Advertisement

ಸುನಿಲ್ ಕೋಟೆಯಲ್ಲಿ ಸನ್ನಿ

05:47 AM May 15, 2019 | mahesh |

ಪಂಜಾಬ್‌ನ ಗುರುದಾಸ್‌ಪುರ ಕ್ಷೇತ್ರವೀಗ ಹಾಟ್ಸೀಟ್ ಆಗಿ ಬದಲಾಗಿದೆ. ಕಾಂಗ್ರೆಸ್‌ನ ಹಾಲಿ ಸಂಸದ ಸುನಿಲ್ ಜಾಖಡ್‌ ಮತ್ತು ಬಾಲಿವುಡ್‌ನ‌ ಖ್ಯಾತನಾಮ ಹೀರೋ ಸನ್ನಿ ದೇವಲ್ ನಡುವೆ ಈಗ ಕಾಳಗವೇರ್ಪಟ್ಟಿದೆ. ರಾಜಕೀಯದಲ್ಲಿ ಬಾಲಿವುಡ್‌ ನಟನ ಪ್ರವೇಶವು ದುರುದಾಸ್‌ಪುರವನ್ನು ಕುತೂಹಲದ ಕಣವಾಗಿಸಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ನದ್ದೇ ಸರ್ಕಾರವಿದ್ದು, ಸುನಿಲ್ ಜಾಖಡ್‌ ಅವರು ಪ್ರದೇಶ ಕಾಂಗ್ರೆಸ್‌ನ ಮುಖ್ಯಸ್ಥರೂ ಆಗಿದ್ದಾರೆ. 2017ರ ಉಪಚುನಾವಣೆಯಲ್ಲಿ ಸುಮಾರು 2 ಲಕ್ಷ ಅಂತರಗಳಿಂದ ಅವರು ಗೆದ್ದಿದ್ದರೂ ಈ ಬಾರಿ ಅವರ ಹಾದಿ ಸನ್ನಿ ದೇವಲ್ ಪ್ರವೇಶದಿಂದಾಗಿ ಏಕಾಏಕಿ ಕಠಿಣವಾಗಿ ಬದಲಾಗಿದೆ ಎನ್ನುತ್ತಿದೆ ಬಿಜೆಪಿ. ಆದರೆ, ಕಾಂಗ್ರೆಸ್‌ ಮಾತ್ರ ”ಜನ ಬಾಲಿವುಡ್‌ ಹೀರೋನನ್ನು ನೋಡುವುದಕ್ಕಾಗಿ ಬರುತ್ತಿದ್ದಾರಷ್ಟೇ, ಮತಗಳೇನಿದ್ದರೂ ನಮಗೇ ಬರುವುದು” ಎನ್ನುತ್ತಿದೆ.

Advertisement

ಸಿಎಂ ಅಮರಿಂದರ್‌ ಸಿಂಗ್‌ ಅವರಂತೂ ರ್ಯಾಲಿಯೊಂದರಲ್ಲಿ ಸುನಿಲ್ ಜಾಖಡ್‌ರನ್ನು ‘ಭಾವಿ ಸಿಎಂ’ ಎಂದು ಕರೆದು ಕಾರ್ಯ ಕರ್ತರಲ್ಲಿ ಜೋಶ್‌ ತುಂಬಿಬಿಟ್ಟಿದ್ದಾರೆ. ಬೇರುಮಟ್ಟದಲ್ಲಂತೂ ಕಾಂಗ್ರೆಸ್‌ ಬಲಿಷ್ಠವಾಗಿ ಇದ್ದಂತೆ ಗೋಚರಿಸುತ್ತಿದೆ. ಆದರೆ ಸನ್ನಿ ದೇವಲ್ರ ರೋಡ್‌ ಶೋ ಆರಂಭವಾಗುತ್ತಿದ್ದಂತೆಯೇ, ಈ ಲೆಕ್ಕಾಚಾರವೆಲ್ಲ ಉಲಾr ಆಗಿ ಗೋಚರಿಸಲಾರಂಭಿಸುತ್ತದೆ ಎನ್ನುತ್ತಾರೆ ಅಮರ್‌ ಉಜಾಲಾ ಪತ್ರಿಕೆಗೆ ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು. ಸನ್ನಿಯನ್ನು ನೋಡಲು ಜನ ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದಾರೆ, ಇತ್ತೀಚೆಗೆ ಒಬ್ಬ ಮಹಿಳೆಯಂತೂ ರೋಡ್‌ ಶೋ ಸಮಯದಲ್ಲೇ ಸನ್ನಿ ದೇವಲ್ಗೆ ಮುತ್ತು ಕೊಟ್ಟಿದ್ದರು.

