ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್.ಯು.ಸಿ.ಐ) ಪಕ್ಷ ತನ್ನ 19 ಅಭ್ಯರ್ಥಿಗಳನ್ನು ಘೋಷಿಸಿದೆ.
ರಾಜ್ಯದ ಜನತೆ ಬೆಂಬಲಿಸಬೇಕು ಎಂದು ಎಸ್.ಯು.ಸಿ.ಐ ರಾಜ್ಯ ಘಟಕದ ಸದಸ್ಯ ರಾಮಂಜನಪ್ಪ ಆಲ್ದಳ್ಳಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಯು.ಸಿ.ಐ ರಾಜ್ಯ ಘಟಕದ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ, ‘ಧಾರವಾಡ-ಶರಣಬಸವ ಗೋನವಾರ, ಬೆಳಗಾವಿ-ಲಕ್ಷ್ಮಣ ಜಡಗಣ್ಣವರ, ಹಾವೇರಿ-ಗಂಗಾಧರ ಬಡಿಗೇರ, ಉತ್ತರ ಕನ್ನಡ-ಗಣಪತಿ ಹೆಗಡೆ, ಮೈಸೂರು-ಸುನಿಲ ಟಿ.ಆರ್ ಸೇರಿದಂತೆ ರಾಜ್ಯದ 19 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ದೇಶದ ಒಟ್ಟು 151 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ’ ಎಂದರು.
ರಾಷ್ಟ್ರೀಯ ಪಕ್ಷಗಳ ತಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಚಾರ ಮಾಡದೆ, ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಮೇಲೆ ಪ್ರಭಾವ ಬೀರಲು ಹೊರಟಿದೆ. ಬಂಡವಾಳಶಾಹಿ ಪರವಾಗಿ ಇರುವ ಪಕ್ಷಗಳು, ದೇಶದ ದುಡಿಯುವ ಜನರ ವಿರುದ್ಧವಾಗಿವೆ. ದೇಶದ ಸಂಪತ್ತನ್ನು ಲೂಟಿ ಮಾಡಿ ಚುನಾವಣೆ ನಡೆಸುತ್ತಿದ್ದಾರೆ. ಭ್ರಷ್ಟಹಣದ ಮೂಲಕ ಅಧಿಕಾರದ ಗದ್ದುಗೆ ಏರುತ್ತಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಲು, ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ನೀಡಬೇಕು ಎಂದರು.
ಲಕ್ಷ್ಮಣ ಜಡಗನ್ನವರ, ಗಂಗಾಧರ ಬಡಿಗೇರ, ಭುವನಾ ಬಳ್ಳಾರಿ, ಭವಾನಿ ಶಂಕರ, ಶರಣು ಗೋನವಾರ, ಮಧುಲತಾ ಗೌಡರ ಇದ್ದರು.