Advertisement

ಲೋಕ ಸಮರ: ಕಾಣದ ಪ್ರಚಾರದ ಭರಾಟೆ

02:01 PM Apr 03, 2019 | Team Udayavani |

ರಾಮನಗರ: ಲೋಕಸಭಾ ಚುನಾವಣೆ ಇನ್ನು ಕೇವಲ 14 ದಿನವಿದೆ. ಆದರೆ, ಚುನಾವಣಾ ಕಾವು ಜಿಲ್ಲೆಯಲ್ಲಿ ಏರುತ್ತಿಲ್ಲ! ಡಿ.ಕೆ.ಸುರೇಶ್‌ ಪರ ಕಾಂಗ್ರೆಸ್‌ ಪಕ್ಷ ಯುಗಾದಿ ಹಬ್ಬದ ನಂತರ ಪ್ರಚಾರ ಆರಂಭಿಸುವುದಾಗಿ ಹೇಳಿದರೆ, ಅನಿತಾ ಕುಮಾರಸ್ವಾಮಿ ಬಂದರೆ ಪ್ರಚಾರಕ್ಕೆ ಹೋಗ್ತಿವಿ ಎಂದು ಮೈತ್ರಿ ಪಕ್ಷದ ಜೆಡಿಎಸ್‌ ಕಾರ್ಯಕರ್ತರು ಹೇಳಿದ್ದಾರೆ. ಇನ್ನೊಂದೆಡೆ ಬಿಜೆಪಿ ಪಕ್ಷದ ಕಾರ್ಯಕರ್ತರು ಅಶ್ವತ್ಥನಾರಾಯಣ ಅವರು ಪ್ರಚಾರಕ್ಕೆ ಬಂದರೆ ಅವರೊಟ್ಟಿಗೆ ಹೋಗುತ್ತಿದ್ದಾರೆ.

Advertisement

ಮಂಡ್ಯ ಕ್ಷೇತ್ರದ್ದೇ ಚಿಂತೆ!: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಮನಗರ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕಾವು ಪಡೆದುಕೊಂಡಿಲ್ಲ. ಆದರೆ, ಸ್ಥಳೀಯ ವಾಟ್ಸಪ್‌ ಗುಂಪುಗಳಲ್ಲಿ ನೆರೆ ಕ್ಷೇತ್ರ ಮಂಡ್ಯ ಸಮರದ್ದೇ ಚಿಂತೆ ಕಾಡುತ್ತಿದೆ. ಸುಮಲತಾ ಗೆಲ್ಲುತ್ತಾರೆ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ದೊಡ್ಡ ಗೌಡ್ರ ಕುಟುಂಬದ ರಾಜಕೀಯ ಗೊತ್ತಿಲ್ಲವಾ ಎಂದು ಟಾಂಗ್‌ ಕೊಡುವ ಮಂದಿಗೇನು ಕಡಿಮೆ ಇಲ್ಲ. ಮಂಡ್ಯ ಕ್ಷೇತ್ರದ ರಾಜಕೀಯದ ಬಗ್ಗೆ ಇರುವ ಕಾಳಜಿ ಸ್ಥಳೀಯರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಗ್ಗೆ ಕಾಳಜಿ ವ್ಯಕ್ತವಾಗದಿರುವುದು ಸೋಜಿಗ.

