Advertisement

ವಿಪಕ್ಷ ಪಡಸಾಲೆಯಲ್ಲಿ ತಲ್ಲಣ

09:06 AM May 22, 2019 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದ ಬೆನ್ನಲ್ಲೇ ಸೋಮವಾರ ದಿಲ್ಲಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೂಂದು ಬಾರಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿರುವ ಕಾರಣ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ.

Advertisement

ಇನ್ನೊಂದೆಡೆ ಉತ್ತಮ ಫ‌ಲಿತಾಂಶದ ನಿರೀಕ್ಷೆಯಲ್ಲಿದ್ದ ವಿಪಕ್ಷಗಳಿಗೆ ಆಘಾತವಾಗಿದ್ದು, ಆತಂಕದ ನಡುವೆಯೇ ಮುಂದಿನ ಕಾರ್ಯತಂತ್ರದ ಬಗ್ಗೆ ಲೆಕ್ಕಾಚಾರಗಳನ್ನು ಶುರುಮಾಡಿವೆ.

ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌ ಸೋಮವಾರ ಬೆಳಗ್ಗೆಯೇ ಬಿಎಸ್‌ಪಿ ನಾಯಕಿ ಮಾಯಾವತಿ ಅವರ ನಿವಾಸಕ್ಕೆ ಧಾವಿಸಿದ್ದಾರೆ. ಬಹುತೇಕ ಸಮೀಕ್ಷೆಗಳು ಉತ್ತರಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿಗೆ ಹೆಚ್ಚಿನ ಸ್ಥಾನಗಳು ಲಭ್ಯವಾಗಲಿವೆ ಎಂದು ಹೇಳಿದರೂ ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿಗೆ ಮುನ್ನಡೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಮಾಯಾರನ್ನು ಭೇಟಿಯಾದ ಅಖೀಲೇಶ್‌ ಮುಂದಿನ ಕಾರ್ಯತಂತ್ರಗಳ ಕುರಿತು ಸುಮಾರು ಒಂದು ಗಂಟೆ ಚರ್ಚೆ ನಡೆಸಿದರು. ಇದೇ ವೇಳೆ, ಮಾಯಾವತಿ ಕಾದು ನೋಡುವ ತಂತ್ರ ಅನುಸರಿಸಿದ್ದು, ಪ್ರತಿಕ್ರಿಯೆ ನೀಡಿಲ್ಲ.

ದಿಲ್ಲಿ ಭೇಟಿ ರದ್ದು
ಸೋಮವಾರ ಮಾಯಾವತಿ ದಿಲ್ಲಿಯಲ್ಲಿ ಸೋನಿಯಾ ಗಾಂಧಿ ಮತ್ತು
ರಾಹುಲ್‌ ಗಾಂಧಿಯವರನ್ನು ಭೇಟಿಯಾಗಿ ಮಾತು ಕತೆ ನಡೆಸುವರು ಎಂದು ರವಿವಾರ ಘೋಷಿಸಲಾಗಿತ್ತು. ಆದರೆ ಮತಗಟ್ಟೆ ಸಮೀಕ್ಷೆಗಳು ಆಶಾದಾಯಕವಾಗಿ ಕಾಣದ ಕಾರಣ, ಸೋನಿಯಾ-ರಾಹುಲ್‌ ಭೇಟಿಯನ್ನು ಮಾಯಾ ರದ್ದು ಮಾಡಿದ್ದಾರೆ.

ಲೆಕ್ಕಾಚಾರದಲ್ಲಿ ಟಿಎಂಸಿ
ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂದು ಸಮೀಕ್ಷೆಗಳು ಹೇಳಿರುವುದು ಸಿಎಂ ಮಮತಾ ಬ್ಯಾನರ್ಜಿಯವರನ್ನು ವಿಚಲಿತಗೊಳಿಸಿದೆ.

Advertisement

ಸೋಮವಾರ ಟಿಎಂಸಿ ಚುನಾವಣೋತ್ತರ ಲೆಕ್ಕಾಚಾರದಲ್ಲಿ ಮುಳುಗಿದ್ದೇ ಇದಕ್ಕೆ ಸಾಕ್ಷಿ. ಎಲ್ಲ ಜಿಲ್ಲೆಗಳಿಂದಲೂ ವರದಿ ತರಿಸಿಕೊಂಡಿರುವ ಪಕ್ಷ, ಎಷ್ಟು ಸ್ಥಾನಗಳಲ್ಲಿ ಗೆಲುವು ಸಿಗಬಹುದು ಎಂದು ಲೆಕ್ಕಾಚಾರ ಹಾಕಿದೆ. ಜತೆಗೆ ಸಮೀಕ್ಷೆಗಳನ್ನು ನಂಬುವುದಿಲ್ಲ ಎಂದೂ ಹೇಳಿದೆ.

