Advertisement

ಭ್ರಷ್ಟಾಚಾರ ನಿಗ್ರಹಕ್ಕೆ ಎರಡು ಪ್ರಾಧಿಕಾರಗಳು ಬೇಡ

04:50 AM Jul 13, 2018 | |

ಯಾವ ಪಕ್ಷವು ಆಡಳಿತಕ್ಕೆ ಬರಲಿ, ಯಾವ ಕಾನೂನನ್ನೇ ರಚಿಸಲಿ ರಾಜಕಾರಣಿಗಳ ಹಿತಾಸಕ್ತಿಗೆ ಧಕ್ಕೆಯುಂಟಾಗುವುದಿಲ್ಲ. ಏನೇ ಇರಲಿ. ಪ್ರಕೃತ ನಮಗೆ ಭ್ರಷ್ಟಾಚಾರ ನಿಗ್ರಹಕ್ಕೆ ಎರಡು ಪ್ರಾಧಿಕಾರಗಳು ಬೇಡ. ಸಂಪೂರ್ಣ ಸ್ವತಂತ್ರವಲ್ಲದ ಎಸಿಬಿಯನ್ನು ರದ್ದುಗೊಳಿಸಿ ಆ ಶಾಖೆಯನ್ನು ಲೋಕಾಯುಕ್ತಕ್ಕೆ ವಿಲೀನ ಗೊಳಿಸುವುದು ಲೇಸು. ಕರ್ನಾಟಕ ಎಸಿಬಿ ಒಂಬಡ್ಸ್‌ಮನ್‌ ಮಾದರಿಯದ್ದಲ್ಲ. ಯಾಕೆಂದರೆ ಅದು ಸ್ವತಂತ್ರ ಪ್ರಾಧಿಕಾರವಲ್ಲ. 

Advertisement

ಆಡಳಿತ ಸುಧಾರಣೆ ದೃಷ್ಟಿಯಿಂದ ಕರ್ನಾಟಕದಲ್ಲಿ ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ)ಗಳೆಂಬ ಎರಡು ಪ್ರಾಧಿಕಾರಗಳಿವೆ. ಈ ಎಸಿಬಿಯನ್ನು 2016ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ರಚಿಸಿದೆ. ಆಗಲೇ 1986ರಿಂದ ಲೋಕಾಯುಕ್ತವೆಂಬ ಸಂಸ್ಥೆ ಇತ್ತು ಹಾಗೂ ಈಗಲೂ ಇದೆ. ಸಂವಿಧಾನದ ಆಶಯಕ್ಕೆ ಸಂಗತವಾಗಿ ಆಡಳಿತಕ್ಕೆ ಅನುಕೂಲವಾಗುವಂತೆ ಭಾರತೀಯ ದಂಡ ಸಂಹಿತೆ, ಅಪರಾಧ ನಿಯಂತ್ರಣ ನಿಯಮಾವಳಿ, ನಾಗರಿಕ ಹಕ್ಕು ರಕ್ಷಣಾ ಸಂಹಿತೆಗಳಂಥ ಕಾನೂನುಗಳಿದ್ದರೂ ಸರಕಾರಿ ವಲಯದಲ್ಲಿ ಭ್ರಷ್ಟಾಚಾರ ಬೆಳೆಯುತ್ತಿದೆ ಎಂಬುದನ್ನು ಬಹಳಷ್ಟು ಹಿಂದೆಯೇ ಗಮನಿಸಲಾಗಿತ್ತು. ಇದನ್ನು ಪರಿಣಾಮಕಾರಿಯಾಗಿ ಹೇಗೆ ನಿಯಂತ್ರಿಸಬಹುದೆಂಬ ಬಗ್ಗೆ ಸಲಹೆ ಸೂಚನೆ ಪಡೆಯಲು ರಚಿಸಿದ ಆಡಳಿತ ಸುಧಾರಣಾ ಆಯೋಗ 1966ರಲ್ಲಿ ಒಂದು ಒಂಬಡ್ಸ್‌ ಮನ್‌ ಮಾದರಿಯ ಪ್ರಾಧಿಕಾರದ ರಚನೆಗೆ ಶಿಫಾರಸು ಮಾಡಿತ್ತು. ಕೇಂದ್ರದಲ್ಲಿ ಲೋಕ್‌ಪಾಲ್‌ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ ಎಂಬ ಹೆಸರಿನಲ್ಲಿ ಈ ಪ್ರಾಧಿಕಾರಗಳನ್ನು ರಚಿಸಲು ಪ್ರಸ್ತಾಪಿತ ಆಯೋಗ ಸಲಹೆ ನೀಡಿತ್ತು.
