ಸ್ವತಂತ್ರ ಭಾರತದಲ್ಲಿ ಸುಧೀರ್ಘ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯವೂ ಅಷ್ಟೇ ಪುರಾತನವಾದುದು. ಜವಾಹರಲಾಲ್ ನೆಹರು ಅವರಿಂದ ಇತ್ತೀಚಿನ ರಾಹುಲ್ ಗಾಂಧಿ ವರೆಗೆ ಎಲ್ಲರೂ ಬಂಡಾಯದ ಬಿಸಿ ಅನುಭವಿಸಿದವರೇ. ಸದ್ಯ ರಾಜಸ್ಥಾನದ ರಾಜಕೀಯದಲ್ಲಿ ಆರಂಭವಾಗಿರುವ ಅಸಮಧಾನದ ಕಾರಣದಿಂದ ಕಾಂಗ್ರೆಸ್ ನ ಬಂಡಾಯದ ಹಿನ್ನಲೆ ಗಮನಿಸಿದಾಗ ಕಂಡು ಬರುವುದಿಷ್ಟು.
ಭಾರತ ಸ್ವತಂತ್ರವಾದಾಗ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ನಲ್ಲಿ ದಿಗ್ಗಜರೇ ತುಂಬಿದ್ದರು. ಆದರೆ ಪಕ್ಷದಲ್ಲಿ ಆಗಲೇ ಬಂಡಾಯದ ಹೊಗೆ ತಣ್ಣನೇ ಆರಂಭವಾಗಿತ್ತು. ಮೊದಲ ಪ್ರಧಾನಿಯಾಗಿದ್ದ ನೆಹರು ಅವರು ಮಹಾತ್ಮ ಗಾಂಧಿಯವರ ತತ್ವಗಳನ್ನು ಮರೆತು ಅಧಿಕಾರ ನಡೆಸುತ್ತಿದ್ದಾರೆಂದು ಜಯಪ್ರಕಾಶ್ ನಾರಾಯಣ್ ( ಜೆಪಿ), ವಿನೋಬಾ ಭಾವೆ, ಆಚಾರ್ಯ ನರೇಂದ್ರ ದೇವ್ ಮತ್ತು ಜೆಬಿ ಕೃಪಲಾನಿ ಸೇರಿದಂತೆ ಹಲವು ಕಾಂಗ್ರೆಸ್ ತೊರೆದು ಹೊಸ ಪಕ್ಷ ಕಟ್ಟಿದರು. ಅದುವೇ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ. ಇದು ಸ್ವಾತಂತ್ರೋತ್ತರದ ಮೊದಲ ಕಾಂಗ್ರೆಸ್ ಬಂಡಾಯ.
ನೆಹರು ಸಾವಿನ ನಂತರ ಕಾಂಗ್ರೆಸ್ ನಲ್ಲಿ ನಾಯಕತ್ವದ ಸಮಸ್ಯೆ ತಲೆದೋರಿತ್ತು. ಆಗ ಮುಂಚೂಣಿಗೆ ಬಂದವರು ನೆಹರು ಪುತ್ರಿ ಇಂದಿರಾ ಗಾಂಧಿ. ಇಂದಿರಾ ಗದ್ದುಗೆ ಏರುತ್ತಿದ್ದಂತೆ ಕಾಂಗ್ರೆಸ್ ಹಿರಿಯ ನಾಯಕರಿಗೆ ಇರುಸು ಮುರುಸು ಆರಂಭವಾಗಿತ್ತು. ನೆಹರು ಕ್ಯಾಬಿನೆಟ್ ನಲ್ಲಿ ಸಚಿವರಾಗಿದ್ದ ಜಗಜೀವನ್ ರಾಮ್ ( ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರ ತಂದೆ) ಅವರು ಪಕ್ಷ ತೊರೆದರು. ಇದಾದ ನಂತರ ಮತ್ತೊಬ್ಬ ಹಿರಿಯ ನಾಯಕ ಮೊರಾರ್ಜಿ ದೇಸಾಯಿ ಅವರು ಇಂದಿರಾ ವಿರುದ್ದ ತಿರುಗಿ ನಿಂತರು. 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾಯಿತು. ಒಂದು ಇಂದಿರಾ ಬಣವಾದರೆ ಮತ್ತೊಂದು ಕೆ ಕಾಮರಾಜ್ ನೇತೃತ್ವದ ಬಣ.
