Advertisement

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

11:57 PM May 07, 2024 | Team Udayavani |

ಹೊಸದಿಲ್ಲಿ: 11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳಿಗೆ ಮಂಗಳವಾರ ಶೇ.61.66ರಷ್ಟು ಮತದಾನವಾಗಿದೆ. ಲಘು ಸಂಘರ್ಷ, ಮತಯಂತ್ರಗಳ ತೊಂದರೆ ಸೇರಿ ಒಂದಿಷ್ಟು ಅಹಿತಕರ ಘಟನೆಗಳನ್ನು ಹೊರತಪಡಿಸಿದರೆ ಶಾಂತಿಯುತವಾಗಿಯೇ 3ನೇ ಹಂತ ಮುಕ್ತಾಯವಾಗಿದೆ. ಗುಜರಾತ್‌ (1 ಕ್ಷೇತ್ರ  ಹೊರತುಪಡಿಸಿ) ಮತ್ತು ಗೋವಾದ ಎಲ್ಲ ಕ್ಷೇತ್ರಗಳಿಗೆ ಈ ಹಂತದಲ್ಲಿ ವೋಟಿಂಗ್‌ ಮುಗಿದಿದೆ. 3ನೇ ಹಂತದ ಮತದಾನ ಮುಕ್ತಾಯದೊಂದಿಗೆ ಒಟ್ಟು 283 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಂತಾಗಿದೆ.

Advertisement

120 ಮಹಿಳೆ ಸೇರಿ 1,351 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಕೆಲವೆಡೆ ಸಂಜೆ 7 ಗಂಟೆಯಾಚೆಗೂ ಮತದಾನ ನಡೆದಿದೆ. ಶೇ.75.30ರಷ್ಟು ಮತದಾನದೊಂದಿಗೆ ಅಸ್ಸಾಂ ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರದಲ್ಲಿ ಅತೀ ಕಡಿಮೆ ಶೇ.54.98ರಷ್ಟು ಮತದಾನ ದಾಖಲಾಗಿದೆ. ಗೋವಾದಲ್ಲಿ ಶೇ.74.32, ಪಶ್ಚಿಮ ಬಂಗಾಲದಲ್ಲಿ ಶೇ.73.93, ಗುಜರಾತ್‌ನಲ್ಲಿ ಶೇ.56.83ರಷ್ಟು ಮತದಾನವಾಗಿದೆ.

ಪಶ್ಚಿಮ ಬಂಗಾಲದ ಮುರ್ಶಿದಾಬಾದ್‌ ಮತ್ತು ಜಂಗೀಪುರ ಕ್ಷೇತ್ರದಲ್ಲಿ ಬಿಜೆಪಿ, ಟಿಎಂಸಿ, ಕಾಂಗ್ರೆಸ್‌-ಸಿಪಿಎಂ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದೆ. 180ಕ್ಕೂ ಹೆಚ್ಚು ದೂರು ಸ್ವೀಕರಿಸಲಾಗಿದೆ.

ಶೂನ್ಯ ಮತದಾನ: ಉತ್ತರ ಪ್ರದೇಶದ ಫಿರೋಜಾಬಾದ್‌ ವ್ಯಾಪ್ತಿಯ ನಗ್ಲಾ ಜವಾಹರ್‌, ನೀಮ್‌ ಖೇರಿಯಾ ಮತ್ತು ನಗ್ಲಾ ಉಮರ್‌ ಹಳ್ಳಿಗಳಲ್ಲಿ ಒಂದೇ ಒಂದು ಮತ ಚಲಾವಣೆಯಾಗಿಲ್ಲ! ಇನ್ನು ಮೈನ್‌ಪುರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯ ಕಾರ್ಯಕರ್ತರು ಬೂತ್‌ಗಳ ಲೂಟಿಗೆ ಯತ್ನಿಸುತ್ತಿದ್ದಾರೆ  ಎಂದು ಎಸ್‌ಪಿ ನಾಯಕ ಅಖೀಲೇಶ್‌ ಆರೋಪಿಸಿದ್ದಾರೆ.  ಎ.19 ಮತ್ತು 26ರಂದು ನಡೆದ ಮೊದಲೆರಡು ಹಂತದಲ್ಲಿ ಕ್ರಮವಾಗಿ ಶೇ.66.14 ಮತ್ತು ಶೇ.66.71ರಷ್ಟು ಮತದಾನ ದಾಖಲಾಗಿತ್ತು.

