ಹಾವೇರಿ: ಭೌಗೋಳಿಕ, ಜನಸಂಖ್ಯೆಯ ಆಧಾರ ಮೇಲೆ ಚುನಾವಣೆ ನಡೆಯುತ್ತದೆ. ಮುಕ್ತ, ನ್ಯಾಯ ಸಮ್ಮತ ಚುನಾವಣೆಯಾಗಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ಪಡೆಗಳ ಸ್ಥಳಾಂತರಕ್ಕೆ ಸಮಯ ಬೇಕಾಗುತ್ತದೆ ಸುಮ್ಮನೆ ರಾಜಕೀಯ ವಿಶ್ಲೇಷಣೆ ಮಾಡುವ ರೀತಿ ಖರ್ಗೆ ಹೇಳುತ್ತಿದ್ದಾರೆ ಎಂದು ಹಾನಗಲ್ ಪಟ್ಟಣದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ತಮಗೆ ಬೇಕಾದಂತೆ ಚುನಾವಣೆ ವೇಳಾಪಟ್ಟಿ ಮಾಡಿಕೊಂಡಿದ್ದಾರೆ ಎಂಬ ಖರ್ಗೆ ಹೇಳಿಕೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಚುನಾವಣೆ ಬಾಂಡ್ ಗಿಂತ ಮುಂಚೆ ಏನಿತ್ತು? ಕನಿಷ್ಠ ಅಕೌಂಟ್ ನಲ್ಲಾದರೂ ಬರಲಿ ಎಂದು ಬಾಂಡ್ ಮಾಡಿದ್ದಾರೆ. ಬಾಂಡ್ ಗಳನ್ನ ಕೊಟ್ಟಿರುವ ಮತ್ತು ತಗೊಂಡಿರುವುದನ್ನ ಪಾರದರ್ಶಕವಾಗಿ ಬಹಿರಂಗಪಡಿಸಿದ್ದಾರೆ. ಹಿಂದೆ ಕಾಂಗ್ರೆಸ್ ನವರಿಗೆ ಅತೀ ಹೆಚ್ಚು ಬಾಂಡ್ ಬಂದಿದೆ. ಇವರು ಬಾಂಡ್ ಬಗ್ಗೆ ಮಾತಾಡ್ತಾರೆ. ಆದರೆ ಕಾಂಗ್ರೆಸ್ ನವರು ಕ್ಯಾಶಲ್ಲಿ ತಗೊಂಡಿದ್ರು, ಅದನ್ನ ಯಾರು ಮಾತನಾಡುತ್ತಾರೆ ಎಂದರು.
ಹಾನಗಲ್ ಹಿರೇಕೇರೂರು ಪ್ರಮುಖರ ಭೇಟಿಯಾಗಿ ಸಭೆ ಮಾಡುತ್ತಿದ್ದೇವೆ. ಸಾಯಂಕಾಲ ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿಗ್ಗಾವಿಯಲ್ಲಿ ಸಭೆಯಿದೆ. ನಾಳೆ ಗದಗ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೇನೆ. ಕರ್ನಾಟಕದಲ್ಲಿ ನಿರೀಕ್ಷೆ ಮೀರಿ ಜನ ನಮಗೆ ಬೆಂಬಲಿಸುತ್ತಿದ್ದಾರೆ. ಮೋದಿಯವರು ಬಂದು ಹೋದ ಮೇಲೆ ದೊಡ್ಡ ಸಂಚಲನ ಸೃಷ್ಟಿಯಾಗಿದೆ ಎಂದರು.
ಈಶ್ವರಪ್ಪ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಯಡಿಯೂರಪ್ಪ ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ಕೆಎಸ್ ಈಶ್ವರಪ್ಪ ಅಸಮಾಧಾನ ಅತ್ಯಂತ ಸೌಹಾರ್ದಯುತವಾಗಿ ಎರಡು ದಿನಗಳಲ್ಲಿ ಬಗೆಹರಿಯಬಹುದು. ಅವರ ಅಸಮಾಧಾನ ನಮ್ಮ ಕ್ಷೇತ್ರದಲ್ಲಿ ಏನು ಪರಿಣಾಮ ಬೀರುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.