Advertisement

ಶಾಸಕ ಮುನಿರತ್ನ ದಂಪತಿ ವಿರುದ್ಧ ಲೋಕಾಗೆ ದೂರು

12:18 PM Nov 28, 2017 | Team Udayavani |

ಬೆಂಗಳೂರು: ಮೂರು ವರ್ಷಗಳ ಹಿಂದೆ ವೈಯಾಲಿಕಾವಲ್‌ನ ಮನೆಯೊಂದರಲ್ಲಿ ಬಿಬಿಎಂಪಿ ಕಾಮಗಾರಿ ಕಡತಗಳು ಪತ್ತೆಯಾಗಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್‌ ಶಾಸಕ ಮುನಿರತ್ನ, ಅವರ ಪತ್ನಿ ಮಂಜುಳಾ, ಚಿತ್ರ ನಿರ್ಮಾಪಕ ರಾಮಬಾಬು (ಸೂರಪ್ಪಬಾಬು) ಅವರ ವಿರುದ್ಧ ಹೆಚ್ಚುವರಿ ದೋಷಾರೋಪ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಕೋರಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. 

Advertisement

ಈ ಸಂಬಂಧ  ವಕೀಲ ಎನ್‌.ಪಿ ಅಮೃತೇಶ್‌ ಸೋಮವಾರ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರಿಗೆ ದೂರು ನೀಡಿದ್ದಾರೆ. ಲೋಕಾಯುಕ್ತ ಪೊಲೀಸರು 2014ರ ಡಿಸೆಂಬರ್‌ನಲ್ಲಿ ವೈಯಾಲಿಕಾವಲ್‌ನ ನಂಬರ್‌ 76/100 ಮನೆಯ ಮೇಲೆ ದಾಳಿ ನಡೆಸಿದ ವೇಳೆ ರಾಜರಾಜೇಶ್ವರಿ ನಗರದ ವ್ಯಾಪ್ತಿಯ ಬಿಬಿಎಂಪಿ ಕಾಮಗಾರಿಗಳಿಗೆ ಸಂಬಂಧಿಸಿದ ನೂರಾರು ಕಡತಗಳು ಪತ್ತೆಯಾಗಿದ್ದು, ಭಾರೀ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿತ್ತು.  

ಈ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ಪೊಲೀಸರು ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಹಲವು ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೆ, ಮನೆಯ ಮಾಲೀಕರು ಆಗಿರುವ ಶಾಸಕ ಮುನಿರತ್ನ, ಅವರ ಪತ್ನಿ ಮಂಜುಳಾ, ಮನೆ ಬಾಡಿಗೆ ಪಡೆದುಕೊಂಡಿದ್ದಾರೆ ಎನ್ನಲಾದ ಸೂರಪ್ಪ ಬಾಬು ಅವರ ಹೆಸರನ್ನು ಉದ್ದೇಶ ಪೂರ್ವಕವಾಗಿ ಪಟ್ಟಿಯಿಂದ ಕೈ ಬಿಡಲಾಗಿದೆ.

ಇದಕ್ಕೆ ರಾಜಕೀಯ ಒತ್ತಡವೂ ಇರಬಹುದು. ಈ ಹಿನ್ನೆಲೆಯಲ್ಲಿ ಕೂಡಲೇ ಪ್ರಕರಣ ಸಂಬಂಧ ಮೂವರ ವಿರುದ್ಧವೂ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಪೊಲೀಸ್‌ ವಿಭಾಗಕ್ಕೆ ಆದೇಶಿಸುವಂತೆ ದೂರಿನಲ್ಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next