ಸರಕಾರ ಈ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯರೂಪಕ್ಕೆ ತರುವ ಆಸಕ್ತಿ ದಶಕಗಳ ಕಾಲ ತೋರಿಸಲಿಲ್ಲ. ಕ್ರಮೇಣ ಸಾರ್ವಜನಿಕ ಒತ್ತಡವೂ ಹೆಚ್ಚಾಗುತ್ತಾ ರಾಜ್ಯ ಸರಕಾರಗಳು ಸ್ಪಂದಿಸಲಾರಂಭಿಸಿದವು. ಆ ಪೈಕಿ ಇಂಥ ಸಂಸ್ಥೆಯನ್ನು ಮೊದಲು ಹುಟ್ಟುಹಾಕಿದ ಖ್ಯಾತಿ ಮಹಾರಾಷ್ಟ್ರಕ್ಕೆ ಸಲ್ಲುತ್ತದೆ. ತದನಂತರ ಅಂದರೆ 1984-85ರಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಸ್ಥಾಪನೆಗೆ ಕಾನೂನು ರೂಪಿಸಿತು. ಅದು 1986ರಿಂದಲೇ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಇದರ ಸ್ಥಾಪನೆಗೆ ಕಾರಣರಾದ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ಇಲ್ಲಿ ಸ್ಮರಿಸಬೇಕಾಗಿದೆ. ಲೋಕಾಯುಕ್ತ ಸ್ಥಾಪನೆಯೊಂದಿಗೆ ಹಿಂದೆ 1963ರಲ್ಲಿ ರಚಿತವಾದ ಮೈಸೂರು ರಾಜ್ಯ ಜಾಗೃತಿ ಆಯೋಗ ರದ್ದಾಯಿತು. ಕರ್ನಾಟಕದ ಲೋಕಾಯುಕ್ತ ಸಂಸ್ಥೆ ದೇಶದಲ್ಲೇ ಉತ್ತಮ ಎಂಬ ಖ್ಯಾತಿಗೂ ಪಾತ್ರವಾಗಿತ್ತು. ಮುಖ್ಯವಾಗಿ ವೆಂಕಟಾಚಲಯ್ಯ ಹಾಗೂ ಸಂತೋಷ್‌ ಹೆಗ್ಡೆಯವರ ಅವಧಿಯಲ್ಲಿ ಲೋಕಾಯುಕ್ತ ನೌಕರಶಾಹಿ ಮತ್ತು ಚುನಾಯಿತ ಪ್ರತಿನಿಧಿಗಳ ವಲಯದಲ್ಲಿ ಸಂಚಲನ ಮೂಡಿಸಿತ್ತು. ಸರಕಾರಿ ನೌಕರರ ಪಾಲಿಗೆ ಸಿಂಹಸ್ವಪ್ನವೇ ಆಗಿತ್ತು. ಹಾಗೆ ಒಬ್ಬ ಸಾಮಾನ್ಯ ಪೌರನಿಗೂ ಸಮಾಧಾನ, ನೆಮ್ಮದಿ ಹಾಗೂ ಭರವಸೆಯೂ ಆಗಿತ್ತು.
