Advertisement

ಲೋಕಾಯುಕ್ತ ಮೂಲೆಗುಂಪು ಸಮಂಜಸವಲ್ಲ

11:42 PM Jan 24, 2022 | Team Udayavani |

ದಶಕದ ಹಿಂದೆ ಭ್ರಷ್ಟರ ಪಾಲಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದ ಲೋಕಾಯುಕ್ತ ಸಂಸ್ಥೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿದೆ. ಆಡಳಿತ-ವಿಪಕ್ಷ ಎನ್ನದೆ ಎಲ್ಲ ರಾಜಕೀಯ ಪಕ್ಷಗಳು ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲ ಗೊಳಿಸುವಲ್ಲಿ ಸಮಾನ ಪಾಲು ಹೊಂದಿವೆ. ಸ್ವತಂತ್ರ ಸಂಸ್ಥೆಯಾಗಿದ್ದ ಲೋಕಾಯುಕ್ತಕ್ಕೆ ಪರ್ಯಾಯವಾಗಿ ಸರಕಾರದ ಅಧೀನದಲ್ಲಿ ಕೆಲಸ ಮಾಡುವ “ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ) ರಚಿಸಿ ಲೋಕಾ ಯುಕ್ತವನ್ನು ಮೂಲೆಗುಂಪು ಮಾಡಲಾಯಿತು.

Advertisement

ಈಗ ಅದರ ಮುಂದುವರಿದ ಭಾಗವೆಂಬಂತೆ ಹೊಸ ಲೋಕಾಯುಕ್ತರ ನೇಮಕವನ್ನು ಸರಕಾರ ಮರೆತಿದೆ. ಹಾಲಿ ಲೋಕಾಯುಕ್ತ ನ್ಯಾಯ ಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಜ.27ರಂದು ನಿವೃತ್ತಿ ಹೊಂದಲಿ ದ್ದಾರೆ. ಆದರೆ ಹೊಸ ಲೋಕಾಯುಕ್ತರ ನೇಮಕದ ಪ್ರಕ್ರಿಯೆ ಸರಕಾರ ಆರಂಭಿಸಿಲ್ಲ. ಶಾಸನಬದ್ಧ ಸಂಸ್ಥೆಗಳನ್ನು ಖಾಲಿ ಇಡುವುದು ಆಡಳಿತಾತ್ಮಕ ದೃಷ್ಟಿಯಿಂದ ಒಳ್ಳೆಯದಲ್ಲ. ಅದೇ ರೀತಿ ಇಂತಹ ಬೆಳವಣಿಗೆ ಆಳುವ ವರ್ಗದ ಉದ್ದೇಶವನ್ನು ಅನುಮಾನಿಸುತ್ತದೆ. ಈ ಸೂಕ್ಷ್ಮತೆಯನ್ನು ಸರಕಾರ ಗಮನಿಸಬೇಕು.

ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬೇಕು, ಭ್ರಷ್ಟರ ಹೆಡೆಮುರಿ ಕಟ್ಟಬೇಕು ಎಂಬುದೇನು ನಿಜ. ಇದೇ ವೇಳೆ ಪ್ರಾಮಾಣಿಕರ ರಕ್ಷಣೆಯೂ ಮುಖ್ಯ. ಆದರೆ ಅದಕ್ಕೆ ಬೇಕಾದ ಸಮರ್ಥ ವ್ಯವಸ್ಥೆ ಬೇಕು. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಲೋಕಾಯುಕ್ತಕ್ಕೆ ಇದ್ದ ಅಧಿಕಾರವನ್ನು ಮೊಟಕುಗೊಳಿಸಿ ಎಸಿಬಿ ಎಂಬ “ರಕ್ಷಣ ವ್ಯವಸ್ಥೆ’ಯನ್ನು ರೂಪಿಸಿಕೊಂಡು ಸರಕಾರಗಳು ಸಾಧಿಸಿದ್ದೇನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಸಿಬಿ ಲೋಕಾಯುಕ್ತದ ಅಧೀನದಲ್ಲೇ ಕೆಲಸ ಮಾಡಬೇಕು. ಲೋಕಾಯುಕ್ತ ಸಂಸ್ಥೆ ಇನ್ನಷ್ಟು ಬಲಿಷ್ಠಗೊಳ್ಳಬೇಕು ಎಂದು ಸ್ವತಃ ಲೋಕಾಯುಕ್ತ ನ್ಯಾ| ವಿಶ್ವನಾಥ್‌ ಶೆಟ್ಟಿ ಒತ್ತಿ ಹೇಳಿದ್ದಾರೆ. ಸೂಕ್ಷ್ಮತೆ ಮತ್ತು ಸಂವೇದನೆ ಇರುವ ಸರಕಾರ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು.

