Advertisement

ರಂಗೇರಿದ ಯೋಗಿ ಅಖಾಡ

12:01 AM May 16, 2019 | Team Udayavani |

ಭಾರತೀಯ ಜನತಾ ಪಾರ್ಟಿಗೆ ಉತ್ತರ ಪ್ರದೇಶದ ಗೋರಖ್‌ಪುರ ಕ್ಷೇತ್ರದಲ್ಲಿನ ಗೆಲುವು ಪ್ರತಿಷ್ಠೆಯ ವಿಷಯವಾಗಿ ಬದಲಾಗಿದೆ. ಗೋರಖ್‌ಪುರ ದಶಕಗಳಿಂದ ಯೋಗಿ ಆದಿತ್ಯನಾಥರ ಅಖಾಡವಾಗಿತ್ತು. ಆದರೆ 2018ರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜವಾದಿ ಪಾರ್ಟಿಯ ಮೈತ್ರಿಯು ಸೋಲಿಸಿತ್ತು. ಅದಕ್ಕೂ ಮುನ್ನ ಒಂದರನಂತರ ಒಂದರಂತೆ ಗೆಲುವು ಸಾಧಿಸುತ್ತಾ ಹೊರಟಿದ್ದ ಉತ್ತರಪ್ರದೇಶ ಬಿಜೆಪಿಗೆ ಗೋರಖ್‌ಪುರದ ಸೋಲು ಬರಸಿಡಿಲಿನಂತೆ ಎರಗಿದ್ದು ಸುಳ್ಳಲ್ಲ.

Advertisement

“”ಆದರೆ ಉಪಚುನಾವಣೆಗೂ ಮತ್ತು ಸಾರ್ವತ್ರಿಕ ಚುನಾವಣೆಗೂ ವ್ಯತ್ಯಾಸವಿದೆ. ಕ್ಷೇತ್ರದ ಜನರು ಈಗ ಮತ್ತೆ ಬಿಜೆಪಿಗೇ ಅಧಿಕಾರ ಕೊಡಲಿದ್ದಾರೆ” ಎನ್ನುವುದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ನಂಬಿಕೆ.

ಈ ಬಾರಿ ಬಿಜೆಪಿಯು ಗೋರಖ್‌ಪುರದಲ್ಲಿ ಖ್ಯಾತ ಭೋಜಪುರಿ-ಹಿಂದಿ ನಟ ರವಿ ಕಿಶನ್‌ರನ್ನು ಕಣಕ್ಕಿಳಿಸಿದೆ. ರವಿ ಕಿಶನ್‌ ಅವರ ಅಭಿಮಾನಿಗಳ ಸಂಖ್ಯೆ ಬೃಹತ್ತಾಗಿಯೇ ಇದೆಯಾದರೂ, ಗೋರಖ್‌ಪುರದಲ್ಲಿ ಅವರಿಗಿಂತ ಹೆಚ್ಚಾಗಿ ಯೋಗಿ ಆದಿತ್ಯನಾಥರೇ ಮಿಂಚುತ್ತಿದ್ದಾರೆ. ಈ ಕ್ಷೇತ್ರದಲ್ಲಿನ ಗೆಲುವನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನುವುದಕ್ಕೆ ಅವರು ನಡೆಸುತ್ತಿರುವ ಸರಣಿ ರ್ಯಾಲಿಗಳೇ ಸಾಕ್ಷಿ. ರವಿ ಕಿಶನ್‌ ಯೋಗಿಯವರ ಮೇಲೆ ಎಲ್ಲಾ ಭಾರವನ್ನು ಹಾಕಿ, ಅವರ ಜೊತೆ ಗೌರವದಿಂದ ಕೈಕಟ್ಟಿಕೊಂಡು ನಿಲ್ಲುವ ದೃಶ್ಯ ಎಲ್ಲಾ ರ್ಯಾಲಿಗಳಲ್ಲೂ ಸಾಮಾನ್ಯವಾಗಿದೆ.

