Advertisement

ವೆನ್ಲಾಕ್, ಲೇಡಿಗೋಶನ್‌ಗೆ ಲೋಕಾಯುಕ್ತ ದಿಢೀರ್‌ ಭೇಟಿ

09:31 AM Jun 23, 2018 | Harsha Rao |

ಮಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರು ಶುಕ್ರವಾರ ಮಂಗಳೂರಿನ ವೆನ್ಲಾಕ್ ಹಾಗೂ ಲೇಡಿಗೋಶನ್‌ ಸರಕಾರಿ ಆಸ್ಪತ್ರೆಗಳಿಗೆ ದಿಢೀರ್‌ ಭೇಟಿ ನೀಡಿ ಕುಂದುಕೊರತೆಗಳ ಬಗ್ಗೆ ಪರಿಶೀಲಿಸಿದರು.
ಬಂಟ್ವಾಳ ಪ್ರದೇಶಕ್ಕೆ ಅಧಿಕೃತ ಭೇಟಿಗೆಂದು ಗುರುವಾರ ರಾತ್ರಿ ನಗರಕ್ಕೆ ಆಗಮಿಸಿದ್ದ ಅವರು ಶುಕ್ರವಾರ ಮಧ್ಯಾಹ್ನ ವೆನ್ಲಾಕ್ ಆಸ್ಪತ್ರೆಗೆ ಹಾಗೂ ಮಧ್ಯಾಹ್ನ ಬಳಿಕ ಲೇಡಿಗೋಶನ್‌ ಆಸ್ಪತ್ರೆಗಳಿಗೆ ಭೇಟಿ ನೀಡಿದರು. 

Advertisement

ವೆನ್ಲಾಕ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ ತಪಾಸಣೆಗೆ ಕಾಯುತ್ತಿರುವುದು ಕಂಡು ಬಂತು. ತಾವು ಹಾಸ್ಟೆಲ್‌ ವಿದ್ಯಾರ್ಥಿಗಳಾಗಿದ್ದು, ಆರೋಗ್ಯ ತಪಾಸಣೆಗೆ ಆಗಮಿಸಿರುವುದಾಗಿ ಅವರು ತಿಳಿಸಿದರು. ಆದರೆ ಅವರ ಜತೆ ವಾರ್ಡನ್‌ ಇಲ್ಲದೆ ಇರುವುದನ್ನು ಗಮನಿಸಿದ ಲೋಕಾಯುಕ್ತರು ಈ ರೀತಿ ದಿಢೀರನೆ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಹೊರಬಂದಿರುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಹಾಗೂ ಹಾಸ್ಟೆಲ್‌ ವಾರ್ಡನ್‌ಗೆ ನೋಟಿಸ್‌ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವೆನ್ಲಾಕ್ ಆಸ್ಪತ್ರೆಯ ಹೊಸ ಕಟ್ಟಡ, ಆಸ್ಪತ್ರೆಯ ಐಸಿಯು ಹಾಗೂ ರೋಗಿಗಳ ವಿಭಾಗವನ್ನು ವೀಕ್ಷಿಸಿದರು. ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಭಾರತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್‌, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ| ರಾಜೇಶ್ವರಿ ದೇವಿ ಉಪಸ್ಥಿತರಿದ್ದರು.

ಜೂ. 25: ಮತ್ತೆ ಮಂಗಳೂರಿಗೆ ? 
ಲೋಕಾಯುಕ್ತ  ನ್ಯಾ|ವಿಶ್ವನಾಥ ಶೆಟ್ಟಿ ಅವರು ಜೂ. 25ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ನಗರದ ಸಕೀìಟ್‌ ಹೌಸ್‌ನಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೇಡಿಗೋಶನ್‌ ಬಗ್ಗೆ  ಸರಕಾರಕ್ಕೆ  ಪತ್ರ
ಲೇಡಿಗೋಶನ್‌ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವರಾಂಡದಲ್ಲಿ ಬೆಡ್‌ ಹಾಕಿರುವುದು ಹಾಗೂ ಎಲ್ಲ ವಾರ್ಡ್‌ಗಳು ಭರ್ತಿಯಾಗಿ ಕಾರಿಡಾರ್‌ನಲ್ಲಿ ನಡೆದಾಡಲು ಕಷ್ಟಕರ ಪರಿಸ್ಥಿತಿ ಕಂಡು ಬಂತು. ಈ ಬಗ್ಗೆ ಲೋಕಾಯುಕ್ತರು ಅಧೀಕ್ಷಕರಲ್ಲಿ, ಆಸ್ಪತ್ರೆಯು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳದಿರುವ ಬಗ್ಗೆ ವಿಚಾರಿಸಿದರು.
ಎಂ.ಆರ್‌.ಪಿ.ಎಲ್‌. ಅನುದಾನದಲ್ಲಿ ಹೊಸ ಕಟ್ಟಡ ಸಿದ್ಧಗೊಂಡಿದೆ. ಆದರೆ ಅಲ್ಲಿಗೆ ಉಪಕರಣ ಬಂದಿಲ್ಲ. ಅಲ್ಲದೆ ವೈದ್ಯಾಧಿಕಾರಿಗಳು ಹಾಗೂ ಸಿಬಂದಿ ನೇಮಕ ಆಗಬೇಕಾಗಿದೆ. ಹಾಗಾಗಿ ಸ್ಥಳಾಂತರಗೊಳ್ಳಲು ವಿಳಂಬವಾಗುತ್ತಿದೆ ಎಂದು ಅಧೀಕ್ಷಕರು ಮಾಹಿತಿ ನೀಡಿದರು. 

Advertisement

ಮೂಲಸೌಕರ್ಯ ಮತ್ತು ಸಿಬಂದಿ ಇಲ್ಲದೆ ಹೇಗೆ ಸ್ಥಳಾಂತರಗೊಳ್ಳುತ್ತೀರಿ ಎಂದು ಲೋಕಾಯುಕ್ತರು ಪ್ರಶ್ನಿಸಿದರು. ಹೊಸ ಕಟ್ಟಡ ನಿರ್ಮಾಣಗೊಂಡ ಬಳಿಕವೂ ರೋಗಿಗಳನ್ನು  ಸ್ಥಳಾಂತರಿ ಸದೆ ಇರುವುದು ಸರಿಯಲ್ಲ. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next