Advertisement

Lok Sabha Result 2024: ಎರಡು ದಶಕ ಬಳಿಕ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‌ ಮ್ಯಾಜಿಕ್‌

03:25 PM Jun 05, 2024 | Team Udayavani |

■ ಉದಯವಾಣಿ ಸಮಾಚಾರ
ಹುಬ್ಬಳ್ಳಿ: 2 ಸುಮಾರು ಎರಡು ದಶಕಗಳ ನಂತರದಲ್ಲಿ ಕಾಂಗ್ರೆಸ್‌ ಕಲ್ಯಾಣ ಕರ್ನಾಟಕದಲ್ಲಿ ಏಕಪಕ್ಷೀಯ ಗೆಲುವಿನ ಸಾಧನೆ ತೋರಿದೆ. ಸಾಂಪ್ರದಾಯಿಕವಾಗಿ ಕಲ್ಯಾಣ ಕರ್ನಾಟಕ ಕಾಂಗ್ರೆಸ್‌ಗೆ ತುಸು ಹೆಚ್ಚಿನ ಬಲ ತುಂಬುವ ಪ್ರದೇಶವಾಗಿದ್ದರೂ, ಲೋಕಸಭೆ ಚುನಾವಣೆ ವಿಚಾರಕ್ಕೆ ಬಂದರೆ ಕಳೆದ 20 ವರ್ಷಗಳಲ್ಲಿ ಪಕ್ಷ ತೀವ್ರ ಹಿನ್ನಡೆ ಅನುಭವಿಸಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಈ ಭಾಗದ ಐದಕ್ಕೆ ಐದೂ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ.

Advertisement

ದೇಶದಲ್ಲಿ ಅಮೇಥಿಯನ್ನು ಹೊರತುಪಡಿಸಿದರೆ ಅತ್ಯಂತ ಸುರಕ್ಷಿತ ಸ್ಥಳವೆಂದು ಭಾವಿಸಿ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗಾಂಧಿ ಅವರನ್ನು ಈ ಭಾಗದ ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಡಲಾಗಿತ್ತು. ಕಾಂಗ್ರೆಸ್‌
ನಿರೀಕ್ಷೆಯಂತೆ ಸೋನಿಯಾಗಾಂಧಿ ಗೆಲುವು ಸಾಧಿಸಿದ್ದರು. ಆದರೆ, 2004ರ ಲೋಕಸಭೆ ಚುನಾವಣೆಯಿಂದ ಕಲ್ಯಾಣದಲ್ಲಿ ಕಾಂಗ್ರೆಸ್‌ ಪ್ರಭಾವ ಕುಂದುತ್ತಾ ಸಾಗಿತ್ತು ಎಂಬುದು ಫಲಿತಾಂಶ ಸಾಕ್ಷಿ ಹೇಳುತ್ತಿದೆ.

ರಾಷ್ಟ್ರಮಟ್ಟದಲ್ಲಿ ಯುಪಿಎ ಪರವಾದ ಗಾಳಿ ಇದ್ದ 2004ರ ಲೋಕಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಲಬುರಗಿ, ರಾಯಚೂರು, ಕೊಪ್ಪಳಗಳಲ್ಲಿ ಗೆಲುವು ಸಾಧಿಸಿತ್ತು. ಬಳ್ಳಾರಿ ಮತ್ತು ಬೀದರ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. 2009ರಲ್ಲಿ ಕಾಂಗ್ರೆಸ್‌ ಗೆದ್ದಿದ್ದು ಕೇವಲ ಎರಡು ಸ್ಥಾನಗಳಲ್ಲಿ ಮಾತ್ರ ಅದು ಕಲಬುರ್ಗಿ, ಬೀದರನಲ್ಲಿ . 2014ರ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟದ ವಿರೋಧಿ ಅಲೆ, ನರೇಂದ್ರ ಮೋದಿ ಬಿರುಗಾಳಿಯಲ್ಲಿ ಕಾಂಗ್ರೆಸ್‌ ಬೀದರ
ಕಳೆದುಕೊಂಡಿತ್ತಾದರೂ, ಕಲಬುರಗಿ ಜತೆಗೆ ರಾಯಚೂರು ಸೇರ್ಪಡೆಯಾಗಿ ಯಥಾಸ್ಥಿತಿ ಕಾಯ್ದುಕೊಂಡಿತ್ತು. 2019ರ ಲೋಕಸಭೆ
ಚುನಾವಣೆಯಲ್ಲಿ ಎಲ್ಲ ಐದು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಸೋಲು ಕಂಡಿತ್ತು.