ಬೆಂಗಳೂರಲ್ಲೇ ಠಿಕಾಣಿ ಹೂಡಿದ ಡಿ.ಕೆ.ಸುರೇಶ್‌: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಲೋಕಸಭಾ ಕ್ಷೇತ್ರಗಳು ಬೆಂಗಳೂರು ನಗರ ವ್ಯಾಪ್ತಿಗೆ ಬರುತ್ತವೆ. ಕ್ಷೇತ್ರ ವ್ಯಾಪ್ತಿಯ 25 ಲಕ್ಷ ಮತದಾರರ ಪೈಕಿ ಸುಮಾರು 16 ಲಕ್ಷ ಮತದಾರರು ಬೆಂಗಳೂರು ನಗರ ವ್ಯಾಪ್ತಿಯಲ್ಲೇ ಇದ್ದಾರೆ. ಹೀಗಾಗಿ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಬೆಂಗಳೂರು ನಗರದ ಆರ್‌.ಆರ್‌.ನಗರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್‌ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕುಣಿಗಲ್‌ ಮತ್ತು ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಏಪ್ರಿಲ್‌ 6ರಂದು ಯುಗಾದಿ ಹಬ್ಬದ ನಂತರ ಪ್ರಚಾರ ಕಾರ್ಯ ಆರಂಭಿಸುವುದಾಗಿ ಹೇಳಿಕೊಂಡಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನರೇಂದ್ರ ಮೋದಿ ಅವರ ಅಲೆ ಹೆಚ್ಚು ಇದೆ ಎಂದು ವಿಶ್ಲೇಷಿಸಿರುವ ಕಾಂಗ್ರೆಸ್‌ ಪಕ್ಷ, ಆ ಭಾಗದ ಮತದಾರರ ಮನ ಸೆಳೆಯುವ ನಿಟ್ಟಿನಲ್ಲಿ ಡಿ.ಕೆ.ಸುರೇಶ್‌ ಹೆಚ್ಚು ಆ ಭಾಗದಲ್ಲೇ ಹೆಚ್ಚು ಗಮನ ಹರಿಸಿದ್ದಾರೆ ಎಂದು ತಿಳಿದು ಬಂದಿದೆ.

ತೆನೆ ಮತ ಪಡೆಯಲು ಕೈಗೆ ಚಿಂತೆ?: ಕಳೆದ ಮೇ ತಿಂಗಳಲ್ಲಿ ನಡೆದ ರಾಜ್ಯ ಸಾರ್ವತ್ರಿಕ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಗೆಲುವಿಗೆ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೈತ್ರಿ ಅಭ್ಯರ್ಥಿ ಅನಿತಾ ಗೆಲುವಿಗೆ ಡಿ.ಕೆ.ಸುರೇಶ್‌ ಮತ್ತು ಡಿ.ಕೆ.ಶಿವಕುಮಾರ್‌ ಶ್ರಮಿಸಿದ್ದಾರೆ.

Advertisement

ರಣ ತಂತ್ರ ರೂಪಿಸಿ ವಿಜಯ ತಂದುಕೊಟ್ಟಿದ್ದಾರೆ. ಜೆಡಿಎಸ್‌ ಅಭ್ಯರ್ಥಿಯ ಗೆಲುವಿಗೆ ಕಾಂಗ್ರೆಸ್‌ ಕಾರ್ಯಕರ್ತರು ಸಹ ಮತಕೊಟ್ಟು ಅನಿತಾರನ್ನು ದಾಖಲೆ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಆದರೆ, ಇದೀಗ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವ ಮಹತ್ತರ ಹೊಣೆಯನ್ನು ಜೆಡಿಎಸ್‌ ಹೊರಬೇಕಾಗಿದೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಕ್ರಿಯಿಸಿದ್ದಾರೆ.

ಆದರೆ ಮೈತ್ರಿ ಪಕ್ಷ ಜೆಡಿಎಸ್‌ನಲ್ಲಿ ಡಿ.ಕೆ.ಸುರೇಶ್‌ ಅವರ ಗೆಲುವಿಗೆ ಶ್ರಮಿಸುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಯುಗಾದಿ ಹಬ್ಬದ ನಂತರ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರೇ ಡಿ.ಕೆ.ಸುರೇಶ್‌ ಪರ ಪ್ರಚಾರ ಆರಂಭಿಸಲಿದ್ದು, ಜೆಡಿಎಸ್‌ನ ನಿಜವಾದ ಬಣ್ಣ ಬಯಲಾಗಲಿದೆ ಎಂದು ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ಹೇಳಿದ್ದಾರೆ.

ಮೈತ್ರಿ ಪಕ್ಷಗಳಿಗೆ ಪ್ರತಿಷ್ಠೆಯ ಕ್ಷೇತ್ರ!: ಜೋಡೆತ್ತುಗಳಾದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಪ್ರತಿನಿಧಿಸುತ್ತಿರುವ ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಮೈತ್ರಿ ಪಕ್ಷಗಳಿಗೆ ಪ್ರತಿಷ್ಠೆಯ ಕ್ಷೇತ್ರವಾಗಿದೆ.

