ನೆಲಮಂಗಲ : ನಕಲಿ ಅನುಮತಿ ಪತ್ರಗಳನ್ನು ನೀಡುವ ಮೂಲಕ ಅಕ್ರಮವಾಗಿ ದಾಸ್ತಾನು ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿ ಸರ್ಕಾರಕ್ಕೆ ಮೋಸಮಾಡಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಹಗಲು ದರೋಡೆ ಬೆಳಕಿಗೆ ಬಂದಿದೆ.
ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ದಾಸ್ತಾನು ಕಟ್ಟಡಗಳಿಗೆ ಅನುಮತಿ ನೀಡುವಲ್ಲಿ ವಂಚನೆ ನಡೆದಿದೆ ಹಾಗೂ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಲೋಕಾಯುಕ್ತರಿಗೆ ದೂರು ನೀಡಿದೆ.ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಹಿರಿಯ ಅಧಿಕಾರಿ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.
ಕಂದಾಯ ದೋಖಾ: ಇಂದಿರಾ ದಾಸ್ತಾನಿನ ಆರು ಗೋದಾಮಿನ ಸತೀಶ್ ಆಳ್ವಾ, ವಿನಯ್ ಕುಮಾರ್, ಸಿದ್ದಪ್ಪ, ಕರಾನಿಯ ಗ್ರೂಪ್ಸ್ ಸೇರಿದಂತೆ ನಾಲ್ಕು ವರ್ಷಗಳಿಂದ ಕಂದಾಯ ಕಟ್ಟಿಲ್ಲ. ಒಟ್ಟು ಆರು ದಾಸ್ತಾನು ಗೋದಾಮುಗಳಿಂದ ಪಂಚಾಯತಿಗೆ ಅಂದಾಜು 31 ಲಕ್ಷ 58 ಸಾವಿರ ರೂ.ಹಣ ಸಂದಾಯವಾಗಬೇಕಾಗಿದೆ, 2017ರಲ್ಲಿ ನಕಲಿ ದಾಖಲೆ ಮತ್ತು ಅವ್ಯವಾಹರದ ಕುರಿತು ಅಧ್ಯಕ್ಷರ ಮೇಲೆ ತ್ಯಾಮಗೊಂಡ್ಲು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಕೇಸಿನ ವಿಚಾರವಾಗಿ 2019ರ ಏಪ್ರಿಲ್‌ನಲ್ಲಿ ಠಾಣೆಯಿಂದ ನ್ಯಾಯಾಲಯಕ್ಕೆ ಬಿ ರೀಪೋರ್ಟ್ ಸಲ್ಲಿಸಿ ಕೇಸ್ ವಜಾಗೊಳಿಸಲಾಗಿತ್ತು. ಅದರೆ ಇದರಲ್ಲಿ ಅಕ್ರಮ ನಡೆದಿರುವುದು ಕಂಡು ಬರುತ್ತಿರುವ ಕಾರಣ ಪಂಚಾಯತ್ ರಾಜ್ ಇಲಾಖೆಯು ಕಂದಾಯ ದೋಖಾದ ಬಗ್ಗೆ ಲೋಕಾಯುಕ್ತ ತನಿಖೆಗೆ ನೀಡಿದೆ.
ನಕಲಿ ದಾಖಲೆ ಪತ್ರಗಳು : ಕಟ್ಟಡ ನಿರ್ಮಿಸಲು ಸ್ಥಳೀಯ ಪಂಚಾಯಿತಿಯಲ್ಲಿ ಪಡೆಯಬೇಕಾದ ಜನರಲ್ ಲೈಸೆನ್ಸ್ ಪತ್ರ ಹಾಗೂ ಕಟ್ಟಡ ನಿರ್ಮಿಸಲು ಪಡೆಯಬೇಕಾದ ಅನುಮತಿ ಪತ್ರಗಳನ್ನು ನಕಲು ಮಾಡಿದ್ದಾರೆ ಹಾಗೂ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಸ್ಥಳೀಯ ನೆಲಮಂಗಲ ಯೋಜನಾ ಪ್ರಾಧಿಕಾರದಿಂದ ಕಟ್ಟಡದ ನಕ್ಷೆ ಅನುಮೋದನೆಯ ಅನುಮತಿ ಪತ್ರವನ್ನು ಪಡೆಯಬೇಕು ಈ ಪತ್ರವನ್ನು ಪಡೆಯದೇ ಕಟ್ಟಡಗಳು ನಿರ್ಮಿಸಿದ್ದು ದೂರಿಗೆ ಕಾರಣವಾಗಿದೆ.
ಲೋಕಾಯುಕ್ತ ಹಿರಿಯ ಅಧಿಕಾರಿ ಶ್ರೀನಿವಾಸಮೂರ್ತಿ ಪ್ರತಿಕ್ರಿಯಿಸಿ ಕಳೆದ 2018ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಡೆಯಿಂದ ಕಳಲುಘಟ್ಟ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸಲು ನೀಡಿರುವ ದಾಖಲೆ ಪತ್ರಗಳು ನಕಲಿಯಾಗಿರುವ ಬಗ್ಗೆ ತನಿಖೆಯಾಗಬೇಕು ಎಂದು ಲೋಕಾಯುಕ್ತ ಇಲಾಖೆಗೆ ದೂರು ನೀಡಿದೆ, ಅದರಂತೆ ಮರುಪರಿಶೀಲನೆ ಮಾಡುವ ಸಲುವಾಗಿ ಅಗತ್ಯ ದಾಖಲೆ ಪತ್ರಗಳ ತನಿಖೆಯನ್ನು ಮಾಡುತ್ತಿದ್ದೇವೆ ಎಂದರು.