Advertisement

ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಲೋಕ ಅದಾಲತ್‌ಗೆ ಮೊರೆ

10:19 AM Feb 24, 2020 | Team Udayavani |

ಉಡುಪಿ: ಲೋಕ ಅದಾಲತ್‌ನಲ್ಲಿ ವಿಚಾರಣೆಗಾಗಿ ಮೋಟಾರು ವಾಹನ ಕಾಯ್ದೆ ಮತ್ತು ಎನ್‌ಐ ಕಾಯ್ದೆಯಡಿ ದಾಖಲಾದ ಪ್ರಕರಣಗಳು ವರ್ಷಂಪ್ರತಿ ಹೆಚ್ಚಳವಾಗುತ್ತಿವೆ. ಜಿಲ್ಲೆಯಲ್ಲಿ ಒಟ್ಟು 2129 ಮೋಟಾರು ಅಪಘಾತ ಪ್ರಕರಣ ಹಾಗೂ 6251 ಚೆಕ್‌ಬೌನ್ಸ್‌ ಪ್ರಕರಣಗಳು ವಿಚಾರಣಾ ಹಂತದಲ್ಲಿದೆ. ಕಳೆದ ಲೋಕ ಅದಾಲತ್‌ನಲ್ಲಿ 111 ಅಪಘಾತ ಪ್ರಕರಣಗಳು ಹಾಗೂ 123 ಚೆಕ್‌ಬೌನ್ಸ್‌ ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ. 2015ರಲ್ಲಿ 248 ವಾಹನ ಅಪಘಾತ ಪರಿಹಾರ ಪ್ರಕರಣಗಳು ಬಗೆಹರಿದಿದ್ದರೆ 2019ರಲ್ಲಿ ಈ ಸಂಖ್ಯೆ 626ಕ್ಕೆ ಏರಿಕೆಯಾಗಿದೆ. 2015ರಲ್ಲಿ 268 ಚೆಕ್‌ಬೌನ್ಸ್‌ ಪ್ರಕರಣಗಳು ಇತ್ಯರ್ಥವಾಗಿದ್ದರೆ, 2019ರಲ್ಲಿ ಈ ಸಂಖ್ಯೆ 624ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯಲ್ಲಿ 29,412 ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಶೀಘ್ರ ನ್ಯಾಯದಾನ ನಿಟ್ಟಿನಲ್ಲಿ ಈ ವರ್ಷದ ಮೊದಲ ಲೋಕ ಅದಾಲತ್‌ನಲ್ಲಿ 2,180 ಪ್ರಕರಣಗಳನ್ನು ವಹಿಸಿಕೊಂಡು 1,251 ದಾವೆಗಳನ್ನು ಇತ್ಯರ್ಥಪಡಿಸಲಾಗಿದೆ. ಉಡುಪಿ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಒಟ್ಟು 14,245 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಉಳಿದಂತೆ ಕುಂದಾಪುರ ತಾಲೂಕಿನಲ್ಲಿ 11,702 ಹಾಗೂ ಕಾರ್ಕಳ ತಾಲೂಕಿನಲ್ಲಿ 3465 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.

ಜತೆಗೆ ದಿನಕ್ಕೆ ಸರಾಸರಿ 3 ಚೆಕ್‌ಬೌನ್ಸ್‌ ಪ್ರಕರಣಗಳು, ವಾಹನ ಅಪಘಾತ, ವಿವಾಹ ವಿಚ್ಚೇದನ, ಕೌಟುಂಬಿಕ ವ್ಯಾಜ್ಯಗಳು ದಾಖಲಾಗುತ್ತಿರುತ್ತವೆ. ಇವುಗಳನ್ನು ವಿಚಾರಣೆ ನಡೆಸಿ ಶೀಘ್ರ ನ್ಯಾಯದಾನ ಮಾಡೋದು ಸವಾಲಿನ ಕಾರ್ಯವಾಗಿದ್ದು, ನ್ಯಾಯಾಲಯಗಳ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ವರ್ಷದಲ್ಲಿ 5 ಬಾರಿ ಲೋಕ ಅದಾಲತ್‌ ಮೂಲಕ ಇಂಥ ದಾವೆಗಳನ್ನು ಬಗೆಹರಿಸಲಾಗುತ್ತದೆ.

