ರೋಣ: ಅತಿವೃಷ್ಟಿ ಮತ್ತು ಮಲಪ್ರಭ ನದಿ ಪ್ರವಾಹಕ್ಕೆ 2019ರಲ್ಲಿ ಮನೆ ಕಳೆದುಕೊಂಡಿದ್ದು, ಮನೆ ಹಾನಿ ಪರಿಹಾರಕ್ಕೆ ಕಳೆದ 2 ವರ್ಷದಿಂದ ತಹಶೀಲ್ದಾರ್ ಕಚೇರಿ, ಗ್ರಾಪಂಗೆ ಅಲೆಯುತ್ತಿದ್ದರೂ ಯಾರೊಬ್ಬರೂ ಸ್ಪಂದಿಸಿಲ್ಲ ಎಂದು ಹೊಳೆಆಲೂರ ಗ್ರಾಮದ 8ನೇ ವಾರ್ಡ್ ಸಂತ್ರಸ್ತೆ ಭೀಮವ್ವ ಓಲೇಕಾರ ಲೋಕಾಯುಕ್ತರಲ್ಲಿ ದೂರು ಸಲ್ಲಿಸಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಗುರುವಾರ ಆಗಮಿಸಿದ್ದ ಜಿಲ್ಲಾ ಲೋಕಾಯುಕ್ತ ಅಧಿಕಾರಿ ರವಿ ಪುರುಷೋತ್ತಮ ಅವರಲ್ಲಿ ಅಳಲು ತೋಡಿಕೊಂಡ ಮಹಿಳೆ, ನಾನು ವಿಧವೆ. ಗಂಡ ಸತ್ತು 9 ವರ್ಷವಾಗಿದೆ. 11 ವರ್ಷದ ಹೆಣ್ಣು ಮಗುವಿನೊಂದಿಗೆ ನೆರೆ ಹಾವಳಿಯಿಂದ ಬಿದ್ದ ಮನೆಯಲ್ಲೇ ಜೀವನ ಸಾಗಿಸುತ್ತಿದ್ದೇನೆ. ಮನೆ ದುರಸ್ತಿಗೆ ಪರಿಹಾರ ನೀಡಿ ಎಂದು ಎಷ್ಟೇ ಗೋಗರೆದರೂ ಯಾವ ಅಧಿಕಾರಿಗಳು ಕೇಳುತ್ತಿಲ್ಲ ಎಂದು ಹೇಳಿದರು.
ನನ್ನ ಮನೆ ಅಕ್ಕ ಪಕ್ಕದಲ್ಲಿ ಸ್ವಲ್ಪ ಮಟ್ಟಿಗೆ ಬಿದ್ದಿರುವ ಮನೆಗಳಿಗೆ ಪರಿಹಾರ ಕೊಟ್ಟಿದ್ದಾರೆ. ಆದರೆ ನನ್ನ ಮನೆ ಹಾನಿಗೆ ಪರಿಹಾರ ಕೊಟ್ಟಿಲ್ಲ. ಸಾಕಷ್ಟು ಬಾರಿ ಗ್ರಾಪಂ, ತಹಶೀಲ್ದಾರ್ ಕಚೇರಿಗೆ ಅಲೆದರೂ ಏನಾದರೊಂದು ಸಬೂಬು ಹೇಳುತ್ತಾರೆ. ಇದರಿಂದ ನನಗೆ ಅನ್ಯಾಯವಾಗಿದೆ. ನೀವಾದರೂ ನ್ಯಾಯ ಒದಗಿಸಿಕೊಡಿ ಎಂದು ಕಣ್ಣೀರು ಹಾಕಿದಳು.
ಲೋಕಾಯುಕ್ತ ಅಧಿಕಾರಿ ರವಿ ಪುರುಷೋತ್ತಮ, ಉಪ ತಹಶೀಲ್ದಾರ್ ಜೆ.ಟಿ. ಕೊಪ್ಪದ ಅವರನ್ನು ಕರೆಸಿ ತರಾಟೆಗೆ ತೆಗೆದುಕೊಂಡು ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸುವಲ್ಲಿ ಕಾರ್ಯ ಕೈಗೊಳ್ಳಿ ಎಂದು ತಾಕೀತು ಮಾಡಿದರು. ಆಗ ಉಪ ತಹಶೀಲ್ದಾರ್ ಜೆ.ಟಿ. ಕೊಪ್ಪದ ಪ್ರತಿಕ್ರಿಯಿಸಿ, ಕೂಡಲೇ ಹೊಳೆಆಲೂರ ತೆರಳಿ, ವಸ್ತುಸ್ಥತಿ ಪರಿಶೀಲಿಸಿ ಮನೆ ಹಾನಿ ಪರಿಹಾರ ಬಿಡುಗಡೆಗೆ ಶ್ರಮಿಸಲಾಗುವುದುದು ಎಂದರು.
ಅಸೂಟಿ ಗ್ರಾಮದ ವೀಕಲಚೇತನ ಹನಮವ್ವ ಬಂಡಿವಡ್ಡರ ಅವರಿಗೆ ಕಳೆದೊಂದು ವರ್ಷದಿಂದ ಮಾಸಾಶನ ಬರುತ್ತಿಲ್ಲ. ಈ ಕುರಿತು ತಹಶೀಲ್ದಾರ್ ಕಚೇರಿಯಲ್ಲಿ ಕೇಳುತ್ತಿದ್ದರೂ ಸ್ಪಂದನೆ ನೀಡುತ್ತಿಲ್ಲ ಎಂದು ಹನಮವ್ವ ಬಂಡಿವಡ್ಡರ ಅಜ್ಜ ಮಲ್ಲಪ್ಪ ವಡ್ಡರ( ಮಾದರ) ಅಳಲು ತೋಡಿಕೊಂಡರು.
ಪಡಿರತ ಚೀಟಿ ಪಡೆಯಲು ಕಳೆದೊಂದು ವರ್ಷದಿಂದ ಅರ್ಜಿ ಸಲ್ಲಿಸಿದ್ದು, ಈವರೆಗೂ ಪಡಿತರಕ್ಕಾಗಿ ನಿತ್ಯ ತಹಶೀಲ್ದಾರ್, ಆಹಾರ ವಿಭಾಗ ಕಚೇರಿಗೆ ಅಲೆದು ಸಾಕಾಗಿದೆ ಎಂದು ರೋಣ ಪಟ್ಟಣದ ಲಲಿತಾ ಬಡಿಗೇರ ದೂರು ಸಲ್ಲಿಸಿದರು.