ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ಮಂಗಳಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಹೈಪ್ರೊಫೈಲ್ ಅಭ್ಯರ್ಥಿ ಕಣದಲ್ಲಿದ್ದಾರೆ. ಅವರೇ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪುತ್ರ ಎನ್.ಲೋಕೇಶ್. ಸದ್ಯ ಅವರು ವಿಧಾನ ಪರಿಷತ್ ಸದಸ್ಯರು. 2014ರ ಚುನಾವಣೆಯಲ್ಲಿ ಗೆದ್ದದ್ದು ವೈಎಸ್‌ಆರ್ ಕಾಂಗ್ರೆಸ್‌ನ ಅಲ್ಲ ರಾಮಕೃಷ್ಣ ರೆಡ್ಡಿ.
ಲೋಕೇಶ್ ಸದ್ಯ ಪಂಚಾಯಿತಿ ರಾಜ್ ಮತ್ತು ಗ್ರಾಮೀಣಾ ಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಸಚಿವರೂ ಹೌದು. ಸಿಎಂ ಪುತ್ರನಾ ದ್ದರಿಂದ ಸುಲಭವಾಗಿ ಜಯ ಸಿಗಬಹುದು ಎನ್ನುವ ಲೆಕ್ಕಾಚಾರ ದಿಂದ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಲಾಗಿದೆ.
ಆದರೆ ಜಯದ ನಿರೀಕ್ಷೆಯಲ್ಲಿರುವ ಮುಖ್ಯಮಂತ್ರಿ ನಾಯ್ಡುರ ಪುತ್ರನಿಗೆ ಸುಲಭವಾಗಿ ದಡ ಸೇರುವುದು ಕಷ್ಟ ಸಾಧ್ಯ ಎಂಬ ಅಭಿಪ್ರಾಯವಿದೆ. ಈ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಗಳಲ್ಲಿ ಕೇವಲ 2 ಬಾರಿ ಅಂದರೆ 1983, 1985 ಚುನಾವಣೆಗಳಲ್ಲಿ ಗೆದ್ದಿತ್ತು ಟಿಡಿಪಿ. ಒಟ್ಟು 12 ಚುನಾವಣೆಗಳ ಪೈಕಿ ನಾಲ್ಕು ಬಾರಿ ಸಿಪಿಎಂ, ಸಿಪಿಐ ಗೆದ್ದಿತ್ತು. ಹೀಗಾಗಿ ಒಂದೊಮ್ಮೆ ಎಡಪಕ್ಷಗಳ ಶಕ್ತಿ ಕೇಂದ್ರವೂ ಆಗಿತ್ತು.
ಪುತ್ರ ಗೆದ್ದರೆ ಹಾಗೂ ಟಿಡಿಪಿ ಅಧಿಕಾರ ಉಳಿಸಿಕೊಂಡರೆ ಲೋಕೇಶ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಿ, ತಾನು ನವದೆಹಲಿಯ ರಾಜಕೀಯ ಪ್ರಭಾವಳಿಯಲ್ಲಿ ಮಿಂಚಬಹುದೆಂಬ ಬಗ್ಗೆ ಮಂಡಿಗೆ ತಿನ್ನುತ್ತಿದ್ದಾರೆ ಚಂದ್ರಬಾಬು. ಹೇಳಿ ಕೇಳಿ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ಇದ್ದಾರೆ. ಆಂಧ್ರಪ್ರದೇಶದಲ್ಲಿ ಅವರಿಗೆ ಪದ್ಮಶಾಲಿಗಳೆಂದು ಕರೆಯುತ್ತಾರೆ. ಈ ಸಮುದಾಯದವರಿಗೆ ಲೋಕೇಶ್‌ರನ್ನು ಕ್ಷೇತ್ರದ ಶಾಸಕರನ್ನಾಗಿ ಆಯ್ಕೆ ಮಾಡಲು ಇಷ್ಟವಿಲ್ಲ. 1989ರಿಂದ 2009ರವರೆಗೆ ಪದ್ಮಶಾಲಿ ಸಮುದಾಯದವರೇ ಶಾಸಕರಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಟಿಡಿಪಿಯಿಂದ ಅದೇ ಸಮುದಾಯದ ಗಂಜಿ ಚಿರಂಜೀವಿ ಅವರನ್ನು ಕಣಕ್ಕೆ ಇಳಿಸಿತ್ತು. ಹಾಲಿ ಶಾಸಕ ಅಲ್ಲ ರಾಮಕೃಷ್ಣ ರೆಡ್ಡಿ ಎದುರು ಕೆಲವೇ ಮತಗಳ ಅಂತರದಿಂದ ಸೋತಿದ್ದರು. ಸಮುದಾಯದ ನಾಯಕರ ಪ್ರಕಾರ ಅಲ್ಲಿ 55 ಸಾವಿರ ಮತಗಳು ಇವೆ.
ಕಮ್ಮ ಸಮುದಾಯಕ್ಕೆ ಸೇರಿದ ಲೋಕೇಶ್ ಆಯ್ಕೆಯಾದರೆ, ರತ್ನಯ್ಯ ಚೆರುವು ಎಂಬಲ್ಲಿ ವಾಸಿಸುತ್ತಿರುವ 5 ಸಾವಿರ ಮಂದಿಯನ್ನು ಒಕ್ಕಲೆಬ್ಬಿಸಿ, ಅಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಮುಂದಾಗಬಹುದು ಎಂಬ ಅಳುಕು ಇದೆ.
ಇದರ ಜತೆಗೆ ಹಾಲಿ ಸರ್ಕಾರದ ಅವಧಿಯಲ್ಲಿ ವಾಗ್ಧಾನ ಮಾಡಲಾಗಿದ್ದ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಯಾಗಿಲ್ಲವೆಂಬ ಕೊರಗು ಸ್ಥಳೀಯರಲ್ಲಿದೆ.