ವ್ಯಾಜ್ಯಪೂರ್ವ ಪ್ರಕರಣಗಳು
ನ್ಯಾಯಾಲಯಗಳಲ್ಲಿ ದಾವೆ ಸಲ್ಲಿಕೆ ಮುನ್ನವೇ ಲೋಕ ಅದಾಲತ್‌ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ಅವಕಾಶವಿದೆ. ಇದನ್ನು ವ್ಯಾಜ್ಯಪೂರ್ವ ಪ್ರಕರಣಗಳೆಂದು ಪರಿಗಣಿಸಲಾಗುತ್ತಿದ್ದು, ಇದಕ್ಕೆ ನ್ಯಾಯಾಲಯ ಶುಲ್ಕ ವಿನಾಯತಿಯೂ ಇದೆ. 2015ರಲ್ಲಿ 2577, 2016ರಲ್ಲಿ 516, 2017ರಲ್ಲಿ 557, 2018ರಲ್ಲಿ 408, 2019ರಲ್ಲಿ 935 ಹಾಗೂ ಫೆ. 8ರಂದು ನಡೆದ ಲೋಕ ಅದಾಲತ್‌ನಲ್ಲಿ 307 ಪ್ರಕರಣಗಳನ್ನು ವಿಚಾರಣೆ ಪರಿಗಣಿಸಿ, 137 ಕೇಸ್‌ಗಳನ್ನು ಇತ್ಯರ್ಥಗೊಳಿಸಲಾಗಿದೆ.

ಕಳೆದ ವರ್ಷ 5 ಸಾವಿರ ಪ್ರಕರಣ ಇತ್ಯರ್ಥ
ಜಿಲ್ಲೆಯಲ್ಲಿ 2019ನೇ ಸಾಲಿನಲ್ಲಿ ಲೋಕ ಅದಾಲತ್‌ ಮೂಲಕ 5,079 ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು. 2015ರಲ್ಲಿ ಪ್ರತೀದಿನ ಲೋಕ ಅದಾಲತ್‌ ನಡೆಯುತ್ತಿದ್ದ ಕಾರಣ ಒಂದೇ ವರ್ಷದಲ್ಲಿ 10,159 ದಾವೆಗಳನ್ನು ಬಗೆಹರಿಸಲಾಗಿತ್ತು. ಅನಂತರ 2016ರಲ್ಲಿ ತಿಂಗಳಿಗೊಮ್ಮೆ ಜನತಾ ಅದಾಲತ್‌ ನಡೆದು 7,529 ಪ್ರಕರಣ, 2017ರಲ್ಲಿ 3,833 ಪ್ರಕರಣ, 2018ರಲ್ಲಿ 2 ತಿಂತಳಿಗೊಮ್ಮೆ ನಡೆದ ಲೋಕ ಅದಾಲತ್‌ನಲ್ಲಿ 2,274 ಪ್ರಕರಣಗಳನ್ನು ಬಗೆಹರಿಸಲಾಗಿತ್ತು.

Advertisement

ಮಧ್ಯವರ್ತಿಗಳಿಂದ ಪ್ರಕರಣ ಇತ್ಯರ್ಥ
ಲೋಕ ಅದಾಲತ್‌ನಲ್ಲಿ ಬಗೆಹರಿಸಬಹುದಾದ ಪ್ರಕರಣಗಳನ್ನು ಇತ್ಯರ್ಥಪಡಿಸಲೆಂದೇ ಉಡುಪಿಯಲ್ಲಿ 49, ಕಾರ್ಕಳದಲ್ಲಿ 11, ಕುಂದಾಪುರದಲ್ಲಿ 21 ಸಹಿತ ಜಿಲ್ಲೆಯಲ್ಲಿ ಒಟ್ಟು 81 ಮಧ್ಯವರ್ತಿಗಳನ್ನು ನಿಯೋಜಿಸಲಾಗಿದೆ. 15 ವರ್ಷಕ್ಕೂ ಅಧಿಕ ಅನುಭವವಿರುವ ವಕೀಲರು ಈ ಕೆಲಸವನ್ನು ನಿರ್ವಹಿಸುತ್ತಾರೆ. ಇದಕ್ಕಾಗಿಯೇ ಅವರಿಗೆ ಬೆಂಗಳೂರಿನಲ್ಲಿ 40 ಗಂಟೆಗಳ ಕಾಲ ತರಬೇತಿ ನೀಡಲಾಗಿದೆ.

ಲೋಕ ಅದಾಲತ್‌ನಲ್ಲಿ ಶೀಘ್ರ ಇತ್ಯರ್ಥ
ಲೋಕ ಅದಾಲತ್‌ ಮೂಲಕ ಉಭಯ ಪಕ್ಷದವರಿಗೂ ರಾಜೀ ಸಂಧಾನಕ್ಕೆ ಅವಕಾಶವಿದೆ. ದಾವೆಗಳನ್ನು ಶೀಘ್ರ ಇತ್ಯರ್ಥಪಡಿಸಿಕೊಳ್ಳಬಹುದು. ಇಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಇದಲ್ಲದೆ ಪ್ರತೀ ಬುಧವಾರ ಮತ್ತು ಶುಕ್ರವಾರ ಪೂರ್ವಸಮಾಲೋಚನೆ ಲೋಕ ಅದಾಲತ್‌ ನಡೆಯುತ್ತದೆ. ಸಾಮಾನ್ಯ ವ್ಯಾಜ್ಯಗಳು ಕೋರ್ಟ್‌ ಮೆಟ್ಟಿಲು ಹತ್ತುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶ.
-ಕಾವೇರಿ, ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next