Advertisement

ಲೋಕಾ ಫ‌ಲಿತಾಂಶದತ್ತ ಮತದಾರರ ಚಿತ್ತ

04:14 PM Apr 26, 2019 | Team Udayavani |
● ಬಿ.ವಿ.ಸೂರ್ಯ ಪ್ರಕಾಶ್‌

ರಾಮನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆ ಮುಗಿದಿದೆ. ಮತದಾನ ಕುತೂಹಲವನ್ನು ಮತದಾನದ ಪ್ರಮಾಣದ ಅಂಕಿ- ಅಂಶಗಳು ತಣಿಸಿವೆ. ಇದೀಗ ಫ‌ಲಿತಾಂಶದ ಕುತೂಹಲ ಜಿಲ್ಲೆಯ ಜನತೆಯಲ್ಲಿ ಕೆರಳಿದೆ. ಜನಸಾಮಾನ್ಯರಲ್ಲಿ ಬೆಂಗಳೂರು ಗ್ರಾಮಾಂತರಕ್ಕಿಂತ ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಕುತೂಹಲವೇ ಹೆಚ್ಚಾಗಿದೆ.

Advertisement

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳು ತಮ್ಮ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರ ಗೆಲುವಿನ ಅಂತವನ್ನು ಲೆಕ್ಕಹಾಕುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿ ಕಾರ್ಯಕರ್ತರು ಜಿಲ್ಲೆಯಲ್ಲಿ ಅಂತರ್ಗಾಮಿಯಾಗಿದ್ದ ಬಿಜೆಪಿ ಬಗೆಗಿನ ಅಭಿಮಾನ ಎಷ್ಟು ಮತಗಳನ್ನು ತಂದುಕೊಡಲಿದೆ. ಬೆಂಗಳೂರು ನಗರ ವ್ಯಾಪ್ತಿಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಡಿಮೆ ಮತದಾನದ ನಡುವೆ ಯೂ ತಮ್ಮ ಅಭ್ಯರ್ಥಿಯ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.

ಬೂತ್‌ ಮಟ್ಟದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿ ಆಗಿರುವ ಮತದಾನದ ಅಂಕಿ-ಅಂಶವನ್ನು ಹಿಡಿದು ಜಾತಿ ಲೆಕ್ಕಾಚಾರ, ಜೆಡಿಎಸ್‌- ಕಾಂಗ್ರೆಸ್‌ನ ನಡುವೆ ಇದ್ದ ವೈರತ್ವ ಇತ್ಯಾದಿ ವಿಚಾರಗಳನ್ನು ಅಳೆದು ಸುರಿದು, ತಮ್ಮ ಅಭ್ಯರ್ಥಿಗೆ ಸಿಕ್ಕಿರಬಹುದಾದ ಮತಗಳ ಬಗ್ಗೆ ತಲೆ ಕೆಡೆಸಿಕೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಮುಖಂಡರ ಈ ದೊಂಬರಾಟವನ್ನು ಕಂಡು ಮತದಾರ ಮೇ 23ಕ್ಕೆ ತಮ್ಮ ನಿರ್ಧಾರ ಪ್ರಕಟವಾಗಲಿದೆ ಎಂದು ಮನದಲ್ಲೇ ತಲ್ಲಣಿಸುತ್ತಿದ್ದಾರೆ.

ಬೆಟ್ಟಿಂಗ್‌ ದಂಧೆ: ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿಯ ಪರ ಮತ್ತು ವಿರೋಧ ಬೆಟ್ಟಿಂಗ್‌ ದಂಧೆ ಸದ್ದಿಲ್ಲದೆ ನಡೆಯುತ್ತಿದೆ. ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರ ಪರ ಮತಗಳ ಅಂತರದ ಗೆಲುವಿನ ಬಗ್ಗೆಯೇ ಹೆಚ್ಚು ಬೆಟ್ಟಿಂಗ್‌ ನಡೆಯುತ್ತಿದೆ. ಡಿ.ಕೆ.ಸುರೇಶ್‌ ಪರಮಾಪ್ತರ ಪೈಕಿ ಕೆಲವರು 2 ಲಕ್ಷ ಮತಗಳ ಲೀಡ್‌ ಬಗ್ಗೆ ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ ಎಂಬ ಸುದ್ದಿ ಹರಡಿದೆ.

ಮಂಡ್ಯ ಕುತೂಹಲ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಫ‌ಲಿತಾಂಶಕ್ಕಿಂತ ನೆರೆ ಜಿಲ್ಲೆ ಮಂಡ್ಯ ಲೋಕಸಭಾ ಕ್ಷೇತ್ರದ ಫ‌ಲಿತಾಂಶದ ಬಗ್ಗೆಯೇ ಹೆಚ್ಚು ಕತೂಹಲ ಜಿಲ್ಲೆಯಲ್ಲಿದೆ ಎಂಬುದು ಅತಿಶಯೋಕ್ತಿಯಲ್ಲ. ಪ್ರತಿ ಟೀ ಅಂಗಡಿ, ಹೋಟೆಲ್ಗಳು, ರಾಜಕೀಯ ಕಾರ್ಯಕರ್ತರ ಅಡ್ಡಗಳು, ಗ್ರಾಮಾಂತರ ಪ್ರದೇಶಗಳಲ್ಲಿ ಅರಳಿ ಕಟ್ಟೆಗಳು, ಮಿತ್ರರ ಅಡ್ಡಗಳಲ್ಲಿ ಮಂಡ್ಯ ರಾಜಕೀಯದ್ದೇ ಮಾತು.

Advertisement

ರಾಮನಗರ ಜಿಲ್ಲೆಯ ಕೆಲವು ಭಾಗಗಳಲ್ಲಿ ನಿಖೀಲ್ ಗೆಲುವಿನ ಬಗ್ಗೆ 2 ರಿಂದ 3 ಲಕ್ಷ ರೂ ಬೆಟ್ಟಿಂಗ್‌ ನಡೆಯುತ್ತಿದ್ದರೆ, ಸುಮಲತಾ ಗೆಲುವಿಗೆ 5 ಲಕ್ಷ ಬೆಟ್ಟಿಂಗ್‌ ನಡೆಯುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಕೆಲವರು ಬೈಕ್‌ ಮುಂತಾದವುಗಳನ್ನು ಬೆಟ್ಟಿಂಗ್‌ಗೆ ಇಟ್ಟಿದ್ದಾರೆ ಎಂದು ಗೊತ್ತಾಗಿದೆ. ಏಪ್ರಿಲ್ 18ರ ಕುತೂಹಲ ತಣಿದಿದ್ದು, ಇದೀಗ ಮೇ 23 ಕುತೂಹಲ ಹೆಚ್ಚಾಗಿದೆ. ಬೇಸಿಗೆಯ ಬಿಸಿಲಿನ ಜಳದ ನಡುವೆ ಚುನಾವಣಾ ಫ‌ಲಿತಾಂಶದ ಬಿಸಿಯೂ ಏರುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next