ಬೆಂಗಳೂರು: ರಾಜ್ಯದ ನೂತನ ಲೋಕಾಯುಕ್ತರಾಗಿ ನ್ಯಾ. ಪಿ ವಿಶ್ವನಾಥ ಶೆಟ್ಟಿ ಅವರು ಶನಿವಾರ ಸಂಜೆ ಅಧಿಕಾರ ಸ್ವೀಕರಿಸಲಿದ್ದಾರೆ.
ರಾಜಭವನದಲ್ಲಿ ಸಂಜೆ 5 ಗಂಟೆಗೆ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರು ನ್ಯಾ. ವಿಶ್ವನಾಥ ಶೆಟ್ಟಿಗೆ ಪ್ರಮಾಣ ಬೋಧಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನ್ಯಾ. ಎಸ್.ಕೆ. ಮುಖರ್ಜಿ, ಪ್ರತಿಪಕ್ಷದ ನಾಯಕರು ಸೇರಿದಂತೆ ಪ್ರಮುಖ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯವರಾದ 73 ವರ್ಷದ ನ್ಯಾ. ವಿಶ್ವನಾಥ ಶೆಟ್ಟಿ ಅವರು ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಆ ಬಳಿಕ ಅವರು ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು.
ಈ ಹಿಂದೆ ಲೋಕಾಯುಕ್ತರಾಗಿದ್ದ ನ್ಯಾ. ವಿ. ಭಾಸ್ಕರ್ ರಾವ್ ಅವರು ಭ್ರಷ್ಟಾಚಾರ ಆರೋಪದ ಮೇಲೆ 2015ರ ಡಿಸೆಂಬರ್‌ನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ನಂತರದಿಂದ ಇಲ್ಲಿವರೆಗೆ ಲೋಕಾಯುಕ್ತ ಹುದ್ದೆ ಖಾಲಿಯಿತ್ತು. ಹದಿಮೂರು ತಿಂಗಳ ಬಳಿಕ ಇದೀಗ ಸರ್ಕಾರವು ಆ ಸ್ಥಾನಕ್ಕೆ ನ್ಯಾ. ವಿಶ್ವನಾಥ್ ಅವರನ್ನು ನೇಮಕಗೊಳಿಸಿದೆ.