Advertisement

ಲೋಕಾಗೆ ಝಡ್‌ ಗ್ರೇಡ್‌ ಸೇಪ್ಟಿ

10:36 AM May 24, 2018 | |

ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಲೋಕಾಯುಕ್ತರ ಕೊಲೆ ಯತ್ನ ಪ್ರಕರಣದ ಬಳಿಕ ಎಚ್ಚೆತ್ತ ಪೊಲೀಸ್‌ ಇಲಾಖೆ, ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರಿಗೆ “ಝಡ್‌’ ಶ್ರೇಣಿ ಭದ್ರತೆ ಒದಗಿಸಲು ನಿರ್ಧರಿಸಿದೆ.

Advertisement

ಮಾ.7ರಂದು ತೇಜರಾಜ್‌ ಶರ್ಮಾ ಎಂಬಾತ ಲೋಕಾಯುಕ್ತರ ಕೊಠಡಿಯಲ್ಲಿಯೇ ವಿಶ್ವನಾಥ ಶೆಟ್ಟಿ ಅವರಿಗೆ
ಚಾಕುವಿನಿಂದ ಇರಿದಿದ್ದ. ಸಾಂವಿಧಾನಿಕ ಸಂಸ್ಥೆಯಲ್ಲಿ ಹಾಡಹಗಲೇ ನಡೆದ ಈ ಕೃತ್ಯಕ್ಕೆ ಪೊಲೀಸ್‌ ಭದ್ರತಾ ವ್ಯವಸ್ಥೆಯ ಲೋಪವೇ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ಕೇಳಿಬಂದಿತ್ತು. ಇದರಿಂದ ಎಚ್ಚೆತ್ತುಕೊಂಡ ರಾಜ್ಯಗುಪ್ತಚರ ವಿಭಾಗ, ಘಟನೆ ಸಂಬಂಧ ಆಂತರಿಕ ತನಿಖೆ ನಡೆಸಿ, ಲೋಕಾಯುಕ್ತರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ, ಅತಿ ಗಣ್ಯರಿಗೆ ನೀಡಲಾಗುವ “ಝಡ್‌’ ಶ್ರೇಣಿ ಭದ್ರತೆಯನ್ನು ನ್ಯಾ. ಶೆಟ್ಟಿ ಅವರಿಗೆ ಕೂಡಲೇ ಒದಗಿಸುವಂತೆ ರಾಜ್ಯ ಸರ್ಕಾರ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್‌ ವಿಭಾಗಕ್ಕೆ ಏಪ್ರಿಲ್‌ 21ರಂದೇ ಶಿಫಾರಸು ಮಾಡಿದೆ.

ಗುಪ್ತಚರ ವಿಭಾಗದ ಶಿಫಾರಸ್ಸಿನ ಮೇರೆಗೆ ಲೋಕಾಯುಕ್ತರಿಗೆ “ಝಡ್‌’ ಶ್ರೇಣಿ ಭದ್ರತೆ ನೀಡಲು ಗೃಹ ಇಲಾಖೆ ನಿರ್ಧರಿಸಿ ವಿವಿಐಪಿ ವಿಭಾಗದ ಜತೆ ಚರ್ಚಿಸಿದ್ದು, ಸದ್ಯದಲ್ಲಿಯೇ ಸೇವೆ ಒದಗಿಸಲಾಗುತ್ತದೆ ಎಂದು ಲೋಕಾಯುಕ್ತಕ್ಕೆ ಮಾಹಿತಿ ನೀಡಿದೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ಖಚಿತಪಡಿಸಿವೆ. 