ಯುಗಾದಿ ನಂತರ ಬಿರುಸು ಪಡೆದುಕೊಳ್ಳಲಿರುವ ಪ್ರಚಾರ: ಯುಗಾದಿ ಹಬ್ಬದ ನಂತರ ಏಪ್ರಿಲ್‌ 8ರಿಂದ ಬಹುಶಃ ಮತ ಪ್ರಚಾರ ಬಿರುಸುಗೊಳ್ಳುವ ಸಾಧ್ಯತೆ ಇದೆ. ಏಪ್ರಿಲ್‌ 3ರ ಬುಧವಾರ ಅನಿತಾ ಕುಮಾರಸ್ವಾಮಿ ಕನಕಪುರ ತಾಲೂಕು ಮರಳವಾಡಿ, ಹಾರೋಹಳ್ಳಿ ಹೋಬಳಿಗಳು ಮತ್ತು ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಕೆಲವು ಗ್ರಾಮಗಳಲ್ಲಿ ಡಿ.ಕೆ.ಸುರೇಶ್‌ ಪರ ಮತಪ್ರಚಾರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಪ್ರಚಾರದಲ್ಲಿ ನಿರಂತರ: ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಅವರು ಪ್ರತಿದಿನ ಕ್ಷೇತ್ರ ವ್ಯಾಪ್ತಿಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ಕೊಟ್ಟು ತಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದಾರೆ.

ನರೇಂದ್ರ ಮೋದಿಗೆ ಮತಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಕೆಲದಿನಗಳ ಹಿಂದೆ ಇಲ್ಲಿನ ವಕೀಲರ ಸಂಘಕ್ಕೆ ಭೇಟಿ ಕೊಟ್ಟಿದ್ದರು, ಸೋಮವಾರ ರಾಮನಗರದ ಎಪಿಎಂಸಿ ಮಾರುಕಟ್ಟೆ ಮತ್ತು ಬಸ್‌ ನಿಲ್ದಾಣ ನಿಲ್ದಾಣದಲ್ಲಿ ಪ್ರಚಾರ ಮಾಡಿದ ಅವರು, ಮಂಗಳವಾರ ಚನ್ನಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆಗೆ ಭೇಟಿ ನೀಡಿ ಮತಯಾಚಿಸಿದ್ದಾರೆ.

ಮೈತ್ರಿ ಅಭ್ಯರ್ಥಿ ಗೆಲುವಿಗೆ ಜೆಡಿಎಸ್‌ ಬದ್ಧ. ಶಾಸಕಿ ಅನಿತಾ ಅಥವಾ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬಂದಾಗಲ್ಲೆಲ್ಲ ಅವರೊಟ್ಟಿಗೆ ಮೈತ್ರಿ ಅಭ್ಯರ್ಥಿಯ ಪರ ಪ್ರಚಾರ ಮಾಡಿದ್ದೇವೆ.
-ರಾಜಶೇಖರ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ

ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಪರ ಈ ಭಾಗದಲ್ಲಿ ಬಹಿರಂಗ ಪ್ರಚಾರದ ಬಿರುಸು ಯುಗಾದಿ ನಂತರ ಪಡೆದುಕೊಳ್ಳಲಿದೆ. ಕಾರ್ಯಕರ್ತರು ಮನೆ, ಮನೆಗೆ ಭೇಟಿ ನೀಡಿ ಪ್ರಚಾರದಲ್ಲಿ ತೊಡಗಿದ್ದಾರೆ. ಅಭ್ಯರ್ಥಿ ಡಿ.ಕೆ.ಸುರೇಶ್‌ ನಿರಂತರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
-ಎ.ಬಿ.ಚೇತನ್‌ ಕುಮಾರ್‌, ಅಧ್ಯಕ್ಷ, ರಾಮನಗರ ನಗರ ಬ್ಲಾಕ್‌ ಕಾಂಗ್ರೆಸ್‌

* ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next