ಈ ಕ್ಷೇತ್ರದ ರಾಜಕೀಯವನ್ನು ಗೋರಖ್‌ನಾಥ್‌ ಮಠದ ಮಹಂತರೇ ದಶಕಗಳಿಂದ ಆಳಿದ್ದಾರೆ. ಯೋಗಿ ಆದಿತ್ಯನಾಥರು ಸತತವಾಗಿ 1998, 1999, 2004, 2009 ಮತ್ತು 2014ರಲ್ಲಿ ಈ ಕ್ಷೇತ್ರದಿಂದ ಗೆದ್ದವರು. ಇದಕ್ಕೂ ಮುನ್ನ ಗೋರಖ್‌ಪುರ ಕ್ಷೇತ್ರವನ್ನು ಆದಿತ್ಯನಾಥರ ಗುರು ಮಹಂತ್‌ ಅವೈದ್ಯನಾಥರು ಪ್ರತಿನಿಧಿಸುತ್ತಿದ್ದರು (1984, 1991 ಮತ್ತು 1996). ಅವೈದ್ಯನಾಥರು 1970ರಲ್ಲಿ ತಮ್ಮ ಗುರು ಮಹಂತ್‌ ದಿಗ್ವಿಜಯ ನಾಥ್‌ರ ಮರಣಾನಂತರ ನಡೆದ ಉಪಚುನಾವಣೆಯಲ್ಲೂ ಗೆದ್ದಿದ್ದರು. ದಿಗ್ವಿಜಯ ನಾಥ್‌ ಅವರು 1967ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರು! 2017ರಲ್ಲಿ ಅವರು ಈ ಸೀಟನ್ನು ಬಿಟ್ಟುಕೊಟ್ಟ ನಂತರ, 2018ರ ಉಪ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಪ್ರವೀಣ್‌ನಿಷಾದ್‌ ಬಿಜೆಪಿಯ ಉಪೇಂದ್ರ ಶುಕ್ಲಾರನ್ನು 21, 881 ಮತಗಳ ಅಂತರದಿಂದ ಸೋಲಿಸಿ ಬಿಜೆಪಿಗೆ ದೊಡ್ಡ ಪೆಟ್ಟು ನೀಡಿದ್ದರು. ಈ ಬಾರಿಯಂತೂ ಚುನಾವಣಾ ಕಣದಲ್ಲಿ ವಿಪರೀತ ಕಾವೇರಿದೆ. ಇತ್ತ ಬಿಜೆಪಿ, ಅತ್ತ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿಯ ಮೈತ್ರಿಕೂಟ, ಮತ್ತೂಂದೆಡೆ ಕಾಂಗ್ರೆಸ್‌ ಇದೆ. ಕಾಂಗ್ರೆಸ್‌ ಈ ಬಾರಿ ಮಧುಸೂಧನ್‌ ತಿವಾರಿಯನ್ನು ಕಣಕ್ಕಿಳಿಸಿದ್ದರೆ, ಸಮಾಜವಾದಿ ಪಕ್ಷವು ರಾಮ್‌ಭುವಾಲ್‌ ನಿಷಾಧ್‌ರಿಗೆ ಟಿಕೆಟ್‌ ನೀಡಿದೆ. ಮೇಲ್ನೋಟಕ್ಕೆ ಇದು ತ್ರಿಕೋನ ಸ್ಪರ್ಧೆ ಎಂದೆನಿಸಿದರೂ ಹೋರಾಟವಿರುವುದು ಬಿಜೆಪಿ ಮತ್ತು ಎಸ್‌ಪಿಯ ನಡುವೆಯೇ ಎನ್ನುತ್ತಾರೆ ರಾಜಕೀಯ ಪಂಡಿತರು.