ಸಂತೋಷ್‌ ಹೆಗ್ಡೆಯವರ ಅನಂತರ ಆ ಹುದ್ದೆಗೆ ಉತ್ತಮ ಆಯ್ಕೆ ಆಗಲಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಅಷ್ಟರಲ್ಲೇ ಲೋಕಾಯುಕ್ತ ಪ್ರಾಧಿಕಾರಕ್ಕೆ ದತ್ತವಾದ ಅಧಿಕಾರಗಳನ್ನು ಹಿಂಪಡೆಯುವುದರೊಂದಿಗೆ ಸಂಸ್ಥೆಯ ನೆಲೆಗಟ್ಟು ಅಲುಗಾಡುವ ಸ್ಥಿತಿ ಪ್ರಾಪ್ತವಾಯಿತು. ಮೂಲ ಲೋಕಾಯುಕ್ತಕ್ಕೆ ಪೊಲೀಸ್‌ ಶಾಖೆ ಇತ್ತು. ಇದು ಲೋಕಾಯುಕ್ತರ ನೇರ ಸುಪರ್ದಿ ಹಾಗೂ ಮೇಲ್ವಿಚಾರಣೆಯಲ್ಲಿತ್ತು. ಸ್ವತಂತ್ರ ಪ್ರಾಧಿಕಾರವಾದ ಲೋಕಾ ಯುಕ್ತಕ್ಕೆ ಅಗತ್ಯ ಬಲವನ್ನು ಈ ಪೊಲೀಸ್‌ ಶಾಖೆ ಒದಗಿಸುತ್ತಿತ್ತು. ಆದರೆ 2016ರಲ್ಲಿ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿರುವಾಗ ಎಸಿಬಿ ಎಂಬ ಸಮಾನಾಂತರ ಸಂಸ್ಥೆಯನ್ನು ರಚಿಸಿದರು. ಈ ಸಂಸ್ಥೆಗೆ ಹಿಂದೆ ಲೋಕಾಯುಕ್ತಕ್ಕೆ ಹೊಂದಿಕೊಂಡ ಪೊಲೀಸ್‌ ಶಾಖೆ ನಡೆಸುತ್ತಿದ್ದ ತನಿಖಾಧಿಕಾರವನ್ನು ನೀಡಲಾಯಿತು. ಈ ಸಂಸ್ಥೆ ಕೇವಲ ಪೊಲೀಸ್‌ ಶಾಖೆ. ಇದನ್ನು ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಡಿಪಿಎಆರ್‌) ಇಲಾಖೆಯ ನೇರ ಮೇಲ್ವಿಚಾರಣೆಯಡಿ ತರಲಾಗಿದೆ. ಈ ಸಂಸ್ಥೆಗೆ 1988ರ ಲಂಚ ಅಥವಾ ಭ್ರಷ್ಟಾಚಾರ ತಡೆ ಕಾಯಿದೆಯ ಎಲ್ಲಾ ಅಧಿಕಾರ ದತ್ತವಾಗಿದೆ. ಅಲ್ಲದೆ ತನಿಖೆಗೆ ಅಗತ್ಯವುಳ್ಳ ತಾಂತ್ರಿಕ ಸಹಾಯಕ್ಕಾಗಿ ಎಂಜಿನಿಯರ್, ಕಾನೂನು ತಜ್ಞರು ಹಾಗೂ ಆರ್ಥಿಕ ತಜ್ಞರ ಸೇವೆಯ ಲಭ್ಯತೆಯೂ ಇದೆ. ಆದರೆ ಇದು ಸ್ವತಂತ್ರ ಪ್ರಾಧಿಕಾರವಲ್ಲ. ಸರಕಾರದ ಒಂದು ಇಲಾಖೆಯ ನೇರ ಮೇಲ್ವಿಚಾರಣೆಯಡಿ ಕಾರ್ಯ ನಿರ್ವಹಿಸಲು ರೂಪಿತವಾಗಿದೆ. 
