Advertisement

 ಲೋಕಸಭೆ ಬಿಜೆಪಿ ಟಿಕೆಟ್‌

01:01 PM Aug 06, 2018 | Team Udayavani |

ಉಡುಪಿ: ಲೋಕಸಭಾ ಚುನಾವಣೆಗೆ ಟಿಕೆಟ್‌ ಯಾರಿಗೆ ಸಿಗಬಹುದೆಂಬ ಲೆಕ್ಕಾಚಾರ ರಾಜ ಕೀಯ ಪಕ್ಷಗಳೊಳಗೆ ಈಗಲೇ ಭರ್ಜರಿ ಯಾಗಿದೆ. ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಆಸಕ್ತಿ ಇಲ್ಲವಾದ ಕಾರಣ ಬೇರೊಬ್ಬರನ್ನು ಆರಿಸಬೇಕಾಗಿದೆ. ದಕ್ಷಿಣ ಕನ್ನಡದಲ್ಲಿ ನಳಿನ್‌ ಕುಮಾರ್‌ ಕಟೀಲು ಅವರಿಗೆ ಮತ್ತೆ ಟಿಕೆಟ್‌ ಸಿಗಲು ಕಷ್ಟವಾಗದು. 

Advertisement

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕುರಿತು ಈಗಾಗಲೇ ಬೆಂಗಳೂರು, ದಿಲ್ಲಿಯಲ್ಲಿ ಸಭೆ ನಡೆಸಲಾಗಿದೆ. ದಿಲ್ಲಿಯಲ್ಲಿ ಕೇಂದ್ರ ಸಚಿವ ಅನಂತ ಕುಮಾರ್‌ ಮತ್ತು ಉಭಯ ಜಿಲ್ಲೆಯ ನಾಯಕರು ಇದ್ದರು. ಉಡುಪಿಯಲ್ಲಿಯೂ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲಾಗಿದೆ. ಶೋಭಾಗೆ ಮತ್ತೆ ಸ್ಪರ್ಧಿಸಲು ಇಷ್ಟವಿಲ್ಲದ್ದರಿಂದ ಇಲ್ಲಿ ಪೈಪೋಟಿ ಇದೆ. ಅವರು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕಾರಣ ಅವರಿಗೆ ರಾಜ್ಯ ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ ಎನ್ನುತ್ತದೆ ರಾಜಕೀಯ ವಿಶ್ಲೇಷಣೆ.

ಈ ಹಿಂದೆ ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದ ಸದಾನಂದ ಗೌಡರು ಪ್ರಸ್ತುತ ಬೆಂಗಳೂರು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಹಾಲಿ ಕ್ಷೇತ್ರ ವ್ಯಾಪ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರ ಗಳಲ್ಲಿ ಇತ್ತೀಚೆಗೆ ಬಿಜೆಪಿ ಸೋಲು ಕಂಡಿರುವುದೇ ಅವರ ಕಣ್ಣು ಉಡುಪಿ ಯತ್ತ ಹೊರಳಲು ಕಾರಣ ಎನ್ನುತ್ತದೆ ರಾಜಕೀಯ ವಿಶ್ಲೇಷಣೆ. 

ಈ ಹಿಂದೆ ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಪ್ರತಿನಿಧಿಸಿದ್ದ ಮಾಜಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆಯವರು ಈಗ ಬಿಜೆಪಿಯಲ್ಲಿದ್ದಾರೆ. ಅವರೂ ಟಿಕೆಟ್‌ ಆಸಕ್ತರು ಎಂದು ಹೇಳಲಾಗುತ್ತಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಾನೂ ಆಕಾಂಕ್ಷಿ ಎಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮಾಜಿ ಸಚಿವ ಜೀವರಾಜ್‌ ಆ ಭಾಗದ ಟಿಕೆಟ್‌ ಆಕಾಂಕ್ಷಿ ಯಾಗಿದ್ದಾರೆ. ಒಟ್ಟಾರೆ ಪೈಪೋಟಿಯಲ್ಲಿ ಟಿಕೆಟ್‌ ಯಾರಿಗೆ ಎನ್ನುವುದು ಕುತೂಹಲ. 

ನಳಿನ್‌ ಕುಮಾರ್‌ ಕಟೀಲು ಅವರು ಯುವಕರು, ಕೆಲಸ ಮಾಡುತ್ತಾರೆ. ಸಂಘಟನೆ ಮಾಡುತ್ತಾರೆ. ಆದ್ದರಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್‌ ಅವರಿಗೆ ಸಿಗುವುದು ಬಹುತೇಕ ಖಚಿತ.
ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ ಅಧ್ಯಕ್ಷರು, ದ.ಕ.

Advertisement

ಪಕ್ಷದವರು ಸಮೀಕ್ಷೆ  ಮಾಡುತ್ತಾರೆ. ಜನರ ಅಭಿಪ್ರಾಯದಂತೆ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಪಕ್ಷದವರು ಸ್ಪರ್ಧಿಸಲು ಹೇಳಿದರೆ ಸ್ಪರ್ಧಿಸುತ್ತೇನೆ.
ಕೆ. ಜಯಪ್ರಕಾಶ್‌ ಹೆಗ್ಡೆ , ಮಾಜಿ ಸಚಿವರು, ಮಾಜಿ ಸಂಸದರು

ಲೋಕಸಭಾ ಕ್ಷೇತ್ರದ ಟಿಕೆಟ್‌ ಸಂಬಂಧಿಸಿ ಎರಡು ಮೂರು ಸಭೆಗಳಾಗಿವೆ. ಯಾರಿಗೆ ಟಿಕೆಟ್‌ ಕೊಟ್ಟರೂ ಕ್ಷೇತ್ರದ ಒಳಗಿನವರಿಗೆ ಕೊಡಿ ಎಂಬುದು ನಮ್ಮೆಲ್ಲರ ಅಭಿಪ್ರಾಯ.
ಮಟ್ಟಾರು ರತ್ನಾಕರ ಹೆಗ್ಡೆ , ಜಿಲ್ಲಾ ಬಿಜೆಪಿ ಅಧ್ಯಕ್ಷರು, ಉಡುಪಿ

ನಾನು ಹಿಂದೊಮ್ಮೆ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಆಸಕ್ತಿ ಇಲ್ಲ ಎಂದು ಹೇಳಿದ್ದು ಹೌದು. ಅನಂತರ ರಾಜ್ಯದ ಯಾರೂ ಕೂಡ ಹೇಳಿಕೆ ಕೊಡಬಾರದು; ಯಾರು ಸ್ಪರ್ಧಿಸಬೇಕು ಅಥವಾ ಸ್ಪರ್ಧಿಸುವುದು ಬೇಡ ಎನ್ನುವುದನ್ನು ಪಕ್ಷ ತೀರ್ಮಾನಿಸುತ್ತದೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದರು. ಆದ್ದರಿಂದ ಈಗ ನಾನು ಯಾವುದೇ ಹೇಳಿಕೆ ಕೊಡುವುದಿಲ್ಲ.
ಶೋಭಾ ಕರಂದ್ಲಾಜೆ
ಸಂಸದರು, ಉಡುಪಿ- ಚಿಕ್ಕಮಗಳೂರು ಕ್ಷೇತ್ರ
 

*ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next