Advertisement

Loksabha Election; ದೇಶದಲ್ಲಿ ಹಂತ-1: ಮತ ಇಂದು

01:59 AM Apr 19, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ದೇಶ ಸಜ್ಜಾಗಿದೆ. ಶುಕ್ರವಾರ ಒಟ್ಟು
21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೊದಲ
ಹಂತದಲ್ಲಿ ಒಟ್ಟು 1,625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೂನ್‌ 4ರಂದು ಫ‌ಲಿತಾಂಶ ಪ್ರಕಟವಾಗಲಿದೆ.

Advertisement

ಎಲ್ಲೆಲ್ಲಿ ಮೊದಲ ಹಂತದ ಚುನಾವಣೆ?
ತಮಿಳುನಾಡು(39), ಉತ್ತರಾಖಂಡ(5), ಅರುಣಾ ಚಲ ಪ್ರದೇಶ(2), ಮೇಘಾಲಯ(2), ಅಂಡಮಾನ್‌ ಮತ್ತು ನಿಕೋಬಾರ್‌(1), ಮಿಜೋರಾಂ(1), ನಾಗಾಲ್ಯಾಂಡ್‌(1), ಪುದುಚೇರಿ(1), ಸಿಕ್ಕಿಂ(1) ಮತ್ತು ಲಕ್ಷದ್ವೀಪ(1) ಎಲ್ಲ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಅದೇ ರೀತಿ, ರಾಜಸ್ಥಾನ 12, ಉತ್ತರ ಪ್ರದೇಶ 8, ಮಧ್ಯ ಪ್ರದೇಶ 6, ಅಸ್ಸಾಂ 5, ಮಹಾರಾಷ್ಟ್ರ 5, ಬಿಹಾರ 4, ಪಶ್ಚಿಮ ಬಂಗಾಲ 3, ಮಣಿಪುರ 2 ಕ್ಷೇತ್ರಗಳು ಸೇರಿದಂತೆ ಹಾಗೂ ತ್ರಿಪುರಾ, ಜಮ್ಮು- ಕಾಶ್ಮೀರ ಹಾಗೂ ಛತ್ತೀಸ್‌ಗಢದ ಒಂದೊಂದು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

2019ರ ಎಲೆಕ್ಷನ್‌ ರಿಸಲ್ಟ್
2019ರ ಲೋಕಸಭೆ ಚುನಾವಣೆಯಲ್ಲಿ ಈ 102 ಲೋಕಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ನೇತೃತ್ವದ ಯುಪಿಎ 45 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ ನೇತೃತ್ವದ ಎನ್‌ಡಿಎ 41 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.

ಪ್ರಮುಖ ಅಭ್ಯರ್ಥಿಗಳು

ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ಸರ್ಬಾನಂದ ಸೋನೋವಾಲ್‌, ಭೂಪೇಂದ್ರ ಯಾದವ್‌, ಕಾಂಗ್ರೆಸ್‌ನ ಗೌರವ್‌ ಗೊಗೋಯ್‌, ಡಿಎಂಕೆಯ ಕನಿಮೋಳಿ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಕೇಂದ್ರ ಸಚಿವರಾದ ಕಿರಣ್‌ ರಿಜಿಜು, ಸಂಜೀವ್‌ ಬಲಿಯಾನ್‌, ಜಿತೇಂದ್ರ ಸಿಂಗ್‌, ಅರ್ಜುನ್‌ ರಾಮ್‌ ಮೇಘಾÌಲ್‌, ಎಲ್‌. ಮುರುಗನ್‌, ನಿಸಿತ್‌ ಪ್ರಮಾಣಿಕ್‌ ಕೂಡ ಕಣದಲ್ಲಿದ್ದಾರೆ. ಮಾಜಿ ಸಿಎಂ ಬಿಪ್ಲಬ್‌ ಕುಮಾರ್‌ ದೇವ್‌, ನಬಾಮ್‌ ತುಕಿ ಮತ್ತು ಮಾಜಿ ರಾಜ್ಯಪಾಲೆ ತಮಿಳ್‌ಸಾಯ್‌ ಸೌಂದರ್‌ರಾಜನ್‌ ಅವರು ಕಣದಲ್ಲಿರುವ ಪ್ರಮುಖ ಅಭ್ಯರ್ಥಿ ಗಳಾಗಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ಮತಯಾಚನೆ ಮಾಡಿದ್ದಾರೆ. ಮೊದಲ ಹಂತದ ಲೋಕಸಭೆ ಚುನಾವಣೆ ಜತೆಗೆ 60 ಕ್ಷೇತ್ರಗಳನ್ನು ಹೊಂದಿರುವ ಅರುಣಾಚಲ ಪ್ರದೇಶ ಮತ್ತು 32 ಕ್ಷೇತ್ರಗಳನ್ನು ಹೊಂದಿರುವ ಸಿಕ್ಕಿಂ ವಿಧಾನಸಭೆಗೂ ಶುಕ್ರವಾರ ಮತದಾನ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ಬುಧವಾರ ಸಂಜೆಯೇ ತೆರೆ ಬಿದ್ದಿದೆ.

