Advertisement

ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಆರೋಗ್ಯದಲ್ಲಿ ಚೇತರಿಕೆ

06:00 AM Mar 09, 2018 | Team Udayavani |

ಬೆಂಗಳೂರು: ದುಷ್ಕರ್ಮಿಯಿಂದ ಚಾಕು ಇರಿತಕ್ಕೊಳಗಾಗಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲೋಕಾಯುಕ್ತ ನ್ಯಾ. ವಿಶ್ವನಾಥ್‌ ಶೆಟ್ಟಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ.

Advertisement

ನ್ಯಾ. ವಿಶ್ವನಾಥ್‌ ಶೆಟ್ಟಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಇನ್ನೂ ಎರಡರಿಂದ ಮೂರು ದಿನಗಳ ಕಾಲ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯ ದಿವಾಕರ್‌ ಭಟ್‌ ತಿಳಿಸಿದ್ದಾರೆ.

ಚಾಕು ಇರಿತದ ಪರಿಣಾಮ ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಎರಡು ಬಾಟಲಿ ರಕ್ತ ನೀಡಲಾಗಿದೆ. 24 ಗಂಟೆಗಳ ಕಾಲ ಅಬ್ಸರ್‌ವೆಷನ್‌ನಲ್ಲಿಡಲಾಗಿದೆ. ಮಧುಮೇಹ ರೋಗ ಇರುವುದರಿಂದ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ. ಸದ್ಯ ದ್ರವ ರೂಪದ ಆಹಾರವನ್ನಷ್ಟೇ ನೀಡಲಾಗುತ್ತಿದೆ. ಎದೆಯ ಭಾಗದಲ್ಲಿ ಹೆಚ್ಚು ಗಾಯವಾದ ಹಿನ್ನೆಲೆಯಲ್ಲಿ ಸರ್ಜರಿ ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದು ತಿಳಿಸಿದರು.

ಆರೋಪಿ ಚಾಕು ಚುಚ್ಚಿದ ರಭಸಕ್ಕೆ ಕಿಬ್ಬೊಟ್ಟೆ ಒಳಭಾಗದಲ್ಲಿ ಸ್ವಲ್ಪ ಪ್ರಮಾಣದ ಗಾಯವಾದ ಹಿನ್ನೆಲೆಯಲ್ಲಿ ಅಧಿಕ ನೋವು ಕಂಡು ಬರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನೋವು ನಿವಾರಣೆಗಾಗಿ ಕೆಲ ಔಷಧಿಗಳನ್ನು ನೀಡಲಾಗಿದೆ ಎಂದು ವೈದ್ಯ ದಿವಾಕರ್‌ ಭಟ್‌ ತಿಳಿಸಿದರು.