ದೀದಿ ಜತೆ ನಾಯ್ಡು ಚರ್ಚೆ:
ಈ ಎಲ್ಲ ಬೆಳವಣಿಗೆಗಳ ನಡುವೆಯೂ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಮಾತ್ರ ಚುನಾವಣೋತ್ತರ ಮೈತ್ರಿಯ ಕಸರತ್ತನ್ನು ಮುಂದುವರಿಸಿದ್ದಾರೆ. ಸಮೀಕ್ಷೆಗಳ ಬಗ್ಗೆ ಅವರು ತಲೆಯೇ ಕೆಡಿಸಿಕೊಂಡಿಲ್ಲ ಎಂಬಂತೆ ಸೋಮವಾರ ಸಂಜೆ ಕೋಲ್ಕತಾಗೆ ತೆರಳಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತುಕತೆ ನಡೆಸಿದರು. ಕಾಂಗ್ರೆಸ್‌ ಬೆಂಬಲದೊಂದಿಗೆ ಪ್ರಾದೇಶಿಕ ಪಕ್ಷಗಳೆಲ್ಲ ಸೇರಿ ಕೇಂದ್ರದಲ್ಲಿ ಬಿಜೆಪಿಯೇತರ ಸರಕಾರ ರಚಿಸುವ ಸಾಧ್ಯತೆಗಳ ಕುರಿತು ಚರ್ಚೆ ನಡೆಸಲಾಗಿದೆ. ಆದರೆ ಕಾಂಗ್ರೆಸ್ಸೇತರ-ಬಿಜೆಪಿಯೇತರ ತೃತೀಯ ರಂಗ ರಚಿಸಲು ಹವಣಿಸುತ್ತಿದ್ದ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ರಾವ್‌ ಸಮೀಕ್ಷೆ ಬಳಿಕ ಮೌನಕ್ಕೆ ಶರಣಾಗಿದ್ದಾರೆ.

ಇಂದು ಅಮಿತ್‌ ಶಾರಿಂದ ಔತಣಕೂಟ:
ಮತಗಟ್ಟೆ ಸಮೀಕ್ಷೆಗಳಿಂದ ಉಲ್ಲಸಿತಗೊಂಡಿರುವ ಬಿಜೆಪಿ ಮಂಗಳವಾರ ಎನ್‌ಡಿಎ ಮಿತ್ರಪಕ್ಷಗಳ ಸಭೆ ಕರೆದಿದೆ. ಅಲ್ಲದೆ, ದಿಲ್ಲಿಯಲ್ಲಿ ಮಿತ್ರಪಕ್ಷಗಳ ನಾಯಕರಿಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಔತಣಕೂಟವನ್ನೂ ಏರ್ಪಡಿಸಿದ್ದಾರೆ. ಬಿಹಾರ ಸಿಎಂ ನಿತೀಶ್‌ ಕುಮಾರ್‌, ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ, ಎಲ್‌ಜೆಪಿ ನಾಯಕ ರಾಮ್‌ವಿಲಾಸ್‌ ಪಾಸ್ವಾನ್‌, ಎಐಎಡಿಎಂಕೆ ನಾಯಕ ಪಳನಿಸ್ವಾಮಿ, ಕೇಂದ್ರ ಸಚಿವರು, ಬಿಜೆಪಿ ನಾಯಕರು ಸಹಿತ ಎನ್‌ಡಿಎಯಲ್ಲಿನ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೂ ಔತಣಕೂಟ ಹಾಗೂ ಸಭೆಯಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಯಲಿದೆ.

ಗಡ್ಕರಿ ಜತೆ ಜೋಶಿ ಮಾತುಕತೆ
ಆರೆಸ್ಸೆಸ್‌ ಪ್ರಧಾನ ಕಾರ್ಯದರ್ಶಿ ಭಯ್ನಾಜಿ ಜೋಶಿ ಅವರು ಸೋಮವಾರ ನಾಗ್ಪುರದಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾಗಿದ್ದಾರೆ. ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎಗೆ ಬಹುಮತ ಎಂದು ಭವಿಷ್ಯ ನುಡಿದ ಬೆನ್ನಲ್ಲೇ ಈ ಭೇಟಿ ನಡೆದಿದೆ. ಮತಗಟ್ಟೆ ಸಮೀಕ್ಷೆ ಕುರಿತು ಪ್ರತಿಕ್ರಿಯಿಸಿರುವ ಗಡ್ಕರಿ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಪ್ರಧಾನಿ ಮೋದಿ ನೇತೃತ್ವದಲ್ಲೇ ಮುಂದಿನ ಸರಕಾರ ರಚನೆಯಾಗಲಿದೆ ಎಂದಿದ್ದಾರೆ.

