮಾರ್‌ಗೆ ಗುಂಡೇಟಿನ ರುವಿ ತೋರಿಸಿಯೇ ಬಂಧಿಸಿದ್ದಾರೆ. ಈ ಪೈಕಿ ಮೂರು ಪ್ರಕರಣಗಳಲ್ಲಿ ಸರಗಳವು ಆರೋಪಿಗಳೂ ಸೇರಿದ್ದಾರೆ.

ಆರೋಪಿ ಸುಹೈಲ್‌ ಸರಗಳವು ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದಾನೆ. ಈಗಾಗಲೇ 10ಕ್ಕೂ ಹೆಚ್ಚು ಪ್ರಕರಗಳು ಬೆಳಕಿಗೆ ಬಂದಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು. 
-ಅಜಯ್‌ ಹಿಲೋರಿ, ಪೂರ್ವ ವಿಭಾಗದ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next