Advertisement

ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ

10:11 AM Jun 28, 2023 | Team Udayavani |

ಬೆಂಗಳೂರು: ರಾಜ್ಯದ ವಿವಿಧೆಡೆ ಬುಧವಾರ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

Advertisement

ಚಿಕ್ಕಮಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಹಿನ್ನಲೆಯಲ್ಲಿ ನಿರ್ಮಿತಿ ಕೇಂದ್ರದ ಯೋಜನ ವ್ಯವಸ್ಥಾಪಕರಾದ ಗಂಗಾಧರ್ ಮನೆ ಮೇಲೆ ದಾಳಿ ನಡೆಸಲಾಗಿದೆ.

ಏಕಕಾಲದಲ್ಲಿ ಮನೆ ಸೇರಿದಂತೆ ಪೆಟ್ರೋಲ್ ಬಂಕ್ ಮೇಲೆ ದಾಳಿ ನಡೆದಿದೆ. ಜಯನಗರ ಬಡಾವಣೆಯಲ್ಲಿ ಇರುವ ಗಂಗಾಧರ್ ಮನೆ, ರಾಮನಹಳ್ಳಿಯಲ್ಲಿರು ಪೆಟ್ರೋಲ್ ಬಂಕ್ ಮೇಲೆ‌ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ಮಾಡಿದೆ.

ಕಲಬುರಗಿಯಲ್ಲೂ ದಾಳಿ
ಜಿಲ್ಲೆಯ ಆಳಂದ ತಾಲೂಕಿನವರಾದ ರಾಯಚೂರು ನಗರ ಅಭಿವೃದ್ಧಿ ಕೋಶದ ಯೋಜನಾ ಶಾಖೆಯ ಸಹಾಯಕ ನಿರ್ದೇಶಕ ಶರಣಪ್ಪ ಮಡಿವಾಳರ್ ಅವರ ಮಾಲೀಕತ್ವದ ಫಾರ್ಮ ಹೌಸ್ ಹಾಗೂ ಮನೆಗಳ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ರಾಮನಗರದಲ್ಲೂ ಲೋಕಾಯುಕ್ತ ರೇಡ್
ಕೃಷಿ ಜಂಟಿ‌ ನಿರ್ದೇಶಕನ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದಾರೆ. ತುಮಕೂರಿನಲ್ಲಿ ಕೃಷಿ ಜಂಟಿ‌ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕೆ.ಹೆಚ್. ರವಿ. ರಾಮನಗರದ ಶಾಂತಿಲಾಲ್ ಲೇಔಟ್ ನಲ್ಲಿ‌ ಸ್ವಂತ ಮನೆ ಹೊಂದಿರುವ ಅಧಿಕಾರಿ. ಅಕ್ರಮ‌ ಹಣ, ಆಸ್ತಿ ಗಳಿಕೆ‌ ಮಾಡಿರುವ ಹಿನ್ನೆಲೆ‌ ಲೋಕಾಯುಕ್ತ ದಾಳಿ ನಡೆಸಿದ್ದಾರೆ .ಬೆಳಗ್ಗೆಯಿಂದ ಮನೆಯಲ್ಲಿ ಆಸ್ತಿ ಪತ್ರ, ಇತರೆ ದಾಖಲಾತಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Advertisement

ಲೋಕಾಯುಕ್ತ ದಾಳಿ: ಪರಿಶೀಲನೆ
ಸಿಂಧನೂರು: ಆದಾಯಕ್ಕೂ ಮೀರಿದ ಆಸ್ತಿ‌ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ನಗರ ಯೋಜನಾ ಪ್ರಾಧಿಮಾರದ ಕಾರ್ಯದರ್ಶಿ ಶರಣಪ್ಪ ಅವರ ಸ್ಥಳೀಯ ನಿವಾಸ ಹಾಗೂ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಬುಧವಾರ ದಾಳಿ ನಡೆಸಿದೆ.

ನಗರದ ಆದರ್ಶ ಕಾಲೋನಿಯ ಧರ್ಮ ಅಪಾರ್ಟ್ ಮೆಂಟ್ ನಲ್ಲಿರುವ ಶರಣಪ್ಪ ಅವರ ನಿವಾಸದಲ್ಲಿ‌ ಬೆಳಗ್ಗೆಯಿಂದ ಶೋಧ ಕಾರ್ಯ ನಡೆದಿದೆ. ಸಿಪಿಐ ಬಾಬರ್ ಪಟೇಲ್ ಸೇರಿದಂತೆ ಇತರ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಮುದ್ದೇಬಿಹಾಳದಲ್ಲೂ ಲೋಕಾಯುಕ್ತ ದಾಳಿ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಹುಡ್ಕೋದಲ್ಲಿರುವ ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಹಿಂದಿನ‌ ಎಇಇ ಜೆ.ಪಿ.ಶೆಟ್ಟಿ ಅವರ ನಿವಾಸದ ಮೇಲೆ ವಿಜಯಪುರ ಲೋಕಾಯುಕ್ತರು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಕಳೆದ ತಿಂಗಳು ಕೂಡಾ ಇವರ ಮನೆಯ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತರು ಅಪಾರ ಮೌಲ್ಯದ ಚಿನ್ನಾಭರಣ, ಲಕ್ಷಾಂತರ ರೂ ನಗದು, ಆಸ್ತಿಗಳ ದಾಖಲೆ ವಶಪಡಿಸಿಕೊಂಡು ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸಿದ್ದರು. ಆಗ ಸಸ್ಪೆಂಡ್ ಆಗಿದ್ದ ಶೆಟ್ಟಿ ಈಗ ಜಾಮೀನಿನ ಮೇಲೆ ಹೊರಬಂದು ಬೆಳಗಾವಿಯ ವಿಭಾಗೀಯ ಕಚೇರಿಯಲ್ಲಿದ್ದರು. ಶೆಟ್ಟಿ ಅವರಿಗೆ ಸೇರಿದ ಮುದ್ದೇಬಿಹಾಳ ಪಟ್ಟಣದಲ್ಲಿರುವ ಮನೆ ಹಾಗೂ ತಾಳಿಕೋಟೆ ತಾಲೂಕಿನ ಸಾಸನೂರ ಗ್ರಾಮದಲ್ಲಿರುವ ಸಹೋದರಿಯ ನಿವಾಸದ ಮೇಲೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಸಧ್ಯ ಅಕ್ರಮ ಆಸ್ತಿಪಾಸ್ತಿ ಕುರಿತು ತನಿಖೆ ಪ್ರಗತಿಯಲ್ಲಿದೆ. ವಿಜಯಪುರ ಲೋಕಾಯುಕ್ತ ಎಸ್ಪಿ ಅನಿತಾ ಹದ್ದನ್ನವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next