ಒಟ್ಟು ರಾಜ್ಯ, ಕೇಂದ್ರಾಡಳಿತ ಪ್ರದೇಶ 21
ಒಟ್ಟು ಲೋಕಸಭಾ ಕ್ಷೇತ್ರಗಳು 102
ಒಟ್ಟು ಅಭ್ಯರ್ಥಿಗಳು 1,625
ಮತದಾನ ಕೇಂದ್ರಗಳು 1.87 ಲಕ್ಷ
ಚುನಾವಣ ಸಿಬಂದಿ 18 ಲಕ್ಷ
ಒಟ್ಟು ಮತದಾರರು 16.63 ಕೋಟಿ
ಪುರುಷ ಮತದಾರರು 8.4 ಕೋಟಿ
ಮಹಿಳಾ ಮತದಾರರು 8.23 ಕೋಟಿ
ತೃತೀಯ ಲಿಂಗಿಗಳು 11,371
ಮೊದಲ ಬಾರಿ ಹಕ್ಕು ಚಲಾಯಿಸುವವರು: 35.67 ಲಕ್ಷ

ರಾಜ್ಯದಲ್ಲಿ ಹಂತ-2: ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಮೇ 7ರಂದು 2ನೇ ಹಂತ: ಗುರುವಾರ 104 ನಾಮಪತ್ರ ಸಲ್ಲಿಕೆ
 ಇದುವರೆಗೆ 241 ಅಭ್ಯರ್ಥಿಗಳಿಂದ ಉಮೇದುವಾರಿಕೆ
ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಇದಕ್ಕೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನ. ಗುರುವಾರ ಒಂದೇ ದಿನ ಬರೋಬ್ಬರಿ 104 ನಾಮಪತ್ರಗಳು ಸಲ್ಲಿಕೆಯಾಗಿವೆ. ಈವರೆಗೆ 241 ಅಭ್ಯರ್ಥಿ ಗಳು 351 ಸೆಟ್‌ ನಾಮಪತ್ರ ಸಲ್ಲಿಸಿದ್ದಾರೆ. ಎ. 26ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.

ಗುರುವಾರ 83 ಪುರುಷರು 93 ನಾಮಪತ್ರಗಳನ್ನು ಹಾಗೂ 7 ಮಹಿಳೆಯರು 11 ನಾಮಪತ್ರಗಳನ್ನು ಸಲ್ಲಿಸಿ ದ್ದಾರೆ. ಎ. 12ರಿಂದ ಇಲ್ಲಿಯ ವರೆಗೆ 221 ಪುರುಷರು, 30 ಮಹಿಳೆಯರ ಸಹಿತ 241 ಅಭ್ಯರ್ಥಿಗಳು 351 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಬಾಗಲಕೋಟೆಯಲ್ಲಿ 13, ದಾವಣಗೆರೆಯಲ್ಲಿ 10, ಬೀದರ್‌, ಹಾವೇರಿಗಳಲ್ಲಿ ತಲಾ 8, ವಿಜಯಪುರ, ಕಲಬುರಗಿ, ಕೊಪ್ಪಳಗಳಲ್ಲಿ ತಲಾ 7, ಉತ್ತರ ಕನ್ನಡದಲ್ಲಿ 6, ಚಿಕ್ಕೋಡಿ, ರಾಯಚೂರು, ಧಾರವಾಡಗಳಲ್ಲಿ ತಲಾ 5, ಬೆಳಗಾವಿ, ಶಿವಮೊಗ್ಗಗಳಲ್ಲಿ ತಲಾ 4, ಬಳ್ಳಾರಿಯಲ್ಲಿ ಒಬ್ಬ ಅಭ್ಯರ್ಥಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next