Advertisement

ಬದುಕುವುದಿಲ್ಲ ಅನಿಸಿತ್ತು:  ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ 

06:00 AM Apr 24, 2018 | Team Udayavani |

ಬೆಂಗಳೂರು: ಆತ ನೀಡಿದ್ದ ದಾಖಲೆ ಪರಿಶೀಲಿಸಿ ತಲೆ ಎತ್ತುವಷ್ಟರಲ್ಲಿ ಕಲ್ಪನೆಗೂ ಮೀರಿದ್ದ ಘಟನೆ ನಡೆಯಿತು. ಲೋಕಾಯುಕ್ತರಾಗಿ ಇದು ಕೊನೆಯ ಕ್ಷಣ ಅನಿಸಿಬಿಟ್ಟಿತ್ತು. ಆದರೆ, ದೇವರ ಆಶೀರ್ವಾದ, ಜನರ ಹಾರೈಕೆ ನನ್ನನ್ನು ಮತ್ತೆ ಈ ಸ್ಥಾನದಲ್ಲಿ ಕುಳಿತುಕೊಳ್ಳುವಂತೆ ಮಾಡಿತು…

Advertisement

ಮಾ. 7ರಂದು ದೂರುದಾರ ತೇಜರಾಜ್‌ ಶರ್ಮಾನಿಂದ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ 47 ದಿನ ವಿಶ್ರಾಂತಿ ಪಡೆದು ಚೇತರಿಸಿಕೊಂಡ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅಂದಿನ ಘಟನೆಯ ಬಗ್ಗೆ ಹೇಳಿದ್ದು ಹೀಗೆ.

ಸೋಮವಾರ ಮತ್ತೆ ಕರ್ತವ್ಯಕ್ಕೆ ಹಾಜರಾದ ನ್ಯಾ.ವಿಶ್ವನಾಥ ಶೆಟ್ಟಿ ಎಂದಿನಂತೆ ಕಾರ್ಯನಿರ್ವಹಣೆ ಆರಂಭಿಸಿದ್ದಾರೆ. ಈ ವೇಳೆ ಅಂದಿನ ಕರಾಳ ಘಟನೆಯ ಸಂದರ್ಭ, ಸೇವೆಯ ಬಗೆಗಿನ ತಮ್ಮ ಧೃಢನಿಲುವು, ಕೃತ್ಯ ಎಸಗಿದ ಆರೋಪಿಯ ಬಗೆಗಿನ ಅಭಿಪ್ರಾಯ, ಲೋಕಾಯುಕ್ತದಲ್ಲಿ ಸರಿಪಡಿಸಬಹುದಾದ ಕೆಲ ವಿಚಾರಗಳ ಬಗ್ಗೆ “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ.

ನಿಮ್ಮ ಮೇಲೆ ಹಲ್ಲೆ ನಡೆದ ದಿನ ಏನಾಗಿತ್ತು? ಇದು ಪೂರ್ವಯೋಜಿತವೇ?
      ಮಧ್ಯಾಹ್ನ ಊಟಕ್ಕೆ ಹೊರಡುವ ಸಿದ್ಧತೆಯಲ್ಲಿದ್ದೆ. ಅಷ್ಟರಲ್ಲಿ ತೇಜರಾಜ್‌ ಶರ್ಮಾ ಎಂಬಾತ ಭೇಟಿಗಾಗಿ ಕಾಯುತ್ತಿರುವ ವಿಚಾರ ತಿಳಿದು ಮಾತನಾಡಿಸಿ ಹೋಗೋಣ ಎಂದು ಒಳಗೆ ಕರೆದೆ. ಒಳಗೆ ಬಂದ ಆತ ಕೆಲವು ದಾಖಲೆಗಳನ್ನು ನೀಡಿದ ದಾಖಲೆಗಳನ್ನು ಪರಿಶೀಲಿಸಿ, ಇವುಗಳನ್ನು ವಿಚಾರಣಾಧಿಕಾರಿ ಬಳಿ ಕೊಡಿ ಎಂದು ಹೇಳುತ್ತಿದ್ದಂತೆ ಏಕಾಏಕಿ ಚಾಕು ಹಿಡಿದು ಹಲ್ಲೆ ಮಾಡಿದ. ಏಕಾಏಕಿ ನಡೆದ ಘಟನೆಯಿಂದ ಆತಂಕಗೊಂಡು ಜೋರಾಗಿ ಕಿರುಚಿದೆ. ಸಾರ್ವಜನಿಕರ ಸೇವೆಯಲ್ಲಿ ಇದು ನನ್ನ ಕೊನೆಯ ಕ್ಷಣ ಅನಿಸಿಬಿಟ್ಟಿತ್ತು. ತಕ್ಷಣ ಒಳಗೆ ಬಂದ ಗನ್‌ಮ್ಯಾನ್‌ ಮತ್ತು ದಲಾಯತ್‌ ಒಳಗೆ ಬಂದು ಆತನನ್ನು ಹಿಡಿದುಕೊಂಡರು. ದೇವರ ಆಶೀರ್ವಾದ, ಜನರ ಹಾರೈಕೆಯಿಂದ ಜೀವ ಉಳಿಯಿತು. ಮತ್ತೆ ಸೇವೆ ಮುಂದುವರಿಸಿದ್ದೇನೆ. ಇದು ಪೂರ್ವನಿಯೋಜಿತ ಎಂದು ನನಗನಿಸುತ್ತಿಲ್ಲ. ನಿಜ ಹೇಳಬೇಕೆಂದರೆ ಆರೋಪಿ ಬಗ್ಗೆ ಕಿಂಚಿತ್ತೂ ದ್ವೇಷವಿಲ್ಲ. ಘಟನೆ ಬಗ್ಗೆ ನಿಸ್ಪಕ್ಷಪಾತ ತನಿಖೆಯಾಗಿ ಕಾನೂನು ಕ್ರಮ ಜರುಗಲಿ.

