Advertisement

Lokayukta Raid: 11 ಕಡೆ ಭೂಮಾಪನ ಕಚೇರಿಗಳಲ್ಲಿ ಲೋಕಾ ದಾಳಿ

01:38 PM Nov 21, 2023 | Team Udayavani |

ಬೆಂಗಳೂರು: ಭೂಮಾಪನ ಇಲಾಖೆಯ ಕಚೇರಿಗಳಲ್ಲಿ ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ನಿರಂತರ ಆರೋಪಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಸೋಮವಾರ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 11 ಕಡೆ ಏಕಕಾಲದಲ್ಲಿ ದಾಳಿ ನಡೆಸಿ ನಗದು ಹಾಗೂ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ್‌ ನೇತೃತ್ವದಲ್ಲಿ ಲೋಕಾಯುಕ್ತದ ನ್ಯಾಯಾಂಗ ಮತ್ತು ಪೊಲೀಸ್‌ ವಿಭಾಗಗಳ ಅಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ತಾಲೂಕು, ಬೆಂಗಳೂರು ಉತ್ತರ ತಾಲೂಕು, ಬೆಂಗಳೂರು ಪೂರ್ವ ತಾಲೂಕು, ಯಲಹಂಕ, ಬೆಂಗಳೂರು ಗ್ರಾಮಾಂ ತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ಮತ್ತು ಆನೇಕಲ್‌ ತಾಲೂಕುಗಳ ಒಟ್ಟು 11 ಭೂ ಮಾಪನ ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧಿಸಿದ್ದಾರೆ.

ಭೂಮಾಪನ ಇಲಾಖೆಯ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಚಾರ ನಡೆಯುತ್ತಿರುವ ಸಂಬಂಧ ಸಾರ್ವಜನಿಕರಿಂದ ಲೋಕಾಯುಕ್ತ ಕಚೇರಿಗೆ ನಿರಂತರ ದೂರುಗಳು ಬರುತ್ತಿದ್ದವು. ಹೀಗಾಗಿ ಲೋಕಾಯುಕ್ತ ನ್ಯಾಯಾಂಗ ಮತ್ತು ಪೊಲೀಸ್‌ ವಿಭಾಗದಿಂದ ಗೌಪ್ಯ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿತ್ತು. ಈ ವೇಳೆ ಅಕ್ರಮಗಳು ನಡೆಯುತ್ತಿರುವುದು ಪತ್ತೆಯಾಗಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿ ಕಚೇರಿಗಳಲ್ಲಿ ಶೋಧ ನಡೆಸಲಾಯಿತು. ಭೂಮಾಪನ, ಹದ್ದುಬಸ್ತು, ನಕ್ಷೆ ಇತರೆ ವಿಚಾರಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಯಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಕುರಿತು ಪರಿಶೀಲನೆ ನಡೆಸಲಾಯಿತು. ಕಚೇರಿ ಒಳಗಿನ ಕಂಪ್ಯೂಟರ್‌ ದಾಖಲೆಗಳು ಸೇರಿ ಅಧಿಕಾರಿಗಳಿಗೆ ಸಂಬಂಧಪಟ್ಟ ಬ್ಯಾಗ್‌ಗಳನ್ನು ಪರಿಶೀಲಿಸಲಾಯಿತು. ಈ ವೇಳೆ ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

43 ಸಾವಿರ ನಗದು ಪತ್ತೆ: ಲೋಕಾಯುಕ್ತ ಬಿ. ಎಸ್‌.ಪಾಟೀಲ್‌ ಅವರು ಖುದ್ದಾಗಿ ಬೆಂಗಳೂರು ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಕಂದಾಯ ಭವನದಲ್ಲಿರುವ ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಭೂಮಾಪನ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯ ಚಟುವಟಿಕೆಗಳ ಬಗ್ಗೆ ಪರಿಶೀಲಿಸಿದರು. ನಂತರ ಬೆಂಗಳೂರು ಪೂರ್ವ ತಾಲೂಕು ಕಚೇರಿಯಲ್ಲಿರುವ ಭೂಮಾಪನ ಇಲಾಖೆ ಕಚೇರಿಗೂ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಭೂಮಾಪನ ಕಚೇರಿಗೆ ಭೇಟಿ ನೀಡಿದ್ದ ವೇಳೆ ಸಿಬ್ಬಂದಿಯೊಬ್ಬರ ಬಳಿ 43 ಸಾವಿರ ರೂ.ನಗದು ಪತ್ತೆಯಾಗಿದೆ.