ವಿಪರ್ಯಾಸವೆಂದರೆ ಲೋಕಾಯುಕ್ತ ಸಂಸ್ಥೆ ಈಗಲೂ ಇದೆ. ಅದು ಸ್ವತಂತ್ರ ಪ್ರಾಧಿಕಾರ. ಇದು ನಿಜವಾಗಿಯೂ ಒಂಬಡ್ಸ್‌ಮನ್‌ ಮಾದರಿಯ ಸಂಸ್ಥೆ. ಒಂಬಡ್ಸ್‌ಮನ್‌ ಅಂದರೆ ಸರಕಾರಿ ಅಥವಾ ಸರಕಾರಿ ಯಂತ್ರದ ವಿರುದ್ಧ ಸಾರ್ವಜನಿಕರ ದೂರನ್ನು ತನಿಖೆ ಮಾಡಿ ಕ್ರಮ ಕೈಗೊಳ್ಳತಕ್ಕ ಸಂಸ್ಥೆ. ಈ ಪದ ಸ್ವೀಡಿಶ್‌ ಮೂಲದ್ದು. ಇದು ಜಾಗೃತಿ ಮೂಡಿಸುವ ವ್ಯವಸ್ಥೆ (ಆಛಿ ಚಡಿಚrಛಿ ಚnಛ ಞಚkಛಿ ಚಡಿಚrಛಿ). ಈ ಉದ್ದೇಶವನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಆ ಪ್ರಾಧಿಕಾರ ಅಪ್ಪಟ ಸ್ವತಂತ್ರವಾಗಿಯೇ ಇರಬೇಕು ಎಂಬುದು ನಿರ್ವಿವಾದ. ಕರ್ನಾಟಕ ಲೋಕಾಯುಕ್ತ ಮೂಲ ರೂಪದಲ್ಲಿ ಹಾಗೆ ಸ್ವತಂತ್ರವಾಗಿದೆ. ಕಾಯಿದೆಯಂತೆ ಲೋಕಾಯುಕ್ತ ಹುದ್ದೆಯನ್ನು ಅಲಂಕರಿಸುವಾತ ಉಚ್ಚ ನ್ಯಾಯಾಲಯದ ಅಥವಾ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಯಾಗಿರತಕ್ಕದ್ದು. ಲೋಕಾಯುಕ್ತ ತನ್ನ ವರದಿಯನ್ನು ರಾಜ್ಯಪಾಲರಿಗೆ ಮಾತ್ರ ಸಲ್ಲಿಸುತ್ತದೆ. ಲೋಕಾ ಯುಕ್ತರು ಇನ್ಯಾರ ಸಂಪರ್ಕದಲ್ಲಿರಬೇಕಾದ ಅಗತ್ಯವಿಲ್ಲ. ಆದರೆ ಒಬ್ಬ ಸಾಮಾನ್ಯ ಪೌರನ ಕುಂದುಕೊರತೆಯನ್ನೂ ಆಲಿಸಿ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಲು ಶಕ್ತರಾಗಿರುತ್ತಾರೆ. ಈ ಔಚಿತ್ಯಕ್ಕೆ ಕಾರಣವೇನೆಂದರೆ ಲೋಕಾಯುಕ್ತ ಸಂಸ್ಥೆ ಸ್ವತಂತ್ರ ಪ್ರಾಧಿಕಾರ. ಕರ್ನಾಟಕ ಲೋಕಾಯುಕ್ತ ಈಗಲೂ ಈ ಅವಕಾಶ ಹೊಂದಿರುತ್ತದೆ. ಆದರೆ ಅಧಿಕಾರ ಮಾತ್ರ ಇಲ್ಲ.

ಖೇದದ ವಿಚಾರವೆಂದರೆ ಕರ್ನಾಟಕ ಎಸಿಬಿ ಒಂಬಡ್ಸ್‌ಮನ್‌ ಮಾದರಿಯದ್ದಲ್ಲ. ಯಾಕೆಂದರೆ ಅದು ಸ್ವತಂತ್ರ ಪ್ರಾಧಿಕಾರವಲ್ಲ. ಒಂಬಡ್ಸ್‌ಮನ್‌ ಮಾದರಿಯ ಪರಿಕಲ್ಪನೆಯಂತೆ ತನಿಖಾ ಸಂಸ್ಥೆ ಸ್ವತಂತ್ರವಾಗಿರಬೇಕು. ಸಂಸ್ಥೆಯಲ್ಲಿ ಉಚ್ಚಮಟ್ಟದ ತನಿಖಾ ಧಿಕಾರಿಗಳು ಇದ್ದಾರೆ ಎಂದ ಮಾತ್ರಕ್ಕೆ ನಿಷ್ಪಕ್ಷಪಾತವಾಗಿ ಹಾಗೂ ನಿರ್ಬಿಢೆಯಿಂದ ತನಿಖೆ ನಡೆಯುತ್ತದೆ ಎಂದು