ಬೆಂಗಳೂರು: ಅಕ್ರಮ ಆಸ್ತಿ (DA) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ತಹಶೀಲ್ದಾರ್ ಎಸ್. ಅಜಿತ್ ಕುಮಾರ್ ರೈಗೆ ಸೇರಿದ 11 ಸ್ಥಳಗಳಲ್ಲಿ ದಾಳಿ ನಡೆಸಿದ ಒಂದು ದಿನದ ನಂತರ ಗುರುವಾರ ಅವರನ್ನು ಬಂಧಿಸಿದ್ದಾರೆ.
”ಬೆಂಗಳೂರಿನ ಕೆಆರ್ ಪುರಂನಲ್ಲಿರುವ ಬೆಂಗಳೂರು ಪೂರ್ವ ತಾಲೂಕಿನ ತಹಶೀಲ್ದಾರ್ ರೈ ಅವರನ್ನು ವಿಸ್ತೃತ ತನಿಖೆಗಾಗಿ ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಕಸ್ಟಡಿಯಲ್ ವಿಚಾರಣೆ ಅತ್ಯಗತ್ಯವಾದ ಕಾರಣ ಅವರನ್ನು ಬಂಧಿಸಲಾಗಿದೆ” ಎಂದು ಲೋಕಾಯುಕ್ತ ಪೊಲೀಸ್ ಮಹಾನಿರೀಕ್ಷಕ ಡಾ ಎ ಸುಬ್ರಹ್ಮಣ್ಯೇಶ್ವರ ರಾವ್ ಪಿಟಿಐಗೆ ತಿಳಿಸಿದ್ದಾರೆ.
“ಅಜಿತ್ ಕುಮಾರ್ ರೈಗೆ ಸೇರಿದ ಎಲ್ಲಾ 11 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 40 ಲಕ್ಷ ರೂಪಾಯಿ ನಗದು ಸೇರಿದಂತೆ ಅಂದಾಜು 1.90 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ” ಎಂದು ಲೋಕಾಯುಕ್ತ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
“ಶೋಧದ ವೇಳೆ ನೂರಾರು ಎಕರೆ ಭೂಮಿಯನ್ನು ಹೊಂದಿರುವ ಇತರರ ಹೆಸರಿನಲ್ಲಿರುವ ಹಲವಾರು ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪತ್ತೆ ಹಚ್ಚಲಾಗಿದ್ದು, ಬೇನಾಮಿ ಆಸ್ತಿಗಳೆಂದು ಶಂಕಿಸಲಾಗುತ್ತಿರುವ ಹಲವಾರು ಹೈ ಎಂಡ್ ಕಾರುಗಳು ಪತ್ತೆಯಾಗಿದ್ದು, ಆಕುರಿತು ವಿಷಯ ತನಿಖೆ ನಡೆಸಲಾಗುತ್ತಿದೆ.
ಕರ್ನಾಟಕದ ವಿವಿಧ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಡಿಎ(ಅಕ್ರಮ ಆಸ್ತಿ) ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ನಡೆಸಿದ 15 ಸರಕಾರಿ ಅಧಿಕಾರಿಗಳ ಪೈಕಿ ರೈ ಕೂಡ ಸೇರಿದ್ದಾರೆ.