ಹೊಸದಿಲ್ಲಿ: ಸೋಮವಾರವೂ ಸಂಸತ್ತಿನಲ್ಲಿ ಕಾವೇರಿ ಹಾಗೂ ರಫೇಲ್ ವಿಷಯಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ತೀವ್ರ ಪ್ರತಿಭಟನೆ ಮುಂದುವರಿದಿತ್ತು. ಈ ಮಧ್ಯೆಯೇ ಮಂಗಳಮುಖೀಯರಿಗೆ ಪ್ರತ್ಯೇಕ ಗುರುತು ಚೀಟಿ ನೀಡುವ ಮಸೂದೆಗೆ ವಿಪಕ್ಷಗಳ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ.
ಮಂಗಳಮುಖೀಗಳ (ಹಕ್ಕು ರಕ್ಷಣೆ) ಮಸೂದೆ 2016 ಅನ್ನು ಎರಡು ವರ್ಷಗಳ ಹಿಂದೆಯೇ ಲೋಕಸಭೆಯಲ್ಲಿ ಮಂಡಿಸಲಾಗಿತಾದರೂ, 27 ತಿದ್ದುಪಡಿಗಳ ನಂತರ ಈಗ ಅನುಮೋದಿಸಲಾಗಿದೆ.
ತ್ರಿವಳಿ ತಲಾಖ್ ಮಸೂದೆ ಮಂಡನೆ: ಒಂದೇ ಬಾರಿಗೆ ತ್ರಿವಳಿ ತಲಾಖ್ ಹೇಳುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿಸುವ ಪ್ರಸ್ತಾಪ ವುಳ್ಳ ಹೊಸ ಮೂಸೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಇದು ಸೆಪ್ಟಂಬರ್‌ನಲ್ಲಿ ಜಾರಿಗೊಳಿಸಲಾದ ಅಧ್ಯಾದೇಶವನ್ನು ಕಾನೂನು ರೂಪಕ್ಕಿಳಿಸಲಿದೆ. ಇಂತಹ ತಲಾಖ್ ನೀಡುವ ಪತಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಹಿಂದೆ ಮಂಡಿಸಲಾದ ಮಸೂದೆಯು ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದು, ರಾಜ್ಯಸಭೆಯಲ್ಲಿ ವಿಪಕ್ಷಗಳ ವಿರೋಧದಿಂದ ಅನುಮೋದನೆ ಪಡೆದಿರಲಿಲ್ಲ. ಲೋಕಸಭೆಯಲ್ಲಿ ಮಸೂದೆ ವಿರೋಧಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್, ವಿಚ್ಛೇದನವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗದು. ಸಂವಿಧಾನದ ಮೂಲ ಸಿದ್ಧಾಂತಕ್ಕೆ ಇದು ವಿರುದ್ಧವಾಗಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ತ್ರಿವಳಿ ತಲಾಖ್ ಅನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದರೂ ಈ ಪದ್ಧತಿ ನಿಂತಿಲ್ಲ. ಶಿಕ್ಷೆಗೆ ಸಂಬಂಧಿಸಿದಂತೆ ಸೂಕ್ತ ತಿದ್ದುಪಡಿ ಮಾಡಲಾಗಿದೆ ಎಂದಿದ್ದಾರೆ.