ಹೇಳಲಾಗದು. ಮುಖ್ಯವಾಗಿ ತನಿಖಾಧಿಕಾರಿ ಸ್ವತಂತ್ರನಾಗಿ ಕೆಲಸ ಮಾಡಬಹುದಾದ ಅವಕಾಶ ಕಲ್ಪಿತವಾಗಿದ್ದರೆ ಮತ್ತು ಆತನಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ತಕ್ಕಂತೆ ದಕ್ಷತೆ ಇದ್ದರೆ ನಿಷ್ಪಕ್ಷಪಾತ ತನಿಖೆ ಹಾಗೂ ಮುಂದುವರಿದ ಕ್ರಮ ಜರಗಬಹುದು. ಒಂಬಡ್ಸ್‌ಮನ್‌ ಮಾದರಿಯ ಸಂಸ್ಥೆಯಿಂದ ಸಾರ್ವಜನಿಕರು ನಿರೀಕ್ಷಿಸಬಹುದಾದಿಷ್ಟೇ. ಕರ್ನಾಟಕ ಎಸಿಬಿಯಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ? ಇದು ಅಸ್ತಿತ್ವಕ್ಕೆ ಬಂದಾಗಿನಿಂದ ಒಂದು ಬಾರಿಯಾದರೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾದ ಉದಾಹರಣೆಯುಂಟೆ? ಇದು ಆಡಳಿತಾರೂಢ ರಾಜಕಾರಣಿಗಳ ರಕ್ಷಣೆಗೆ ರಚಿಸಿದ ಕಾನೂನಿನಂತಿದೆ. ಹಿಂದೆ ಲೋಕಾಯುಕ್ತಕ್ಕೆ ಈ ಅಧಿಕಾರವಿದ್ದಾಗ ಕೆಲವು ಲೋಕಾಯುಕ್ತರು ಅದರ ಛಾಪನ್ನು ಒತ್ತಿದ ಸನ್ನಿವೇಶಗಳನ್ನು ಇಲ್ಲಿ ಸ್ಮರಿಸಬಹುದು.
ನಮ್ಮ ಪ್ರಜಾಸತ್ತೆಯ ದೌರ್ಬಲ್ಯವೇ ಇದು. ಆಡಳಿತ ಬಹುಮತಗಳಿಸಿದ ರಾಜಕೀಯ ಪಕ್ಷದ ನೇತೃತ್ವದಲ್ಲಿ ನಡೆಯುತ್ತದೆ. ಈ ರಾಜಕೀಯ ಪಕ್ಷ ಬಹುಮತದ ಆಧಾರದಲ್ಲಿ ಮನಬಂದಂತೆ ಕಾನೂನು ರೂಪಿಸುವುದು ರೂಢಿಯಾಗಿದೆ. ಮೇಲ್ನೋಟಕ್ಕೆ ಈ ಕಾನೂನುಗಳು ಸಂವಿಧಾನದ ಆಶಯಕ್ಕೆ ವಿರೋಧವಾಗಿರುವಂತೆ ಭಾಸವಾಗುವುದಿಲ್ಲ. ಆದರೆ ಈ ಕಾನೂನು ಅನುಷ್ಠಾನಕ್ಕೆ ಬಂದಂತೆ ಸಾರ್ವಜನಿಕ ಹಿತಾಸಕ್ತಿಯ ದಯನೀಯ ಸೋಲನ್ನು ಕಾಣುತ್ತೇವೆ. ಯಾವ ಪಕ್ಷವು ಆಡಳಿತಕ್ಕೆ ಬರಲಿ, ಯಾವ ಕಾನೂನನ್ನೇ ರಚಿಸಲಿ ರಾಜಕಾರಣಿಗಳ ಹಿತಾಸಕ್ತಿಗೆ ಧಕ್ಕೆಯುಂಟಾಗುವುದಿಲ್ಲ. ಏನೇ ಇರಲಿ. ಪ್ರಕೃತ ನಮಗೆ ಭ್ರಷ್ಟಾಚಾರ ನಿಗ್ರಹಕ್ಕೆ ಎರಡು ಪ್ರಾಧಿಕಾರಗಳು ಬೇಡ. ಸಂಪೂರ್ಣ ಸ್ವತಂತ್ರವಲ್ಲದ ಎಸಿಬಿಯನ್ನು ರದ್ದುಗೊಳಿಸಿ ಆ ಶಾಖೆಯನ್ನು ಲೋಕಾಯುಕ್ತಕ್ಕೆ ವಿಲೀನ ಗೊಳಿಸುವುದು ಲೇಸು.

* ಬೇಳೂರು ರಾಘವ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next