ವಿಧಾನಸಭೆ, ಸ್ಥಳೀಯ ಸಂಸ್ಥೆಗಳಲ್ಲೆಲ್ಲ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದ ಕಲ್ಯಾಣ ಕರ್ನಾಟಕ ಲೋಕಸಭೆ ಚುನಾವಣೆ ವಿಚಾರಕ್ಕೆ ಬಂದರೆ ಕಳೆದೆರಡು ದಶಕಗಳಿಂದ ಕಾಂಗ್ರೆಸ್‌ ಬಗ್ಗೆ ಒಂದು ರೀತಿಯಲ್ಲಿ ಮುನಿಸಿಕೊಂಡಂತೆ ಭಾಸವಾಗುತ್ತಿತ್ತು. ಈ ಭಾಗದ ಘಟನಾನುಘಟಿ ನಾಯಕರೆನಿಸಿದ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್‌ ಅವರಿಗೂ ಸೋಲುಣಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‌ ಶೂನ್ಯಸಾಧನೆ ಮಾಡಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿ ರೀತಿಯಲ್ಲಿ ಕಲ್ಯಾಣದಲ್ಲಿ ಕಾಂಗ್ರೆಸ್‌ ಎದ್ದು ನಿಂತಿದೆ. ರಾಜ್ಯ ಸರಕಾರದ ಗ್ಯಾರಂಟಿಗಳೂ ಗೆಲುವಿಗೆ ಬಲ ತುಂಬಿವೆ.

ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಈ ಪೈಕಿ ಐದು ಸ್ಥಾನಗಳ ಕೊಡುಗೆ ಕಲ್ಯಾಣ ಕರ್ನಾಟಕದ್ದಾಗಿದೆ ಎಂಬುದು ಗಮನಾರ್ಹ ಸಂಗತಿ. 2019ರ ಚುನಾವಣೆಯಲ್ಲಿ ತಮ್ಮ ರಾಜಕೀಯ ಜೀವನದಲ್ಲೇ ಮೊದಲ ಚುನಾವಣಾ ಸೋಲು ಕಂಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಲ್ಯಾಣ ಕರ್ನಾಟಕದ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿರುವುದು, ಎಐಸಿಸಿ ಪಟ್ಟ ಸಿಕ್ಕ ಸಂದರ್ಭ ಆಗಿರುವ ಖುಷಿಗಿಂತಲೂ ಹೆಚ್ಚಿನ ಸಂತಸ ತಂದಿರಬೇಕು ಎಂದೆನಿಸುತ್ತದೆ.

Advertisement

ಕಲ್ಯಾಣ ಕರ್ನಾಟಕದಲ್ಲಿ ಕನಿಷ್ಠ 2-3 ಸ್ಥಾನಗಳಲ್ಲಾದರೂ ಗೆಲ್ಲುವ ನಿರೀಕ್ಷೆ ಹೊಂದಿದ್ದ ಬಿಜೆಪಿಗೆ ಆಘಾತವಾಗಿದೆ. ಬೀದರ್‌ನಲ್ಲಿ ಸತತ ಗೆಲುವು ಕಂಡಿದ್ದ ಕೇಂದ್ರ ಸಚಿವ ಭಗವಂತ ಖೂಬಾ, ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ಕಲಬುರಗಿ ಸಂಸದ ಡಾ|ಉಮೇಶ ಜಾಧವ, ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಸೋಲು ಕಂಡಿದ್ದಾರೆ.