ಹಿಂದಿನ ಸರಕಾರದ ಅವಧಿಯಲ್ಲಿ ಎಸಿಬಿ ರಚನೆ ಮಾಡಿದಾಗ ಆಗ ವಿಪಕ್ಷದಲ್ಲಿದ್ದ ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. ಭ್ರಷ್ಟರನ್ನು ರಕ್ಷಿಸ ಲೆಂದು ಸರಕಾರ ಎಸಿಬಿ ರಚಿಸಿದೆ ಎಂದು ಬಿಜೆಪಿ ಆರೋಪಿಸಿತ್ತು. ಅಷ್ಟೇ ಅಲ್ಲ, ಅಧಿಕಾರಕ್ಕೆ ಬಂದ ತತ್‌ಕ್ಷಣ ಎಸಿಬಿ ರದ್ದುಪಡಿಸಿ, ಲೋಕಾಯುಕ್ತಕ್ಕೆ ಶಕ್ತಿ ತುಂಬುವುದಾಗಿ ಬಿಜೆಪಿ ಹೇಳಿತ್ತು. ಆದರೆ ಅಧಿಕಾರ ಬಂದ ಬಳಿಕ ಮರೆತುಬಿಟ್ಟಿತು. ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ಮಾತು ಕೇವಲ ರಾಜಕೀಯ ಭರವಸೆಯಾಗಿ ಉಳಿದಿದೆ. ಎಸಿಬಿ ರಚಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ಎಸಿಬಿ ಬೇಡ ಅನ್ನುವ ರೀತಿಯಲ್ಲಿ ನ್ಯಾಯಾಲಯದಲ್ಲಿ ಲೋಕಾಯುಕ್ತ ಸಂಸ್ಥೆ ವಾದ ಮಂಡಿಸಿದೆ. ಆದರೆ ಸರಕಾರ ಈವರೆಗೆ ಯಾವುದೇ ಸ್ಪಷ್ಟ ನಿಲುವು ತಾಳದೆ ಕಾಲ ವ್ಯಯ ಮಾಡುತ್ತಿದೆ.

ಏನೇ ಇರಲಿ, ದಶಕದ ಹಿಂದೆ ರಾಜಕೀಯ ವಿಪ್ಲವಗಳಿಗೆ ಕಾರಣ ವಾಗಿದ್ದ, ರಾಜ್ಯದ ಜನರ ಮನೆ ಮಾತಾಗಿದ್ದ ಲೋಕಾಯುಕ್ತ ಸಂಸ್ಥೆಯ ಗತವೈಭವ ಮರುಕಳಿಸಬೇಕು. ಹೆಚ್ಚು ಬಲಿಷ್ಠವಾಗಿ, ಭ್ರಷ್ಟಾಚಾರ ತಡೆಯು ವಲ್ಲಿ ನಿರ್ಣಾಯಕ ಪಾತ್ರವಹಿಸಬೇಕು. ಆ ನಿಟ್ಟಿನಲ್ಲಿ ಸರಕಾರ ತನ್ನ ಶಾಸನ ಬದ್ಧ ಜವಾಬ್ದಾರಿ ನಿರ್ವಹಿಸಬೇಕು. ಯಾವುದೇ ವಿಳಂಬ ಮಾಡದೆ ಹೊಸ ಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಆದಷ್ಟು ಬೇಗ ಲೋಕಾಯುಕ್ತ ಸಂಸ್ಥೆ ಮುಖ್ಯಸ್ಥರನ್ನು ಹೊಂದುವಂತೆ ಮಾಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next