ಜೆಪಿ ನಾರಾಯಣ್ ನೇತೃತ್ವದಲ್ಲಿ ದೇಶದಲ್ಲಿ ದೊಡ್ಡ ಚಳುವಳಿಯೇ ಆರಂಭವಾದಾಗ 1975ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದರು. ಈ ಹಿಂದೆ ಕಾಂಗ್ರೆಸ್ ನಲ್ಲಿದ್ದ ಕೆಲವು ನಾಯಕರು 1977ರಲ್ಲಿ ಜೆಪಿ ಜೊತೆಗೆ ಸೇರಿಕೊಂಡು ಜನತಾ ಪಾರ್ಟಿ ಕಟ್ಟಿದರು. ನಂತರ ನಡೆದ ಚುನಾವಣೆಯಲ್ಲಿ ಜನತಾ ಪಾರ್ಟಿಯು ಇಂದಿರಾ ಕಾಂಗ್ರೆಸ್ ಅನ್ನು ಸೋಲಿಸಿ ವಿಜಯಿಯಾಯಿತು. ಮೊರಾರ್ಜಿ ದೇಸಾಯಿ ಪ್ರಧಾನಿಯಾದರೆ, ಜಗಜೀವನ್ ರಾಮ್ ಉಪಪ್ರಧಾನಿಯಾದರು.
1984ರಲ್ಲಿ ಇಂದಿರಾ ಗಾಂಧಿ ಹತ್ಯೆ ನಂತರ ಉಂಟಾದ ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತು. 400ಕ್ಕೂ ಹೆಚ್ಚು ಸ್ಥಾನ ಗೆದ್ದು ರಾಜೀವ್ ಗಾಂಧಿ ಪ್ರಧಾನಿಯಾದರು.
ರಾಜೀವ್ ಗಾಂಧಿ ಕಾಲದಲ್ಲಿ..
ರಾಜೀವ್ ಗಾಂಧಿ ಪ್ರಧಾನಿಯಾಗುತ್ತಿದ್ದಂತೆ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಅಸಮಧಾನದ ದಳ್ಳುರಿ ಆರಂಭವಾಗಿತ್ತು. ರಾಜೀವ್ ವಿರೋಧಿಯೆಂದೇ ಪರಿಗಣಿಸಲ್ಪಟ್ಟಿದ್ದ ಪ್ರಣಬ್ ಮುಖರ್ಜಿ ಅವರು ಪಕ್ಷ ತೊರೆದು ಪಶ್ಚಿಮ ಬಂಗಾಳದಲ್ಲಿ ಸ್ವಂತ ಪಕ್ಷವೊಂದನ್ನು ಕಟ್ಟಿದರು. ಆದರೆ ನಂತರ 1989ರಲ್ಲಿ ಮತ್ತೆ ಕಾಂಗ್ರೆಸ್ ಸೇರಿದರು.
ರಾಜೀವ್ ಗಾಂಧಿ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದ ಆಗಿನ ರಕ್ಷಣಾ ಸಚಿವ ವಿಪಿ ಸಿಂಗ್ 1987ರಲ್ಲಿ ಬಂಡಾಯವೆದ್ದರು. ರಾಜೀವ್ ಕ್ಯಾಬಿನೆಟ್ ನಲ್ಲಿ ಹಣಕಾಸು ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದ ವಿಪಿ ಸಿಂಗ್ ಅವರು ಬೋಫೋರ್ಸ್ ಹಗರಣ ಹೊರಬರುತ್ತಲೇ ಪಕ್ಷದ ಪ್ರಮುಖರಾದ ಅರುಣ್ ನೆಹರು, ಆರಿಫ್ ಮೊಹಮ್ಮದ್ ಖಾನ್ ಜೊತೆ ಸೇರಿಕೊಂಡು ಪಕ್ಷ ತೊರೆದರು. ಜನತಾ ಪರಿವಾರ ಸೇರಿಕೊಂಡ ಅವರ ಜೊತೆ ಮತ್ತೊಬ್ಬ ಕಾಂಗ್ರೆಸ್ ನಿಂದ ಹೊರಬಂದ ಚಂದ್ರಶೇಖರ್ ಕೂಡಾ ಸೇರಿದರು.
1989ರಲ್ಲಿ ಪ್ರಧಾನಿಯಾದ ವಿಪಿ ಸಿಂಗ್ ಅವರ ಗುಂಪಿನಲ್ಲೇ ಬಂಡಾಯ ಆರಂಭವಾಯಿತು. ಈ ಸಮಯದಲ್ಲಿ ಹಲವರು ತಮ್ಮ ತಮ್ಮ ಪ್ರಾದೇಶಿಕ ಪಕ್ಷಗಳನ್ನು ರಚಿಸಿಕೊಂಡರು. ರಾಜೀವ್ ಗಾಂಧಿ ಹತ್ಯೆ ಯ ನಂತರ ಮತ್ತೆ ಕಾಂಗ್ರೆಸ್ 1991ರಲ್ಲಿ ಅಧಿಕಾರಕ್ಕೆ ಏರಿತು. ಈ ಕಾಲದಲ್ಲಿ ಪ್ರಧಾನಿಯಾದವರು ನರಸಿಂಹ ರಾವ್.