ಇದು ಎಕ್ಸಿಟ್‌ ಪೋಲ್‌ ಅಷ್ಟೆ. ಈ ಮೂಲಕ ಪ್ರಾದೇಶಿಕ ಪಕ್ಷಗಳನ್ನು ಸೆಳೆವ ಪ್ರಯತ್ನ ಮಾಡಲಾಗುತ್ತದೆ. ಇವಿಎಂಗಳ ಬಗ್ಗೆಯೂ ನಮಗೆ ಅನುಮಾನವಿದೆ.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಲೋಕಸಭೆ ಮತದಾನೋತ್ತರ ಸಮೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿಲ್ಲ. ನಾನು ಸಮೀಕ್ಷೆಗಳನ್ನು ನಂಬುವುದಿಲ್ಲ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಸಮೀಕ್ಷೆ ಫ‌ಲಿತಾಂಶ ನೋಡಿದರೆ ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿ ದಂತೆ ಇದೆ. ಈ ಬಾರಿ ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳು ಇವೆ. ಬಿಜೆಪಿಗೆ 18 ಸ್ಥಾನ ಬರುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ.
– ಡಾ| ಜಿ.ಪರಮೇಶ್ವರ್‌, ಉಪ ಮುಖ್ಯಮಂತ್ರಿ

ಸಮೀಕ್ಷೆಗಳನ್ನು ಕಂಡು
ಕಾಂಗ್ರೆಸ್‌ ನಾಯಕರು ಹತಾಶರಾಗಿದ್ದಾರೆ. ಮತಗಟ್ಟೆ ಸಮೀಕ್ಷೆಗಳನ್ನು ರಾಜಕೀಯ ನಾಯಕರು ನಡೆಸಲು ಸಾಧ್ಯವಿದೆಯೇ?
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಮತ್ತೆ ಇವಿಎಂ ಅನುಮಾನ
ಬೆಂಗಳೂರು: ಲೋಕಸಭೆ ಚುನಾವಣೆ ಮತದಾನೋತ್ತರ ಸಮೀಕ್ಷೆಗಳ ನಿಖರತೆ ಬಗ್ಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅನುಮಾನ ವ್ಯಕ್ತಪಡಿಸಿವೆ. ಜತೆಗೆ ಇವಿಎಂಗಳ ಬಗ್ಗೆಯೂ ತಕರಾರು ತೆಗೆದಿವೆ. ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ| ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌, ಹಿರಿಯ ಕಾಂಗ್ರೆಸ್‌ ಮುಖಂಡ ಬಿ.ಕೆ. ಹರಿಪ್ರಸಾದ್‌ ಸಹಿತ ಹಲವು ನಾಯಕರು ಸಮೀಕ್ಷೆಗಳನ್ನು ನಂಬಲ್ಲ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಆಕ್ರೋಶ
ಚುನಾವಣೋತ್ತರ ಸಮೀಕ್ಷೆಗಳು ಒಂದು ಪಕ್ಷ ಮತ್ತು ವ್ಯಕ್ತಿ ಪರವಾದ ಸುಳ್ಳು ವರದಿ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ಇವಿಎಂಗಳ ಬಗ್ಗೆಯೂ ಆನುಮಾನ ವ್ಯಕ್ತಪಡಿಸಿದ್ದಾರೆ.

“ಇದು ಎಕ್ಸಿಟ್‌ ಪೋಲ್‌ ಅಷ್ಟೆ, ಎಕ್ಸಾಟ್‌ ಪೋಲ್‌ ಅಲ್ಲ. ಎಕ್ಸಿಟ್‌ ಪೋಲ್‌ ಮೂಲಕ ಪ್ರಾದೇಶಿಕ ಪಕ್ಷಗಳನ್ನು ಸೆಳೆಯುವ ಯತ್ನ ಮಾಡಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ, ದೇವೇಗೌಡ, ರಾಹುಲ್‌ಗಾಂಧಿ, ಅಖೀಲೇಶ್‌ ಯಾದವ್‌, ಬಿಎಸ್‌ಪಿ ಮತ್ತು 2019 ಎಕ್ಸಿಟ್‌ ಪೋಲ್‌ ಹ್ಯಾಷ್‌ಟ್ಯಾಗ್‌ ಹಾಕಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಎಚ್‌.ವಿಶ್ವನಾಥ್‌, ಸಮೀಕ್ಷೆಗಳು ಎಂದೂ ನಿಜವಾಗುವುದಿಲ್ಲ. ಕೆಲವರು ಅದನ್ನು ನಂಬಿ ಭ್ರಮಾಲೋಕದಲ್ಲಿದ್ದಾರೆ. ಮೇ 23ರಂದು ಅವರಿಗೆ ನಿರಾಸೆ ಖಂಡಿತ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next