ಅಮಿತ್‌ ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Advertisement

ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಅಹ್ಮದಾಬಾದ್‌ನ ರನಿಪ್‌ ಪ್ರದೇಶದ ನಿಶಾನ್‌ ಪಬ್ಲಿಕ್‌ ಶಾಲೆಯ ಬೂತ್‌ಗೆ ತೆರಳಿ ಮತ ಚಲಾಯಿಸಿದರು. ಅಹ್ಮದಾಬಾದ್‌, ಸಚಿವ ಅಮಿತ್‌ ಶಾ ಸ್ಪರ್ಧಿಸಿರುವ ಗಾಂಧಿನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಮತದಾನ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಮೋದಿ, ಚುನಾವಣೆ ನಡೆಸುತ್ತಿರುವ ಆಯೋಗಕ್ಕೆ ಮೆಚ್ಚುಗೆ ಸೂಚಿಸಿದರು.

ಗುಜರಾತ್‌ ರಾಜ್ಯದಲ್ಲಿ 56.83% ವೋಟಿಂಗ್‌ಬಿಜೆಪಿಯ ಭದ್ರಕೋಟೆ ಗುಜರಾತ್‌ನ 26 ಕ್ಷೇತ್ರಗಳ ಪೈಕಿ 25ರಲ್ಲಿ ಮಂಗಳವಾರ ಚುನಾವಣೆ ನಡೆದಿದ್ದು, ಒಟ್ಟು ಶೇ.55.22ರಷ್ಟು ವೋಟಿಂಗ್‌ ನಡೆದಿದೆ. 2019ರಲ್ಲಿ ಶೇ.66.08ರಷ್ಟು ಮತದಾನವಾಗಿತ್ತು. ಗುಜರಾತ್‌ನ ಸೂರತ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು, ಗೋವಾದ 2 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, ಶೇ.74.32ರಷ್ಟು ವೋಟಿಂಗ್‌ ನಡೆದಿದೆ. 2019ರ ಚುನಾವಣೆಯಲ್ಲಿ ಗೋವಾದಲ್ಲಿ ಶೇ.76.04ರಷ್ಟು ವೋಟಿಂಗ್‌ ನಡೆದಿತ್ತು.

ಲೋಕಸಭೆಯ ಕೊನೇ ಹಂತದ  ಮತದಾನಕ್ಕೆ ನಾಮಪತ್ರ ಪ್ರಕ್ರಿಯೆ ಶುರು

ಲೋಕಸಭೆಯ 7ನೇ ಹಂತದ ಮತದಾನಕ್ಕೆ ಕೇಂದ್ರ ಚುನಾವಣ ಆಯೋಗ ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಕೊನೆಯ ಹಂತದಲ್ಲಿ ಜೂ.1ರಂದು, 7 ರಾಜ್ಯಗಳ 57 ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಪ್ರಧಾನಿ ಮೋದಿ ಸ್ಪರ್ಧಿಸಿರುವ ವಾರಾಣಸಿ ಕ್ಷೇತ್ರಕ್ಕೂ ಇದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಮೇ 14 ಕೊನೆಯ ದಿನವಾದರೆ, ನಾಮಪತ್ರ ವಾಪಸ್‌ ಪಡೆಯಲು ಮೇ 17 ಕೊನೆಯ ದಿನವಾಗಿದೆ.

ಬಿಜೆಪಿ ಪರ ಮತಕ್ಕೆ ಒತ್ತಾಯ: ತನಿಖೆಗೆ ಜಿಲ್ಲಾಧಿಕಾರಿ ಆದೇಶ

ಗುಜರಾತ್‌ನ ಬನಾಸಂಕಾಠಾದ ಕೆಲವು ಬೂತ್‌ಗಳಲ್ಲಿ ಬಿಜೆಪಿ ಪರ ಮತ ಚಲಾಯಿಸುವಂತೆ ಸಿಆರ್‌ಪಿಎಫ್ ವೇಷದಲ್ಲಿದ್ದ ಬಿಜೆಪಿಯ ಕೆಲವರು ಒತ್ತಾಯ ಮಾಡುತ್ತಿದ್ದಾರೆಂದು ಕಾಂಗ್ರೆಸ್‌ ಅಭ್ಯರ್ಥಿ ಗೇನಿಬೆನ್‌ ಠಾಕೂರ್‌ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next