ಆದರೆ ಇವರೆಲ್ಲ ಸನ್ನಿ ದೇವಲ್ಗೆ ಮತಹಾಕುತ್ತಾರೋ ಇಲ್ಲವೋ ಎನ್ನುವ ಗೊಂದಲವಂತೂ ರಾಜಕೀಯ ಪಂಡಿತರಿಗೆ ಇದೆ. ಸನ್ನಿ ದೇವಲ್ರ ದೌರ್ಬಲ್ಯವೆಂದರೆ ಅವರಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ ಎನ್ನುವುದು. ಅವರಿಗೆ ಹೋಲಿಸಿದರೆ ಸುನಿಲ್ ಜಾಖಡ್‌ ಉತ್ತಮ ವಾಗ್ಮಿ. ಇತ್ತೀಚೆಗೆ ಸುನಿಲ್ ಅವರು ಸನ್ನಿ ದೇವಲ್ರನ್ನು ಚರ್ಚೆಗೆ ಆಹ್ವಾನಿಸಿದ್ದರು. ಈ ಸುದ್ದಿ ತಿಳಿದು ಸನ್ನಿ ದೇವಲ್ರ ತಂದೆ ಧರ್ಮೇಂದರ್‌ ಅವರು ”ಸನ್ನಿಗೆ ಚರ್ಚೆ ಮಾಡುವುದಕ್ಕೆ ಬರುವುದಿಲ್ಲ. ನಾವೆಲ್ಲ ಸಿನೆಮಾ ನಟರು, ನಮಗೆ ಭಾಷಣ ಮಾಡಲು ಬರದಿದ್ದರೂ, ಜನರ ನೋವಿಗೆ ಸ್ಪಂದಿಸುವುದಕ್ಕಂತೂ ಬರುತ್ತದೆ” ಎಂದಿದ್ದಾರೆ.

”ಎದುರಾಳಿ ರಾಜಕಾರಣಿಗಳು ಗಂಟೆಗಟ್ಟಲೇ ಮಾತನಾ ಡುತ್ತಾರೆ, ಸನ್ನಿ ಪಾಜೀ ಮಾತ್ರ ನಗುತ್ತಾ ಕೈ ಬೀಸುತ್ತಾರೆ. ಜನರಿಗೆ ಅವರ ಮಾತು ಕೇಳುವ ಮನಸ್ಸಿರುತ್ತದಲ್ಲವೇ?” ಎಂದು ಪ್ರಶ್ನಿಸುತ್ತಿದ್ದಾರೆ ರಾಜಕೀಯ ಪಂಡಿತರು. ಆದರೂ ಸನ್ನಿ ದೇವಲ್ ಅವರ ವರ್ಚಸ್ಸು ಎಷ್ಟು ಅಗಾಧವಾಗಿದೆಯೆಂದರೆ, ಅವರು ಮಾತನಾಡುವುದೇ ಬೇಡ ಎನ್ನುವುದು ಬೆಂಬಲಿಗರ ವಾದ. ಹಿಂದೆಯೂ ಈ ಕ್ಷೇತ್ರದಿಂದ ಬಾಲಿವುಡ್‌ ಸೆಲೆಬ್ರಿಟಿಯೊಬ್ಬರು(ವಿನೋದ್‌ ಖನ್ನಾ) ಸಂಸದರಾಗಿದ್ದರು. ಇದರ ಹೊರತಾಗಿ, ಈ ಕ್ಷೇತ್ರವು ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದೊಂದಿಗೆ ಬೆಸೆದುಕೊಂಡಿದ್ದು, ಇಲ್ಲಿ ಅನೇಕ ಹಾಲಿ ಮತ್ತು ಮಾಜಿ ಸೈನಿಕ ಕುಟುಂಬಗಳು ಇವೆ. ಸಹಜವಾಗಿಯೇ ಸೇನೆಯೆಡೆಗಿನ ಅಭಿಮಾನ, ರಾಷ್ಟ್ರಭಕ್ತಿ ಇಲ್ಲಿ ಕೆಲಸ ಮಾಡುತ್ತದೆ. ಇದು ಬಿಜೆಪಿಗೆ ಪ್ಲಸ್‌ ಪಾಯಿಂಟ್ ಆಗಬಹುದು. ಸನ್ನಿ ದೇವಲ್ ಅವರು ಮೋದಿ-ಅಮಿತ್‌ ಶಾ ಅವರ ಪರಮಾಪ್ತರೆಂದೂ ಕರೆಸಿಕೊಳ್ಳುವುದರಿಂದ ಅವರ ಪರವಾಗಿ ಬಿಜೆಪಿ, ಆರ್‌ಎಸ್‌ಎಸ್‌ನ ಕಾರ್ಯಕರ್ತರು ಬಹಳ ಸಕ್ರಿಯವಾಗಿ ಕೆಲಸಮಾಡುತ್ತಿದ್ದಾರಂತೆ. ಸನ್ನಿ ಪರವಾಗಿ, ಅವರ ಸಹೋದರ ಬಾಬಿ ದೇವಲ್, ಧರ್ಮೇಂದ್ರ ಮತ್ತು ಬಿಜೆಪಿಯ ಅನೇಕ ಹಿರಿಯ ನಾಯಕರು ಪ್ರಚಾರ ಕೈಗೊಂಡಿದ್ದಾರೆ.