ಈ ಘಟನೆಯಿಂದ ಆದ ಆಘಾತದಿಂದ ಹೇಗೆ ಹೊರಬಂದಿರಿ?
      ಸಮಾಜದಲ್ಲಿ ಒಳ್ಳೆಯದು ಮತ್ತು ಕೆಟ್ಟದರ ಮಧ್ಯೆ ತಿಕ್ಕಾಟ ಇದ್ದೇ ಇರುತ್ತದೆ. ಕೆಟ್ಟ ಗುಣಗಳ ಮುಂದುವರಿದ ಭಾಗವೇ ನನ್ನ ಮೇಲಿನ ದಾಳಿ. ಅದೇ ದಿನ ಬೆಳಗ್ಗೆ ಪತಿಯನ್ನು ಕಳೆದುಕೊಂಡಿದ್ದ ಮಹಿಳೆ ತನ್ನ ಮಗನೊಂದಿಗೆ ಬಂದು ಗಂಡನ ಸಾವಿನ ನಂತರ ಬರಬಹುದಾದ ಅನುಕಂಪದ ಆಧಾರದ ಹುದ್ದೆ ಬಗ್ಗೆ ಚರ್ಚಿಸಿದ್ದರು. ವಿಚಿತ್ರವೆಂದರೆ ಹಲ್ಲೆಯಾದ ಬಳಿಕ ನನ್ನನ್ನು ಕಾರಿಗೆ ಎತ್ತಿಕೊಂಡು ಹೋದವರ ಪೈಕಿ ಆ ಮಹಿಳೆಯ ಪುತ್ರನೂ ಒಬ್ಬ. ಕೇಡು ಬಯಸುವವನು ಒಬ್ಬನಿದ್ದರೆ, ಕಾಯುವವನು ಇನ್ನೊಬ್ಬನಿರುತ್ತಾನೆ ಎನ್ನುವುದು ಇದನ್ನೇ ಅಲ್ಲವೇ. ಈ ಯೋಚನೆಯೇ ನನ್ನನ್ನು ಆಘಾತದಿಂದ ಹೊರಬರುವಂತೆ ಮಾಡಿತು.

Advertisement

ಚಿಕಿತ್ಸೆ ಬಳಿಕ 47 ದಿನ ವಿಶ್ರಾಂತಿ ಸಂದರ್ಭದಲ್ಲಿ ಈ ಸಹವಾಸವೇ ಬೇಡ ಎಂದು ಅನಿಸಿತ್ತೇ?
        ಆರೋಗ್ಯ ವಿಚಾರಿಸಿ ನೈತಿಕ ಸ್ಥೈರ್ಯ ತುಂಬಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರು. ನ್ಯಾಯಾಂಗ ಅಧಿಕಾರಿಗಳು, ಹಿತೈಷಿಗಳಿಗೆ ನಾನು ಚಿರಋಣಿ. ಓದುವ ಹವ್ಯಾಸ ಹೊಂದಿದ್ದ ನನಗೆ ಲೋಕಾಯುಕ್ತನಾದ ಮೇಲೆ ಹೆಚ್ಚು ಸಮಯ ಸಿಕ್ಕಿರಲಿಲ್ಲ. ವಿಶ್ರಾಂತಿಯ ಅವಧಿಯನ್ನು ಹೆಚ್ಚಾಗಿ ಓದಲು ಮೀಸಲಿಟ್ಟೆ. ಶೀಘ್ರ ಗುಣಮುಖನಾಗಿ ಸೇವೆಗೆ ಮರಳುವ ತುಡಿತ ಹೆಚ್ಚಾಗಿತ್ತೇ ಹೊರತು ಸಹವಾಸ ಬೇಡ ಎಂದು ಯಾವತ್ತೂ ಅನಿಸಲಿಲ್ಲ.