ಇನ್ನು ಬಳ್ಳಾರಿಯಲ್ಲಿ ಹೆಚ್ಚಿನ ನಿರೀಕ್ಷೆ ಹೊಂದಿದ್ದ, ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡು ರಾಜಕೀಯ ಪುನರ್ಜನ್ಮಕ್ಕೆ ಯತ್ನಿಸಿದ್ದ ಮಾಜಿ ಸಚಿವ ಶ್ರೀರಾಮುಲುಗೆ ಮತ್ತೂಮ್ಮೆ ಸೋಲಿನ ಆಘಾತ ಉಂಟಾಗಿದೆ. ಸಂಡೂರು ಶಾಸಕ ತುಕಾರಾಂ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶ್ರೀರಾಮುಲು ಅವರನ್ನು ಸೋಲಿಸಿದ್ದಾರೆ.ರಾಯಚೂರು ಕ್ಷೇತ್ರದಲ್ಲಿ ದಿಢೀರನೆ ಕಾಂಗ್ರೆಸ್‌
ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಕುಮಾರನಾಯಕ ಮೊದಲ ಯತ್ನದಲ್ಲೇ ಯಶಸ್ವಿಯಾಗುವ ಮೂಲಕ ಹಾಲಿ ಸಂಸದ ಅಮರೇಶ್ವರ ನಾಯಕ ಅವರಿಗೆ ಸೋಲುಣಿಸಿದ್ದಾರೆ.

ಸೋಲಿನ ಸೇಡು ತೀರಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ
ಕಲಬುಗಿಯಲ್ಲಿ ಅಳಿಯ ಡಾ|ರಾಧಾಕೃಷ್ಣ ದೊಡ್ಡಮನಿ ಗೆಲುವಿನೊಂದಿಗೆ ತಮಗಾದ ಸೋಲಿನ ಸೇಡು ತೀರಿಕೊಳ್ಳುವಲ್ಲಿ ಖರ್ಗೆ ಯಶಸ್ವಿಯಾಗಿದ್ದಾರೆ. ಬೀದರ ಕ್ಷೇತ್ರದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಯುವ ಮುಖಂಡ ಸಾಗರ ಖಂಡ್ರೆ ಸೋಲಿನ ಆಘಾತ ನೀಡಿದ್ದು, ಚುನಾವಣೆಯ ಮೊದಲ ಇನ್ನಿಂಗ್ಸ್‌ನಲ್ಲಿಯೇ ಸಂಸತ್ತು ಪ್ರವೇಶ ಸಾಧನೆ ತೋರಿದ್ದಾರೆ. ಕೊಪ್ಪಳದಲ್ಲಿ ಬಿಜೆಪಿಯ ಡಾ|ಬಸವರಾಜ ಕ್ಯಾವಟರ್‌ ಹಾಗೂ ಜಿ.ಪಂ.ಮಾಜಿ ಅಧ್ಯಕ್ಷ ಕಾಂಗ್ರೆಸ್‌ನ ರಾಜಶೇಖರ ಹಿಟ್ನಾಳ ನಡುವಿನ ಪೈಪೋಟಿಯಲ್ಲಿ ಹಿಟ್ನಾಳ ಗೆಲ್ಲುವ ಮೂಲಕ ಬಿಜೆಪಿಯಿಂದ ಕ್ಷೇತ್ರ ಕಿತ್ತುಕೊಂಡಿದ್ದಾರೆ. ಜರ್ನಾಧನ ರೆಡ್ಡಿ ಬಿಜೆಪಿ ಸೇರ್ಪಡೆ, ಗಂಗಾವತಿಯಲ್ಲಿ ಕಾಂಗ್ರೆಸ್‌ ಗುಂಪುಗಾರಿಕೆ ಏನೆಲ್ಲ ಪರಿಣಾಮ ಬೀರಬಹುದು ಎಂಬುದು ಹುಸಿಯಾಗಿದೆ. ಹಾಲಿ ಸಂಸದ ಸಂಗಣ್ಣ ಕರಡಿ ಕೊನೆಗಳಿಗೆಯಲ್ಲಿ ಕಾಂಗ್ರೆಸ್‌ ಸೇರಿದ್ದು ಪಕ್ಷಕ್ಕೆ ಪ್ಲಸ್‌ ಆಗಿದೆ ಎನ್ನಬಹುದಾಗಿದೆ. ಒಟ್ಟಿನಲ್ಲಿ ಎರಡು ದಶಕಗಳ ನಂತರದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತೆ ತನ್ನ ಪ್ರಾಬಲ್ಯ ಮೆರೆದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಸೇಡನ್ನು ತೀರಿಕೊಂಡಿದ್ದು, 2024ರಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next