ನವದೆಹಲಿ: ಸತತ ಎರಡು ತಿಂಗಳ ಚುನಾವಣೆ ಪ್ರಚಾರ ರ್ಯಾಲಿಗಳಲ್ಲಿ “ಚೌಕಿದಾರ್ ಚೋರ್ ಹೈ’ ಎಂದು ಅಬ್ಬರಿಸಿದ ಕಾಂಗ್ರೆಸ್ ಪಾಳಯದಲ್ಲೀಗ ಮೌನರಾಗ! ದೇಶದೆಲ್ಲೆಡೆ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಮುಖಂಡರ ನಿರೀಕ್ಷೆಗಳೆಲ್ಲಾ ಹುಸಿಯಾಗಿದ್ದು, ಕಾಂಗ್ರೆಸ್‌ನ ಅದರಲ್ಲೂ ಗಾಂಧಿ ಕುಟುಂಬದ ಭದ್ರ ಕೋಟೆಯೇ ಆಗಿದ್ದ ಅಮೇಥಿಯಲ್ಲಿ ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೇ ಸೋಲನು ಭವಿಸಿರುವುದು ಪಕ್ಷಕ್ಕಾದ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.
2009ರ ಚುನಾವಣೆ ನಂತರ ಸತತ ಎರಡು ದೊಡ್ಡ ಮಟ್ಟದ ಸೋಲುಂಡು ಕಂಗೆಟ್ಟಿರುವ ಕೈ ಮುಖಂಡರು ಈಗ ಆತ್ಮಾವಲೋಕನಕ್ಕೆ ನಿಂತಿದ್ದಾರೆ.
ಇತ್ತ, ಬೆಳಗ್ಗೆ 11 ಗಂಟೆ ಸುಮಾರಿಗೆ ಎನ್‌ಡಿಎ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ದೆಹಲಿಯಲ್ಲಿನ ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿದ ಸಹೋದರಿ ಪ್ರಿಯಾಂಕ ವಾದ್ರಾ, ಸಹೋದರನೊಂದಿಗೆ ಕೆಲ ಕಾಲ ಚರ್ಚಿಸಿದರು. ಇದಾದ ಕೆಲವೇ ಗಂಟೆಗಳಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ರಾಹುಲ್ ಹಾಗೂ ಪ್ರಿಯಾಂಕ, ಪಕ್ಷದ ದಯನೀಯ ಸೋಲಿನ ಕುರಿತು ಅರ್ಧ ಗಂಟೆಗೂ ಹೆಚ್ಚು ಸಮಯ ಚರ್ಚಿಸಿದರು ಎನ್ನಲಾಗಿದೆ.
ಮೂಲಗಳ ಪ್ರಕಾರ ಕಾಂಗ್ರೆಸ್ ಇಷ್ಟೊಂದು ಹೀನಾಯ ಸೋಲನ್ನು ನಿರೀಕ್ಷಿಸಿರಲಿಲ್ಲ. ಅದರಲ್ಲೂ ತನ್ನ ಆಡಳಿತವಿರುವ ಕರ್ನಾಟಕ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಾದರೂ ಪಕ್ಷ ಉತ್ತಮ ಸಾಧನೆ ತೋರಬಹುದು ಎಂಬ ಗಾಂಧಿ ಕುಟುಂ ಬದ ನಿರೀಕ್ಷೆ ಕೂಡ ಹುಸಿಯಾಗಿದೆ.
ಈ ನಡುವೆ ದೇಶದೆಲ್ಲೆಡೆ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗುತ್ತಿರುವಂತೆ ದೆಹಲಿಯಲ್ಲಿನ ಎಐಸಿಸಿ ಕಚೇರಿ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳ ಕಾಂಗ್ರೆಸ್ ಕಚೇರಿಗಳಲ್ಲಿ ಮೌನ ಆವರಿಸಿತ್ತು. ಒಂದೆಡೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದ್ದರೆ, ಕಾಂಗ್ರೆಸಿಗರು ಮೌನರಾಗದ ಮೊರೆ ಹೋಗಿದ್ದರು.
ಡಿಸೆಂಬರ್ ಸಂಭ್ರಮ ಮಾಯ: 2018ರ ಡಿಸೆಂಬರ್‌ನಲ್ಲಿ ನಡೆದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶವನ್ನೇ ಪಡೆದಿದ್ದ ಕಾಂಗ್ರೆಸ್, ಕೇವಲ ಐದು ತಿಂಗಳ ಅಂತರದಲ್ಲಿ ರಾಜಸ್ಥಾನ ಹಾಗೂ ಮಧ್ಯ ಪ್ರದೇಶಗಳಲ್ಲಿ ಹೀನಾಯ ಸೋಲನುಭವಿಸಿದೆ. ತೆಲಂಗಾಣದಲ್ಲಿ ಎನ್‌ಡಿಎ 5 ಸ್ಥಾನ ಗಳಿಸಿರುವುದೂ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ.
8 ಕ್ಷೇತ್ರಗಳ ಸೋಲಿನ ಹೊಣೆ
ಈ ನಡುವೆ ಉತ್ತರ ಪ್ರದೇಶದಲ್ಲಿ ಮಹಾಘಟಬಂಧನ್ 8 ಕ್ಷೇತ್ರಗಳಲ್ಲಿ ಸೋಲನುಭವಿಸಲು ಕಾಂಗ್ರೆಸ್ ಕಾರಣ ಎಂದು ಮಿತ್ರಪಕ್ಷಗಳು ನೇರ ಆರೋಪ ಮಾಡಿವೆ. ಬಿಜೆಪಿಯ ಮನೇಕಾ ಗಾಂಧಿ ಸ್ಪರ್ಧಿಸಿ ಗೆದ್ದಿರುವ ಸುಲ್ತಾನ್‌ಪುರ, ಬರಾಬಂಕಿ, ಬಿಜೂರ್, ಧರೂರಹಾ, ಕೈರಾಣ, ಶರಾವಸ್ತಿ ಮತ್ತು ಸೀತಾಪುರದಲ್ಲಿ ಘಟಬಂಧನ್ ಅಭ್ಯರ್ಥಿಗಳು ಸೋಲಲು ಕಾಂಗ್ರೆಸ್ ಕಾರಣ ಎನ್ನಲಾಗಿದೆ.