Advertisement

ಲಂಡನ್‌ನಲ್ಲಿ ಕಾಫಿ ಕುಡಿದು ಸಂಚರಿಸುತ್ತೆ ಬಸ್‌!

06:00 AM Nov 21, 2017 | Harsha Rao |

ಲಂಡನ್‌: ಬೆಳಗ್ಗೆ ಎದ್ದ ನಂತರ ನಮ್ಮ ನಿತ್ಯಕರ್ಮಗಳಿಗೆ ಚೈತನ್ಯ ತುಂಬುವ ಕಾಫಿ. ಇನ್ನು ಕಚೇರಿಗೆ ತೆರಳುವ ಬಸ್‌ಗೂ ಶಕ್ತಿವರ್ಧಕವಾಗಿ ಕೆಲಸ ಮಾಡಲಿದೆ! ಲಂಡನ್‌ನ ಕೆಲವು ಬಸ್‌ಗಳಿಗೆ ಈಗ ಡೀಸೆಲ್‌ ಜತೆಗೆ ಜೈವಿಕ ಇಂಧನವಾಗಿ ಕಾಫಿಯಿಂದ ತೆಗೆದ ತೈಲವನ್ನು ಬಳಸಲಾಗುತ್ತಿದೆ.

Advertisement

ಕಾಫಿ ಶಾಪ್‌ಗ್ಳಲ್ಲಿ ಬಳಸಿದ ಕಾಫಿ ಪುಡಿಯಿಂದ ತೈಲ ತಯಾರಿಸಿ, ಬಸ್‌ಗೆ ಬಳಸಲಾಗುತ್ತದೆ. ಇದನ್ನು ಬಿ25 ಜೈವಿಕ ಇಂಧನ ಎಂದು ಕರೆಯಲಾಗಿದ್ದು, ಇದಕ್ಕಾಗಿ ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಬೇಕಿರುವುದಿಲ್ಲ. ಹೀಗಾಗಿ ಇದು ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗುವ ಜೈವಿಕ ಇಂಧನವಾಗಿದೆ. ಬಯೋಬೀನ್‌ ಎಂಬ ಸಂಸ್ಥೆ ಈ ಪ್ರಯೋಗಕ್ಕೆ ಮುಂದಾಗಿದ್ದು, ಒಂದು ಬಸ್‌ಗೆ ಒಂದು ವರ್ಷಕ್ಕೆ ಸಾಲುವಷ್ಟು ತೈಲವನ್ನು ಸಂಗ್ರಹಿಸಿರುವುದಾಗಿ ಹೇಳಿಕೊಂಡಿದೆ.

ವರ್ಷಕ್ಕೆ ಸುಮಾರು 2 ಲಕ್ಷ ಟನ್‌ ಕಾಫಿ ತ್ಯಾಜ್ಯ ಲಂಡನ್‌ನಲ್ಲಿ ಉತ್ಪಾದನೆಯಾಗುತ್ತದೆ ಎಂದು ಬಯೋ ಬೀನ್‌ ಹೇಳಿಕೊಂಡಿದೆ. ಸಂಸ್ಥೆಯು ಹಲವು ಇನ್‌ಸ್ಟಂಟ್‌ ಕಾಫಿ ಕಂಪನಿಗಳು ಮತ್ತು ಕಾಫಿ ಶಾಪ್‌ಗ್ಳ ಜತೆ ಒಪ್ಪಂದ ಮಾಡಿಕೊಂಡಿದ್ದು, ಅಲ್ಲಿನ ತ್ಯಾಜ್ಯವನ್ನು ಸಂಸ್ಕರಿಸಿದ ತೈಲ ಉತ್ಪಾದಿಸಲಾಗುತ್ತದೆ. ಒಂದು ಬಸ್‌ಗೆ ಒಂದು ವರ್ಷಕ್ಕೆ ಸಾಲುವಷ್ಟು ತೈಲ ತಯಾರಿಸಲು 2.55 ಕೋಟಿ ಕಪ್‌ ಕಾಫಿ ಬೇಕಾಗುತ್ತದೆ ಎಂದು ಸಂಸ್ಥೆ ಹೇಳಿದೆ. ಈಗಾಗಲೇ ಆರು ಸಾವಿರ ಲೀಟರ್‌ ಕಾಫಿ ತಯಾರಿಸಲಾಗಿದೆ.

ಭಾರತದಲ್ಲೂ ಜಾರಿಯಾಗಬಹುದೇ?
ವಿಶ್ವದ ವಿವಿಧ ಭಾಗಗಳಲ್ಲಿ ಹಲವು ಸಾಮಗ್ರಿಗಳಿಂದ ತೈಲ ತಯಾರಿಸಿ ಇಂಧನವನ್ನಾಗಿ ಮಾರ್ಪಡಿಸುವ ಪ್ರಯತ್ನ ಜಾರಿಯಲ್ಲಿದೆ. ಈಗಾಗಲೇ ಲಂಡನ್‌ನಲ್ಲಿ ಬಳಸಿದ ಅಡುಗೆ ತೈಲ ಹಾಗೂ ಮಾಂಸ ಸಂಸ್ಕರಿಸಿ ಎಣ್ಣೆಯನ್ನು ತಯಾರಿಸಿ 9500 ಬಸ್‌ಗಳನ್ನು ಓಡಿಸಲಾಗುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಕಾಫಿ ಬಳಸಿ ಇಂಥದ್ದೊಂದು ಪ್ರಯೋಗ ನಡೆಸಲಾಗುತ್ತಿದೆ. ಇದು ಕಾಫಿಯನ್ನು ಯಥೇತ್ಛವಾಗಿ ಬಳಸುವ ಭಾರತದಲ್ಲೂ ಬಳಸಬಹುದಾಗಿದ್ದು, ಬಯೋಬೀನ್‌ ಸಂಸ್ಥೆ ಮುಂದಿನ ಹಂತದಲ್ಲಿ ಇತರ ದೇಶಗಳಲ್ಲೂ ಪ್ರಯೋಗ ನಡೆಸಬಹುದಾಗಿದೆ. ಆಗ ಕಾಫಿ ಬೆಳೆಯುವ ನಮ್ಮ ರೈತರಿಗೂ ಇದು ವರವಾಗಿ ಪರಿಣಮಿಸಬಹುದೇನೋ?

Advertisement

Udayavani is now on Telegram. Click here to join our channel and stay updated with the latest news.

Next