ಪ್ರಧಾನಿ ಪಟ್ಟಕ್ಕೆ ಪ್ರಮುಖ ಆಕಾಂಕ್ಷಿಗಳಾಗಿದ್ದ ಶರದ್ ಪವಾರ್, ನಾರಾಯಣ ದತ್ ರನ್ನು ಹಿಂದಿಕ್ಕಿ ಪ್ರಧಾನಿಯಾದವರು ನರಸಿಂಹ ರಾವ್.ಈ ಸಮಯದಲ್ಲಿ ಪಕ್ಷ ತೊರೆದವರು ನಾರಾಯಣ್ ತಿವಾರಿ, ಮಾಧವರಾವ್ ಸಿಂಧ್ಯಾ ಮತ್ತು ಅರ್ಜುನ್ ಸಿಂಗ್. ರಾವ್ ಕ್ಯಾಬಿನೆಟ್ ನಲ್ಲಿ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಅದಾಗಲೇ ಬಂಗಾಳದಲ್ಲಿ ಸ್ವತಂತ್ರ ಹಾದಿಯನ್ನು ಕಂಡುಕೊಳ್ಳುತ್ತಿದ್ದರು. ಸಚಿವ ಸ್ಥಾನ ತೊರೆದ ಅವರು 1998ರಲ್ಲಿ ಸೋನಿಯಾ ಗಾಂಧಿ ಮುನ್ನಲೆಗೆ ಬರುತ್ತಿದ್ದಂತೆ ಪಕ್ಷ ತೊರೆದು ತೃಣಮೂಲ ಕಾಂಗ್ರೆಸ್ ಕಟ್ಟಿದರು. ಈಗ ಪ. ಬಂಗಾಳದಲ್ಲಿ ಮುಖ್ಯಮಂತ್ರಿಯೂ ಆಗಿದ್ದಾರೆ.
ಸೋನಿಯಾ – ರಾಹುಲ್ ಕಾಲದಲ್ಲಿ
1997ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಸೋನಿಯಾ ಕೆಲವೇ ತಿಂಗಳಲ್ಲಿ ಪಕ್ಷದ ಅಧ್ಯಕ್ಷೆಯಾದರು. ಆಗ ಆರಂಭವಾಗಿತ್ತು ಮತ್ತೊಂದು ಸುತ್ತಿನ ಬಂಡಾಯ. ಶರದ್ ಪವಾರ್, ಪಿ ಸಂಗ್ಮಾ ಮತ್ತು ತರೀಖ್ ಅನ್ವರ್ ಪಕ್ಷ ತೊರೆದು ಎನ್ ಸಿ ಪಿ ಕಟ್ಟಿದರು. 1991ರಲ್ಲಿ ಪ್ರಧಾನಿ ಹುದ್ದೆ ತಪ್ಪಿದ ಅಸಮಧಾನದಲ್ಲಿ ಪಕ್ಷ ತೊರೆದ ಪವಾರ್ ಸದ್ಯ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಸೇರಿದ್ದಾರೆ.
2009ರಲ್ಲಿ ಆಂಧ್ರ ಕಾಂಗ್ರೆಸ್ ಮುಖಂಡರಾಗಿದ್ದ ವೈ ಎಸ್ ರಾಜಶೇಖರ ರೆಡ್ಡಿ ನಿಧನದ ನಂತರ ಮಗ ಜಗನ್ ಮುಖ್ಯಮಂತ್ರಿಯಾಗುವ ಇಚ್ಛೆ ಹೊಂದಿದ್ದರು. ಆದರೆ ಅದಕ್ಕೆ ಅವಕಾಶ ಕೊಡದ ಸೋನಿಯಾ, ರಾಹುಲ್ ವಿರುದ್ಧ ಜಗನ್ ಸಿಡಿದರು. ನೂತನ ಪಕ್ಷ ಕಟ್ಟಿ ಈಗ ಆಂಧ್ರದ ಮುಖ್ಯಮಂತ್ರಿಯಾಗಿದ್ದಾರೆ.
ನಂತರ ಅಸ್ಸಾಂ ನಲ್ಲಿ ಹಿಮಂತ ಬಿಸ್ವಾ , ಅರುಣಾಚಲ ಪ್ರದೇಶದಲ್ಲಿ ಪೆಮಾ ಖಂಡು, ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷ ತೊರೆದಿದ್ದಾರೆ. ಈಗ ರಾಜಸ್ಥಾನದಲ್ಲಿ ಪಕ್ಷದ ನಾಯಕತ್ವದ ವಿರುದ್ಧ ಸಚಿನ್ ಪೈಲಟ್ ದಂಗೆ ಎದ್ದಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿದೆ.