Advertisement

ಸುಗಮ ಕಲಾಪ: ವಿಪಕ್ಷ ಅಭಯ

01:35 AM Jun 17, 2019 | Team Udayavani |

ಹೊಸದಿಲ್ಲಿ: ಹದಿನೇಳನೆ ಲೋಕಸಭೆಯ ಮೊದಲ ಅಧಿವೇಶನಕ್ಕೆ ದೇಶವು ಸಾಕ್ಷಿಯಾಗುವ ಮುನ್ನಾದಿನವೇ ಕೇಂದ್ರ ಸರಕಾರಕ್ಕೆ ವಿಪಕ್ಷಗಳಿಂದ ಸುಗಮ ಕಲಾಪದ ಅಭಯ ಸಿಕ್ಕಿದೆ. ಜನತೆಯ ಹಿತಾಸಕ್ತಿಗೆ ಸಂಬಂಧಿಸಿದ ಮಸೂದೆಗಳನ್ನು ಯಾವ ಕಾರಣಕ್ಕೂ ವಿರೋಧಿಸುವುದಿಲ್ಲ ಎಂಬ ಭರವಸೆಯನ್ನು ವಿಪಕ್ಷಗಳ ನಾಯಕರು ನೀಡಿದ್ದಾರೆ.

Advertisement

ಪ್ರಧಾನಿ ಮೋದಿ ನೇತೃತ್ವದಲ್ಲಿ ರವಿವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಎಲ್ಲ ವಿಪಕ್ಷಗಳ ನಾಯಕರೂ ಭಾಗವಹಿಸಿದ್ದು, ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದವು. ಜತೆಗೆ ನಿರುದ್ಯೋಗ, ರೈತರ ಸಂಕಷ್ಟಗಳು, ಬರ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಅವಕಾಶ ನೀಡು ವಂತೆ ವಿಪಕ್ಷಗಳ ನಾಯಕರು ಆಗ್ರಹಿಸಿದರು.

ಹೊಸ ಹುರುಪು, ಹೊಸ ಆಲೋಚನೆ
ಸಭೆಯಲ್ಲಿ ಮಾತನಾಡಿದ ಮೋದಿ, ‘ಸಂಸತ್‌ನ ಕೆಳಮನೆಯ ಮೊದಲ ಅಧಿವೇಶನವು ಹೊಸ ಹುರುಪು ಮತ್ತು ಹೊಸ ಆಲೋಚನೆಗಳಿಂದಲೇ ಆರಂಭವಾಗಲಿ’ ಎಂದು ಆಶಿಸಿದರು.

ಯಾರೆಲ್ಲ ಭಾಗಿ?
ಪ್ರಧಾನಿ ನರೇಂದ್ರ ಮೋದಿಯವರಲ್ಲದೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌, ಪಶ್ಚಿಮ ಬಂಗಾಲ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಕೇರಳ ಘಟಕದ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಕೆ.ಸುರೇಶ್‌, ನ್ಯಾಶನಲ್ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ, ಟಿಎಂಸಿ ನಾಯಕ ಡೆರೆಕ್‌ ಒಬ್ರಿಯಾನ್‌ ಸಹಿತ ವಿವಿಧ ಪಕ್ಷಗಳ ನಾಯಕರು ಉಪಸ್ಥಿತರಿದ್ದರು.

ಒಕ್ಕೂಟ ವ್ಯವಸ್ಥೆ ಕುರಿತು ಪ್ರಸ್ತಾವ
ದೇಶದಲ್ಲಿ ಒಕ್ಕೂಟ ವ್ಯವಸ್ಥೆಯು ದುರ್ಬಲಗೊಳ್ಳುತ್ತಿರುವ ಬಗ್ಗೆ ವಿಪಕ್ಷಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಉದ್ದೇಶಪೂರ್ವಕವಾಗಿ ರಾಜ್ಯಗಳನ್ನು ಗುರಿಯಾಗಿಸುವುದನ್ನು ಸಹಿಸುವುದಿಲ್ಲ ಎಂದು ಹೇಳಿವೆ. ಸಭೆಯ ಬಳಿಕ ಮಾತನಾಡಿದ ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌, ‘ನಾವು ಸರಕಾರವನ್ನು ಅಭಿನಂದಿಸಿದ್ದೇವೆ. ಅದರ ಜತೆಗೆ, ಇದು ಸಿದ್ಧಾಂತಗಳ ಸಮರ ಎಂಬುದನ್ನು ನೆನಪಿಸಿದ್ದೇವೆ’ ಎಂದರು.

Advertisement

ಒಂದು ದೇಶ, ಒಂದು ಚುನಾವಣೆ: 19ರಂದು ಚರ್ಚೆ
ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ಅವಧಿಯಲ್ಲೇ ಪ್ರಸ್ತಾವಿಸುತ್ತಾ ಬಂದಿರುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯನ್ನು ಸಾಕಾರಗೊಳಿಸುವತ್ತ ಗಮನ ನೆಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜೂ. 19ರಂದು ಎಲ್ಲ ಪಕ್ಷಗಳ ಅಧ್ಯಕ್ಷರ ಸಭೆ ಕರೆಯಲಾಗಿದೆ. ಸರ್ವಪಕ್ಷಗಳ ಸಭೆಯ ಬಳಿಕ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಈ ಕುರಿತು ಮಾಹಿತಿ ನೀಡಿದ್ದಾರೆ. 19ರಂದು ನಡೆಯುವ ಪಕ್ಷಗಳ ಅಧ್ಯಕ್ಷರ ಸಭೆಯಲ್ಲಿ, ಒಂದು ದೇಶ-ಒಂದು ಚುನಾವಣೆ ಮಾತ್ರವಲ್ಲದೆ, 2022ರಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಹಾಗೂ ಮಹಾತ್ಮ ಗಾಂಧಿಯ 150ನೇ ಜನ್ಮ ದಿನಾಚರಣೆ ಸಹಿತ ವಿವಿಧ ವಿಚಾರಗಳ ಕುರಿತೂ ಚರ್ಚೆ ನಡೆಯಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next