ಗಮನಾರ್ಹ ಸಂಗತಿಯೆಂದರೆ, 2018ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದ ಪ್ರವೀಣ್‌ ನಿಷಾಧ್‌ ಅವರು ಕಳೆದ ತಿಂಗಳಷ್ಟೇ ಬಿಜೆಪಿಯನ್ನು ಸೇರಿದ್ದಾರೆ. ಹೀಗಾಗಿ, ಅವರ ಬೆಂಬಲಿಗ ಮತಗಳು ಬಿಜೆಪಿಗೆ ಬರಬಹುದಾದ ಸಾಧ್ಯತೆಯೂ ಇಲ್ಲದಿಲ್ಲ. ಈ ಕಾರಣಕ್ಕಾಗಿಯೇ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟವು ನಿಷಾಧ್‌ ಸಮುದಾಯಕ್ಕೆ ಸೇರಿದ ರಾಮ್‌ಭುವಾಲ್‌ ನಿಷಾಧ್‌ಗೆ ಟಿಕೆಟ್‌ ನೀಡಿದೆ ಎನ್ನಲಾಗುತ್ತಿದೆ.

Advertisement

20 ಲಕ್ಷ ಜನಸಂಖ್ಯೆಯಿರುವ ಗೋರಖ್‌ಪುರದಲ್ಲಿ ಬ್ರಾಹ್ಮಣರನ್ನು ಒಳಗೊಂಡು ಮೇಲ್ವರ್ಗದ ಮತದಾರರ ಸಂಖ್ಯೆ 4 ಲಕ್ಷದಷ್ಟಿದೆ. ಈ ಮತಗಳು ಬಿಜೆಪಿಯ ಸಾಂಪ್ರದಾಯಿಕ ಓಟ್‌ಬ್ಯಾಂಕ್‌ ಎಂದು ಗುರುತಿಸಿಕೊಂಡಿವೆ. ಬಿಎಸ್‌ಪಿ ಮತ್ತು ಎಸ್‌ಪಿ ಮೈತ್ರಿಕೂಟವೂ ಇತರೆ ವರ್ಗದ ಮತದಾರರನ್ನು ಸೆಳೆಯುವ ಜಾತಿ ಲೆಕ್ಕಾಚಾರದಲ್ಲಿ ಇವೆ. ಇತರೆ ಹಿಂದುಳಿದ ವರ್ಗಗಳು, ದಲಿತರು ಮತ್ತು ಮುಸಲ್ಮಾನರ ಮತಗಳು ತಮಗೇ ಬರುತ್ತದೆ ಎಂಬ ಭರವಸೆಯಲ್ಲಿದೆ ಈ ಮೈತ್ರಿಕೂಟ. ನಿಷಾಧ್‌ರ ಜನಸಂಖ್ಯೆಯೂ 3.5 ಲಕ್ಷದಷ್ಟಿದ್ದು, ಅದು ಈ ಬಾರಿ ಬಿಜೆಪಿ ಮತ್ತು ಎಸ್‌ಪಿ ಅಭ್ಯರ್ಥಿಯ ನಡುವೆ ಹಂಚಿಹೋಗುವ ಸಾಧ್ಯತೆ ಇದೆ.

ಗೋರಖ್‌ಪುರದ ವ್ಯಾಪ್ತಿಯಲ್ಲಿ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಕ್ಷೇತ್ರಗಳಲ್ಲೆಲ್ಲ ಮೋದಿ, ಅಮಿತ್‌ ಶಾ ಸೇರಿದಂತೆ ಬಿಜೆಪಿಯ ಖ್ಯಾತನಾಮ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 75,000 ಕೋಟಿ ಮೊತ್ತದ ಪಿಎಂ-ಕಿಸಾನ್‌ ಯೋಜನೆಯ ಘೋಷಣೆ ಮಾಡಿದ್ದೂ ಈ ಕ್ಷೇತ್ರದಿಂದಲೇ ಎನ್ನುವುದು ವಿಶೇಷ.

ಈ ಬಾರಿ ಕಣದಲ್ಲಿ
ರವಿ ಕಿಶನ್‌(ಬಿಜೆಪಿ)
ರಾಮ್‌ಭುವಾಲ್‌ ನಿಷಾಧ್‌(ಎಸ್‌ಪಿ)

Advertisement

Udayavani is now on Telegram. Click here to join our channel and stay updated with the latest news.

Next