ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಧಾರವಾಡ ಸೇರಿದಂತೆ ರಾಜ್ಯದ ಐದು ಕಡೆ ಬರಲಿದ್ದಾರೆ. ನಿನ್ನೆ ರಾತ್ರಿ ಮಾಹಿತಿ ಬಂದಿದೆ. ಎರಡು ದಿನದಲ್ಲಿ ಜಾಗ ಅಂತಿಮ ಮಾಡುತ್ತೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಪ್ರಧಾನಿ ಮೋದಿ ಧಾರವಾಡಕ್ಕೆ ಬಂದಾಗ ಐತಿಹಾಸಿಕ ಕಾರ್ಯಕ್ರಮವಾಗಿದೆ. ನಾ ಭುತೋ ನಾ ಭವಿಷ್ಯತಿ ಎನ್ನುವ ರೀತಿಯಲ್ಲಿ ಆಗಿದೆ. ಟಿಕೆಟ್ ಘೋಷಣೆ ಆದ ಬಳಿಕ ಮೋದಿ ಬರುತ್ತಾರೆ ಎಂದರು.
ಸಂಸದ ಅನಂತ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಇಬ್ಬರಿಗೂ ಲಾಭವಾಗುತ್ತದೆ. ಕೆಲವೆಡೆ ಜೆಡಿಎಸ್ ಬಲಿಷ್ಠವಾಗಿದೆ. ಕೆಲವೆಡೆ ನಮ್ಮ ಮತ ಬ್ಯಾಂಕ್ ಇದೆ. ಹೀಗಾಗಿ ನಾವು 28 ಕ್ಷೇತ್ರ ಗೆಲ್ಲುತ್ತೇವೆ. ಜೆಡಿಎಸ್ ಗೆ ಎಷ್ಟು ಕ್ಷೇತ್ರಕ್ಕೆ ಟಿಕೆಟ್ ನೀಡಲಾಗುತ್ತದೆ ಎಂಬುದು ಇಂದು ನಿರ್ಧಾರವಾಗುತ್ತದೆ. ಮಂಡ್ಯ ಕೊಡಬೇಕೋ, ಯಾವ ಕ್ಷೇತ್ರ ಎನ್ನುವುದನ್ನು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಎಲ್ಲವೂ ಚರ್ಚೆಯ ಬಳಿಕವೇ ಅಂತಿಮವಾಗಲಿದೆ ಎಂದರು.
ಜನ ಮೋದಿಗೆ ಮತ ಹಾಕಲು ತೀರ್ಮಾನ ಮಾಡಿದ್ದಾರೆ. ಸಮೀಕ್ಷೆ ಪ್ರಕಾರ ಎಲ್ಲೆಡೆ ಬಿಜೆಪಿ ಗೆಲ್ಲುತ್ತದೆ ಎನ್ನುತ್ತಿದೆ. ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳೇ ಇಲ್ಲ. ನಮ್ಮಲ್ಲಿ ಸ್ವಲ್ಪ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಟಿಕೆಟ್ ಕಗ್ಗಂಟು ಇಲ್ಲ. ಯಾರೇ ಇದ್ದರೂ ನಾವು ಸಂಬಂಧಿಸಿದವರ ಜೊತೆ ಮಾತನಾಡುತ್ತೇವೆ ಎಂದರು.
ಮಾಜಿ ಸಿಎಂ ಜಗದೀಶ ಶೆಟ್ಟರ ಸರಪ್ರೈಸ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲದಕ್ಕೂ ಏನು ಉತ್ತರ ಕೊಡುವುದು. ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ತರಹ ಏನಿಲ್ಲ. ಸಂಸದರ ಕೆಲಸ, ಸಂಘಟನೆ ಎಲ್ಲವನ್ನೂ ಪರಿಗಣಿಸುತ್ತಾರೆ. ನಾನು ರಾಷ್ಟ್ರೀಯ ನಾಯಕ ಅಲ್ಲ. ಸಾಮಾನ್ಯ ಕಾರ್ಯಕರ್ತ. ನಾನು ಇವತ್ತು ದೆಹಲಿಗೆ ಹೋಗುತ್ತಿದ್ದೇನೆ. ಚರ್ಚೆ ಬಳಿಕ ಟಿಕೆಟ್ ಹಂಚಿಕೆ ಅಂತಿಮ ತೀರ್ಮಾನ ಆಗಲಿದೆ ಎಂದರು.