ಮಧ್ಯಪ್ರದೇಶದ ಹೆವಿವೇಟ್ ಲೋಕಸಭಾ ಕ್ಷೇತ್ರಗಳಲ್ಲಿ ಛಿಂದ್ವಾರಾ ಕೂಡ ಒಂದು. ಇದು ಮುಖ್ಯಮಂತ್ರಿ ಕಮಲ್‌ನಾಥ್‌ರ ಅಖಾಡ. ಈ ಬಾರಿ ಅವರ ಮಗ ಈ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.
1957ರಲ್ಲಿ ಈ ಕ್ಷೇತ್ರಕ್ಕೆ ಮೊದಲು ಚುನಾವಣೆ ನಡೆದಿತ್ತು. ಆಗ ಗೆದ್ದದ್ದು ಕಾಂಗ್ರೆಸ್. ಮಧ್ಯಪ್ರದೇಶದ ಹಾಲಿ ಮುಖ್ಯಮಂತ್ರಿ ಕಮಲ್‌ನಾಥ್ 1980ರಿಂದ 1991ರ ವರೆಗೆ, 1998ರಿಂದ 2014ರವರೆಗೆ ಗೆದ್ದಿದ್ದಾರೆ. 1997ರಲ್ಲಿ ನಡೆದಿದ್ದ ಉಪ-ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಸುಂದರ್ ಲಾಲ್ ಪಟ್ವಾ ಗೆದ್ದಿದ್ದು ಮಾತ್ರ ಹೆಗ್ಗಳಿಕೆ. 1996ರಲ್ಲಿ ಕಾಂಗ್ರೆಸ್‌ನ ಅಲ್ಕಾನಾಥ್ ಜಯಗಳಿಸಿದ್ದಾರೆ. ಹತ್ತು ಬಾರಿ ಕಮಲ್‌ನಾಥ್ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಕೆ ಹೊಂದಿದ್ದಾರೆ.
2018ರಲ್ಲಿ ಮಧ್ಯಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದರಿಂದ ಕಾಂಗ್ರೆಸ್ ನಾಯಕ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕಾರಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ಆ ಕ್ಷೇತ್ರಕ್ಕೆ ಸಂಸದರಿಲ್ಲ. 2019ರ ಚುನಾವಣೆಯಲ್ಲಿ ಸಿಎಂ ಪುತ್ರ ನಕುಲ್ ನಾಥ್ ನಾಮಪತ್ರ ಸಲ್ಲಿಸಿದ್ದಾರೆ. ತಂದೆಯವರಂತೆ ವಿಜಯದ ಓಟ ಮುಂದುವರಿಸಲಿದ್ದಾರೆಯೋ ಎನ್ನುವುದು ಮೇ 23ಕ್ಕೆ ಗೊತ್ತಾಗಲಿದೆ.
ಬರೋಬ್ಬರಿ 40 ವರ್ಷಗಳ ಕಾಲ ಕಮಲ್‌ನಾಥ್ ಅಲ್ಲಿ ಒಡನಾಟ ಹೊಂದಿದ್ದಾರೆ. ದಿನಗಳ ಹಿಂದಷ್ಟೇ ನನ್ನ ಪುತ್ರ ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದೇ ಇದ್ದರೆ, ಆತನ ಅಂಗಿ ಹರಿದು ಹಾಕಿ ಎಂದು ಹೇಳುವ ಮೂಲಕ ಭಾವನಾತ್ಮಕವಾಗಿ ಮತದಾರರಿಗೆ ಮನವಿ ಮಾಡಿಕೊಂಡು ಮತ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಎಂದು ಪ್ರಕಟಿಸುವ ಮೊದಲೇ ಕ್ಷೇತ್ರ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಪ್ರಚಾರ ಸಭೆಗಳನ್ನು ಸಿಎಂ ಪುತ್ರ ನಕುಲ್‌ನಾಥ್ ನಡೆಸಿಯಾಗಿತ್ತು. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಜುನಾರ್ದೆಯೋ, ಅಮರ್‌ವಾರಾ, ಚುರಾರಿ, ಸೌಂಸಾರ್, ಛಿಂದ್ವಾರಾ, ಪಾರಾಸಿಯಾ ಮತ್ತು ಪಂಧುರಾ ಎಂಬ ಏಳು ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ನಾಲ್ಕು ಕ್ಷೇತ್ರಗಳನ್ನು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾಗಿ ಇರಿಸಲಾಗಿದೆ.
ಬಿಜೆಪಿಯಿಂದ ಯುವ ನಾಯಕ, ಮಾಜಿ ಶಾಸಕ ನಥನ್‌ಸಾಹಾ ಅವರನ್ನು ಮುಖ್ಯಮಂತ್ರಿ ಪುತ್ರನ ವಿರುದ್ಧ ಕಣಕ್ಕೆ ಇಳಿಸಿದೆ. ನಟ್ಟಹಾನ್ ಶಾ ಅವರಿಗೆ ಟಿಕೆಟ್ ನೀಡಿರುವುದರ ವಿರುದ್ಧ ಬಿಜೆಪಿಯ ಮಾಜಿ ಶಾಸಕ ರಾಮದಾಸ್ ಉಯಿಕೆ ಆಕ್ಷೇಪವನ್ನೇ ಮಾಡಿದ್ದಾರೆ. ಆದರೆ ಬಿಜೆಪಿ ನಾಯಕರು ಭಿನ್ನಮತದ ಬಗ್ಗೆ ಹೆಚ್ಚಿನ ಚಿಂತೆ ಮಾಡಿಲ್ಲ.
ಈ ಬಾರಿ ಕಣದಲ್ಲಿ
ನಕುಲ್‌ನಾಥ್ (ಕಾಂಗ್ರೆಸ್)
ನಥನ್‌ಸಾಹಾ(ಬಿಜೆಪಿ)
ಜ್ಞಾನೇಶ್ವರ ಗಜಭೈಯೆ(ಬಿಎಸ್‌ಪಿ)