ಅತ್ತ ಜಾಖಡ್‌ ಅವರ ಪರವಾಗಿ ಕಾಂಗ್ರೆಸ್‌ನ ನವ ಜನಪ್ರಿಯ ನಾಯಕಿ ಪ್ರಿಯಾಂಕಾ ಗಾಂಧಿ, ಪಂಜಾಬ್‌ ಸಿಎಂ ಅಮರಿಂದರ್‌ ಭರ್ಜರಿ ಪ್ರಚಾರ ನಡೆಸಿದ್ದಾರೆ. ಗಮನಿಸಬೇಕಾದ ಸಂಗತಿ ಯೆಂದರೆ, ಇಬ್ಬರೂ ಅಭ್ಯರ್ಥಿಗಳ ರ್ಯಾಲಿಗಳಲ್ಲೂ ಜನಸಾಗರವೇ ಬರುತ್ತಿದೆ ಎನ್ನುವುದು. ಹೀಗಾಗಿ, ಇವರೇ ಗೆಲ್ಲುತ್ತಾರೆ ಎಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ.

Advertisement

ಕಾಂಗ್ರೆಸ್‌ ಕೊಟೆ ಒಡೆದಿದ್ದ ಖನ್ನಾ: ಗುರುದಾಸ್‌ಪುರವು ಕಾಂಗ್ರೆಸ್‌ನ ಭದ್ರಕೋಟೆಯೆಂದೇ ಕರೆಸಿಕೊಳ್ಳುತ್ತದೆ. ಎರಡು ಉಪಚುನಾವಣೆ ಸಮೇತ ಒಟ್ಟು 18 ಚುನಾವಣೆಯಲ್ಲಿ ಕಾಂಗ್ರೆಸ್‌ 13 ಬಾರಿ ಗೆದ್ದಿದೆ. 1998ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಖನ್ನಾ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಕ್ತಿಯನ್ನು ಕಡಿಮೆ ಮಾಡಿಬಿಟ್ಟರು. ಖನ್ನಾ ಅವರು 98ರಲ್ಲಿ, 2009ರಲ್ಲಿ ಮತ್ತು 2014ರಲ್ಲಿ ಈ ಕ್ಷೇತ್ರದಿಂದ ಗೆದ್ದು ಸಂಸತ್ತು ಪ್ರವೇಶಿಸಿದ್ದರು. 2017ರಲ್ಲಿ ಅವರ ನಿಧನಾ ನಂತರ ತೆರವುಗೊಂಡ ಈ ಕ್ಷೇತ್ರದಲ್ಲಿ ಸುನಿಲ್ ಭಾರೀ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದರು.

ಈ ಬಾರಿ ಕಣದಲ್ಲಿ
ಸನ್ನಿ ದೇವಲ್ (ಬಿಜೆಪಿ)
ಸುನಿಲ್ ಜಾಖಡ್‌ (ಕಾಂಗ್ರೆಸ್‌)

Advertisement

Udayavani is now on Telegram. Click here to join our channel and stay updated with the latest news.

Next