ಘಟನೆಗೆ ಪೊಲೀಸ್‌ ಭದ್ರತೆ ವೈಫ‌ಲ್ಯ ಕಾರಣವೇ?
        ಸಂಸ್ಥೆಯಲ್ಲಿ ಮೆಟಲ್‌ ಡಿಟೆಕ್ಟರ್‌ ಇರಲಿಲ್ಲ, ಪೊಲೀಸ್‌ ಇಲಾಖೆ ಈ ಬಗ್ಗೆ ಗಮನಹರಿಸಬೇಕಿತ್ತು. ಆದರೆ, ನಡೆದ ಘಟನೆಗೆ ಪೊಲೀಸರನ್ನು ಹೊಣೆ ಮಾಡುವುದಿಲ್ಲ. ನನ್ನ ಮೇಲೆ ನಡೆದ ಹಲ್ಲೆಗೆ ನಾನೇ ಜವಾಬ್ದಾರ. ನಂಬಿಕೆ, ಮಾನವೀಯತೆಯಿಂದ ಬಂದವರನ್ನು ಭೇಟಿಯಾದೆ. ಆದರೆ, ಆತ ನಂಬಿಕೆ ದ್ರೋಹ ಮಾಡಿದ. ಇದಕ್ಕೆ ಬೇರೆಯವರನ್ನು ಹೊಣೆ ಮಾಡುವುದಿಲ್ಲ.

ಈ ಘಟನೆಯಿಂದ ನಿಮ್ಮ ಕಾರ್ಯವೈಖರಿ ಬದಲಾಗುವುದೇ?
       ಸಾರ್ವಜನಿಕ ಜೀವನಕ್ಕೆ ಒಮ್ಮೆ ಪ್ರವೇಶಿಸಿದ ಮೇಲೆ ಕೆಲವೊಂದು ಕಹಿ ಘಟನೆಗಳು ನಡೆದುಬಿಡುತ್ತವೆ. ನಾನು ಇಂತಹ ಘಟನೆಗಳಿಗೆ ಹೆದರುವುದಿಲ್ಲ. ಹೆದರಿ ಕೂತರೆ ಜೀವನಕ್ಕೆ ಸಾರ್ಥಕತೆ ಇರುವುದಿಲ್ಲ. ಲೋಕಾಯುಕ್ತನಾಗಿ ಮುಂದಿನ ಅವಧಿಯನ್ನು ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಯಾವುದರಲ್ಲೂ ರಾಜಿ ಇಲ್ಲ.

ಸಾರ್ವಜನಿಕರ ಮುಕ್ತ ಭೇಟಿಗೆ ಅವಕಾಶ ಮುಂದುವರಿಸುತ್ತೀರಾ?
      ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಸಂಸ್ಥೆಯನ್ನು “ಜನಸ್ನೇಹಿ ಲೋಕಾಯುಕ್ತ’ ಮಾಡಬೇಕು ಎಂಬ ಆಸೆ ನನಗಿತ್ತು. ಹೀಗಾಗಿಯೇ ಯಾರೇ ದೂರು ತೆಗಂದುಕೊಂಡು ಬಂದರೂ ಮುಕ್ತವಾಗಿ ಭೇಟಿಯಾಗಿ ಸಮಸ್ಯೆ ಆಲಿಸುತ್ತಿದ್ದೆ. ಮುಂದೆಯೂ ಇದೇ ರೀತಿ ಸಾಗುತ್ತೇನೆ. ಆದರೆ, ಭದ್ರತೆ ದೃಷ್ಟಿಯಿಂದ ಕೆಲ ಕ್ರಮಗಳನ್ನು ಕೈಗೊಳ್ಳುತ್ತೇನೆ.

ನನ್ನ ಮೇಲೆ ನಡೆದ ಹಲ್ಲೆಯಿಂದ ಕುಟುಂಬದವರಿಗೆ ಸಹಜವಾಗಿಯೇ ದುಃಖವಾಗಿತ್ತು. ಆದರೆ, ವಿಚಲಿತರಾಗಿರಲಿಲ್ಲ. ನನಗೆ ಚಾಕು ಇರಿತವಾಗಿದೆ ಎಂದು ತಿಳಿದ ಬಳಿಕವೂ ನನ್ನ ಹಿರಿಯ ಮಗ ಡಾ.ರವಿಂಶಂಕರ್‌ ಶೆಟ್ಟಿ ಏಳು ವರ್ಷದ ಮಗುವಿನ ಹೃದಯ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿ ತನ್ನ ವೃತ್ತಿ ಬದ್ಧತೆ ಮೆರೆದಿದ್ದು . 73 ವರ್ಷದ ಈ ಜೀವಕ್ಕಿಂತ ಚಿಗುರು ಎಳೆ ಜೀವದ ರಕ್ಷಣೆಗಾಗಿ ಚಿಕಿತ್ಸೆ ಮುಂದುವರಿಸಿದ್ದು ಬಹಳ ಸಂತೋಷವುಂಟು ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next