ಪ್ರಕರಣ ಸಿಸಿಬಿ ವರ್ಗಾವಣೆ
ಲೋಕಾಯುಕ್ತರ ಮೇಲಿನ ಕೊಲೆ ಯತ್ನ ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಕ್ಕೆ ವರ್ಗಾಯಿಸಿ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಆದೇಶಿಸಿದ್ದಾರೆ. ಸಿಸಿಬಿ ಡಿಸಿಪಿ ಜಿನೇಂದ್ರ ಖಣಗಾವಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ವಿಧಾನಸೌಧ ಠಾಣೆ ಪೊಲೀಸರಿಂದ ಅಧಿಕೃತವಾಗಿ ಪ್ರಕರಣದ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಶುಕ್ರವಾರ ಬೆಳಗ್ಗೆ ಇಡೀ ಪ್ರಕರಣದ ಪ್ರಾಥಮಿಕ ವರದಿ ಹಾಗೂ ಆರೋಪಿಯ ಹೇಳಿಕೆಯನ್ನು ತಂಡ ಪಡೆಯಲಿದೆ ಎಂದು ಸಿಸಿಬಿ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಮತ್ತೂಂದೆಡೆ ಈಗಾಗಾಲೇ ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸತೀಶ್‌ ಕುಮಾರ್‌ ಅವರಿಗೆ ಲೋಕಾಯುಕ್ತ ಕಚೇರಿಯ ಭದ್ರತಾ ವೈಫ‌ಲ್ಯದ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿತ್ತು. ಈ ತಂಡ ಲೋಕಾಯುಕ್ತ ಸಂಸ್ಥೆಯಲ್ಲಿ ಭದ್ರತೆ ಲೋಪವಾಗಿರುವುದ ನಿಜ. ಮೆಟಲ್‌ ಡಿಟೆಕ್ಟರ್‌ ಕೆಲ ವರ್ಷಗಳಿಂದ ಕೆಟ್ಟು ನಿಂತಿತ್ತು. ಜತೆಗೆ ಸಂಸ್ಥೆಯಲ್ಲಿರುವ ಪೊಲೀಸ್‌ ಅಧಿಕಾರಿಗಳು ಕೂಡ ಸಿಬ್ಬಂದಿಗೆ ಭದ್ರತೆ ಕುರಿತು ಯಾವುದೇ ಮಾರ್ಗದರ್ಶನ ನೀಡಿಲ್ಲ ಎಂಬ ಮಾಹಿತಿಯನ್ನು ತನಿಖಾ ತಂಡ ವರದಿಯಲ್ಲಿ ಉಲ್ಲೇಖೀಸಿತ್ತು.

ಐದು ದಿನ ಪೊಲೀಸ್‌ ವಶಕ್ಕೆ
ಪ್ರಕರಣದ ಆರೋಪಿ ತೇಜ್‌ರಾಜ್‌ನನ್ನು ವಿಧಾನಸೌಧ ಠಾಣೆ ಪೊಲೀಸರು ಐದು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ. ಗುರುವಾರ ಬೆಳಗ್ಗೆ ತುಮಕೂರಿನಲ್ಲಿರುವ ಆತನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆತನ ಕೊಠಡಿಯಲ್ಲಿದ್ದ, ಲೋಕಾಯುಕ್ತ ಸಂಸ್ಥೆಗೆ ಇದುವರೆಗೂ ನೀಡಿರುವ ದೂರಿನ ಪ್ರತಿ ಮತ್ತು ಇದಕ್ಕೆ ಪೂರಕವಾದ ದಾಖಲೆಗಳು ಹಾಗೂ ಆತನ ಕುಟುಂಬ ಸದಸ್ಯರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.

ತೇಜ್‌ರಾಜ್‌ ವ್ಯವಹಾರದಲ್ಲಿ ನಷ್ಟ ಹೊಂದಿದ್ದರಿಂದ ಮಾನಸಿಕವಾಗಿ ಕುಗ್ಗಿದ್ದ. ಹೀಗಾಗಿ ತನ್ನ ಕೊಠಡಿ ತುಂಬೆಲ್ಲ ದೇವರ ಫೋಟೋಗಳನ್ನು ಇಟ್ಟು ಪೂಜಿಸುತ್ತಿದ್ದ. ಸದಾ ಪೂಜೆಯಲ್ಲಿ ತೊಡಗಿದ್ದ ಆರೋಪಿಯ ದಿನಚರಿ ಕಂಡು ಸ್ಥಳೀಯರು ಈತನನ್ನು ಮಾನಸಿಕ ಅಸ್ವಸ್ಥನೆಂದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ರಾಜೀನಾಮೆ ನೀಡುವ ಅಗತ್ಯವಿಲ್ಲ. ಆದರೆ ಲೋಕಾಯುಕ್ತ ಕಚೇರಿಗೆ ಪಾರ್ಲಿಮೆಂಟ್‌ ಮಾದರಿ ಭದ್ರತೆ ನೀಡುತ್ತೇವೆ.
– ರಾಮಲಿಂಗಾರೆಡ್ಡಿ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next