ನವದೆಹಲಿ: “ಲೋಕಪಾಲ’ ಸ್ಥಾಪನೆಯು ಭ್ರಷ್ಟಾಚಾರ ನಿಗ್ರಹದಲ್ಲಿ ಬಹುದೊಡ್ಡ ಪಾತ್ರ ವಹಿಸಲಿದೆ ಎಂದು ನಂಬಿದ್ದ ಅನೇಕರಿಗೆ ಭ್ರಮನಿರಸನವಾಗಿದೆ. ಭ್ರಷ್ಟಾಚಾರ ನಿಗ್ರಹ ಒಂಬುಡ್ಸ್‌ಮನ್ ಆಗಿರುವ “ಲೋಕಪಾಲ’ವು ಈವರೆಗೆ ಲಂಚದ ಆರೋಪ ಹೊತ್ತಿರುವ ಒಬ್ಬನೇ ಒಬ್ಬ ವ್ಯಕ್ತಿಯನ್ನೂ ವಿಚಾರಣೆ ನಡೆಸಿಲ್ಲ. ಲೋಕಪಾಲದ ಕಾರ್ಯಕ್ಷಮತೆಯು ತೃಪ್ತಿದಾಯಕವಾಗಿಲ್ಲ ಎಂದು ಸಂಸದೀಯ ಸಮಿತಿಯೊಂದು ಹೇಳಿದೆ.
ಇತ್ತೀಚೆಗಷ್ಟೇ ಸಂಸತ್‌ನಲ್ಲಿ ಮಂಡಿಸಲಾದ ವರದಿಯಲ್ಲಿ ಸಮಿತಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಲೋಕಪಾಲವು ತನ್ನ ಮುಂದೆ ಹಲವಾರು ದೂರುಗಳು ಬಂದರೂ, ಅದು ನಿಗದಿತ ನಮೂನೆಯಲ್ಲಿಲ್ಲ ಎಂಬ ಸಬೂಬು ಹೇಳಿ ದೂರು ದಾಖಲಿಸಲು ನಿರಾಕರಿಸಿದೆ. ವಾಸ್ತವದಲ್ಲಿ ನೈಜ ದೂರುಗಳನ್ನು ಲೋಕಪಾಲ ಈ ರೀತಿ ತಾಂತ್ರಿಕ ಕಾರಣಗಳನ್ನು ಹೇಳಿಕೊಂಡು ತಿರಸ್ಕರಿಸಬಾರದು ಎಂದು ಸಮಿತಿ ಹೇಳಿದೆ. ಭಾರತವು ಜಿ20 ಭ್ರಷ್ಟಾಚಾರ ನಿಗ್ರಹ ಕಾರ್ಯಪಡೆಯ ನೇತೃತ್ವ ವಹಿಸಿರುವಂಥ ಈ ಸಂದರ್ಭದಲ್ಲಿ, ಲೋಕಪಾಲವು ದೇಶದಲ್ಲಿ ಭ್ರಷ್ಟಾಚಾರ ನಿಗ್ರಹ ವ್ಯವಸ್ಥೆಯನ್ನು ಬಲಿಷ್ಠಗೊಳಿಸಬೇಕು ಎಂದೂ ತಿಳಿಸಿದೆ.
ಲೋಕಪಾಲರ ಮುಖ್ಯಸ್ಥ ಹುದ್ದೆಯು ಕಳೆದ ವರ್ಷ ಮೇ ನಿಂದಲೂ ಖಾಲಿ ಇದೆ. ಅದನ್ನು ಇನ್ನೂ ಭರ್ತಿ ಮಾಡಿಲ್ಲವೇಕೆ ಎಂದು ಪ್ರಶ್ನಿಸಿರುವ ಸಂಸದೀಯ ಸಮಿತಿ, ಖಾಲಿ ಹುದ್ದೆ ಭರ್ತಿ ಮಾಡಲು ಕೈಗೊಂಡ ಕ್ರಮ ಗಳೇನು ಎಂದು ಸರ್ಕಾರವನ್ನು ಪ್ರಶ್ನಿಸಿದೆ.
2022-23ರಲ್ಲಿ ಲೋಕಪಾಲಕ್ಕೆ ಸಲ್ಲಿಕೆಯಾದ ದೂರುಗಳ ಪೈಕಿ 2,518 ದೂರುಗಳು ನಿಗದಿತ ನಮೂನೆಯಲ್ಲಿ ಇಲ್ಲ ಎಂಬ ಕಾರಣಕ್ಕೆ ತಿರಸ್ಕೃತಗೊಂಡಿವೆ. 242 ದೂರುಗಳನ್ನು ಮಾತ್ರ ಸ್ವೀಕರಿಸಲಾಗಿದೆ. ಈ ಪೈಕಿ 191 ಅನ್ನು ವಿಲೇವಾರಿ ಮಾಡಲಾಗಿದೆ.