Advertisement

ಈ ಬಗ್ಗೆ ಆತನನ್ನು ವಿಚಾರಣೆ ನಡೆಸಿದಾಗ, “ತನ್ನ ಮಗಳ ಶಾಲಾ ಶುಲ್ಕ ಪಾವತಿಸಲು ಹಣ ಇಟ್ಟುಕೊಂಡಿರುವುದಾಗಿ’ ಸಬೂಬು ನೀಡಿದ್ದಾನೆ. ಅದರಿಂದ ಗರಂ ಆದ ಲೋಕಾಯುಕ್ತರು ಹಣ ತಂದಿರುವ ಬಗ್ಗೆ ರಿಜಿಸ್ಟ್ರರ್‌ನಲ್ಲಿ ಏಕೆ ಉಲ್ಲೇಖೀಸಲಿಲ್ಲ ಎಂದು ಪ್ರಶ್ನಿಸಿದಾಗ, ತಬ್ಬಿಬ್ಟಾಗಿದ್ದಾರೆ. ಬಳಿಕ ಆ ಹಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದರು.

ವಿನಾಕಾರಣ ಅರ್ಜಿ ತಿರಸ್ಕೃತ, ರಿಜಿಸ್ಟ್ರರ್‌ ಸರಿ ಇಲ್ಲ : ಕಾರ್ಯಾಚರಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌ .ಪಾಟೀಲ್‌, ನಗರದ ಎಲ್ಲಾ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗಳಿಗೆ ದಿಢೀರ್‌ ಭೇಟಿ ನೀಡಲಾಗುತ್ತಿದೆ. ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಪರಿಶೀಲನೆಗೆ ಬಂದಿದ್ದೇವೆ. ಸಾರ್ವಜನಿಕರ ಅರ್ಜಿಗಳನ್ನು ವಿನಾಕಾರಣ ತಿರಸ್ಕರಿಸಿದ್ದಾರೆ. ನಿಜವಾಗಿಯೂ ಸಮಸ್ಯೆ ಇದ್ದಲ್ಲಿ ಅರ್ಜಿ ತಿರಸ್ಕರಿಸಬಹುದು. ಈ ಕಚೇರಿಗಳಲ್ಲಿ ರಿಜಿಸ್ಟ್ರರ್‌ ಸಹ ಸರಿಯಾಗಿ ಇಲ್ಲ. ನಗರಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸುತ್ತೇವೆ ಎಂದರು.

ಇಲ್ಲಿನ ಕಚೇರಿಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಕಚೇರಿಯಲ್ಲಿ ಸರಿಯಾಗಿ ಕೆಲಸವಾಗುತ್ತಿಲ್ಲ. ಕಚೇರಿ ಒಳಗೆ ಖಾಸಗಿ ವ್ಯಕ್ತಿ ಜೆರಾಕ್ಸ್‌ ಯಂತ್ರ ಇಟ್ಟಿದ್ದಾರೆ. ಅದಕ್ಕೆ ಅನುಮತಿ ನೀಡಿದವರು ಯಾರು? ಅದಕ್ಕೆ ಮೌಖೀಕ ಅನುಮತಿ ನೀಡಿದ್ದಾರೆ. ಆದರೆ, ಇದು ಕಚೇರಿ ನಡೆಸುವ ಸರಿಯಾದ ರೀತಿಯಲ್ಲ. ಶೌಚಾಲಯದ ರೀತಿ ಕಚೇರಿ ನಿರ್ವಹಿಸಿದ್ದಾರೆ ಎಂದು ಬೇಸರಗೊಂಡರು.

 

Advertisement

Udayavani is now on Telegram. Click here to join our channel and stay updated with the latest news.

Next