ಇದಲ್ಲದೆ ಲೋಕಾಯುಕ್ತ ಕಚೇರಿಯಲ್ಲಿ ತಾತ್ಕಾಲಿಕವಾಗಿ ಅಳವಡಿಸಿರುವ ಲೋಹಶೋಧಕಗಳನ್ನು ಬದಲಾಯಿಸಿ ಹೊಸದಾಗಿ ಎರಡು ಕಾಯಂ ಲೋಹ ಶೋಧಕ, ಒಂದು ಬ್ಯಾಗೇಜ್‌ ಸ್ಕ್ಯಾನರ್ ಒದಗಿಸುವುದು. ಜತೆಗೆ ಲೋಕಾಯುಕ್ತ  ಕಚೇರಿಯ ಭದ್ರತೆಗೆ ಪ್ರತ್ಯೇಕವಾಗಿ 20 ಮಂದಿ ಪೊಲೀಸ್‌ ಸಿಬ್ಬಂದಿಯನ್ನೂ ನಿಯೋಜಿಸಲು ಇಲಾಖೆ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಮಾರಣಾಂತಿಕ ಹಲ್ಲೆ ಹಾಗೂ ಮೇ 3ರಂದು ಮಹಿಳೆಯೊಬ್ಬರು ಚಾಕು ತೆಗೆದುಕೊಂಡು ಬಂದ ಘಟನೆ ಬಳಿಕ ಲೋಕಾಯುಕ್ತ ಕಚೇರಿಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೂರುದಾರರನ್ನು ಹೊರತುಪಡಿಸಿ ಉಳಿದವರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಜತೆಗೆ, ಖುದ್ದು ಲೋಕಾಯುಕ್ತರ ಸೇವೆಗೆ
ನಿಯೋಜನೆಗೊಂಡಿರುವ ಗನ್‌ಮ್ಯಾನ್‌ ಸಮ್ಮುಖದಲ್ಲಿಯೇ ಕೊಠಡಿಯಲ್ಲಿ ದೂರುದಾರರೊಂದಿಗೆ ಲೋಕಾಯುಕ್ತರು ಅಹವಾಲು ಆಲಿಸುತ್ತಿದ್ದಾರೆ. “ಝಡ್‌’ ಶ್ರೇಣಿ ಭದ್ರತೆ ಬಳಿಕವೂ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಲೋಕಾಯುಕ್ತ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಯಾರಿಗೆಲ್ಲಾ ಝಡ್‌ ಶ್ರೇಣಿ ಭದ್ರತೆ?
“ಝಡ್‌’ ಶ್ರೇಣಿಯ ಭದ್ರತೆಯು ಬಹುತೇಕ ವಿವಿಐಪಿಗಳಿಗೆ ಒದಗಿಸಲಾಗಿರುತ್ತದೆ. ಕೇಂದ್ರ ಸರ್ಕಾರದ ಕ್ಯಾಬಿನೆಟ್‌ ದರ್ಜೆ ಸಚಿವರು, ರಾಜ್ಯಪಾಲರು, ರಾಜ್ಯದ ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿಗಳು, ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು, ಜೀವ ಭಯ ಎದುರಿಸುವ ಅತಿಗಣ್ಯವ್ಯಕ್ತಿಗಳು, ರಾಜಕಾರಣಿಗಳಿಗೆ ಈ ಸೇವೆ ಪೂರೈಸಲಾಗುತ್ತದೆ. ಗುಪ್ತಚರ ದಳದ ಮಾಹಿತಿ ಆಧರಿಸಿ ಪೊಲೀಸ್‌ ಇಲಾಖೆ ಈ ಸೇವೆ ಪೂರೈಸಲಿದೆ. ರಾಜ್ಯದಲ್ಲಿ ರಾಜಕಾರಣಿಗಳನ್ನು ಹೊರತುಪಡಿಸಿ ಇದೇ ಮೊದಲ ಬಾರಿಗೆ ಸಾಂವಿಧಾನಿಕ ಹುದ್ದೆ ಲೋಕಾಯುಕ್ತರಿಗೂ ಈ ಸೇವೆ ಲಭ್ಯವಾಗಲಿದೆ.

ಹೇಗಿರುತ್ತೆ ಉನ್ನತ ಹಂತದ ಭದ್ರತೆ?
“ಝಡ್‌’ ಶ್ರೇಣಿ ಸೇವೆಯಲ್ಲಿ ಎಸ್‌.ಪಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿಯ ಬೆಂಗಾವಲು (ಎಸ್ಕಾರ್ಟ್‌) ವಾಹನ, 22 ಮಂದಿ ಪೊಲೀಸ್‌ ಸಿಬ್ಬಂದಿ, 2ರಿಂದ 8 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿ, ಇಬ್ಬರು ಅಧಿಕಾರಿಗಳಿಗೆ ಸ್ಟೆನ್‌ಗನ್‌, ಉಳಿದವರಿಗೆ 9 ಎಂ.ಎಂ ಪಿಸ್ತೂಲ್‌, ಜತೆಗೆ, ಲೋಕಾಯುಕ್ತರಿಗೆ ಬುಲೆಟ್‌ ಫ್ರೂಪ್‌ ಜಾಕೆಟ್‌ ಒದಗಿಸಲು ಅವಕಾಶವಿದೆ. ಇದಲ್ಲದೆ ಮುಂಜಾಗ್ರತಾ ಕ್ರಮವಾಗಿ ವಿಧ್ವಂಸಕ ಶಕ್ತಿಗಳ ಮೇಲೆ ಪ್ರತ್ಯೇಕ ಸಿಬ್ಬಂದಿ ತೀವ್ರ ನಿಗಾ ವಹಿಸಲಿದ್ದಾರೆ. ಲೋಕಾಯುಕ್ತರ ವಸತಿ, ಗೃಹ, ಇತರೆಡೆ ಪ್ರಯಾಣ, ಪ್ರವಾಸ, ನಿಗದಿತ ಕಾರ್ಯಕ್ರಮಗಳಿಗೆ ಭೇಟಿ ನೀಡಿದಾಗ ನಿಗದಿಯಂತೆ ಆಯಾ ವಲಯದ ಪೊಲೀಸ್‌ ಸಿಬ್ಬಂದಿ ಈ ಸೇವೆ ನೀಡಬೇಕು ಎಂದು ಗುಪ್ತಚರ ಇಲಾಖೆ ಶಿಫಾರಸ್ಸಿನಲ್ಲಿ ಉಲ್ಲೇಖೀಸಿದೆ.

 ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next