ಮೈಸೂರು: ಸಂಸದರ ಟಿಕೆಟ್ ನಿರ್ಧಾರ ಮಾಡುವುದು ಜನ. ಜನ ಖುಷಿಯಾಗಿದ್ದರೆ ಮೇಲಿನವರೂ ಅದೇ ನಿರ್ಧಾರ ಮಾಡುತ್ತಾರೆ. ನನ್ನ ಕೆಲಸವೇ ನನಗೆ ಶ್ರೀರಕ್ಷೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಲೋಕಸಭಾ ಟಿಕೆಟ್ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ 28 ಮಂದಿ ಸಂಸದರಿದ್ದಾರೆ. ಅವರ ಸಾಧನೆ ನೋಡಿ ಟಿಕೆಟ್ ನೀಡುತ್ತಾರೆ. ಕ್ಷೇತ್ರದ ಜನ ಸಂತಸದಿಂದಿದ್ದಾರೆ. ಅಂದರೆ, ಪಕ್ಷದ ಹೈಕಮಾಂಡ್ ಅದೇ ನಿರ್ಧಾರ ಮಾಡಲಿದೆ. ಮೈಸೂರಿನಲ್ಲಿ ನಾನು ಇಂತಾ ಕೆಲಸ ಮಾಡಿಲ್ಲ ಎಂದು ಯಾರಾದರೂ ಹೇಳಲಿ. ಯಾರೋ ಒಂದಷ್ಟು ಜನ ಅಸೂಯೆಗೆ ಮಾತನಾಡುತ್ತಾರೆ. ಹಾಗಾಗಿ, ನನ್ನನ್ನು ಕಾಯಲು ಬೆಟ್ಟದ ಮೇಲೆ ಒಬ್ಬಳು ತಾಯಿ ಇದ್ದಾಳೆ ಎಂದರು.
ಮೈಸೂರಿನಲ್ಲಿ ಯಾವ ಜನಪ್ರತಿನಿಧಿಗಳು ಮಾಡಿರದಷ್ಟು ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿದ್ದೇನೆ. ಗ್ರೇಟರ್ ಮೈಸೂರು ಮಾಡಲು ಮುಂದಾಗಿದ್ದು ಈವರೆಗೆ ಹಲವು ಅಭಿವೃದ್ಧಿ ಯೋಜನೆಗಳನ್ನು ತಂದಿದ್ದೇನೆ. ಹಿಂದುತ್ವದ ಪರ ಕೆಲಸ ಮಾಡಿದ್ದೇನೆ. ಕರ್ನಾಟಕ ಆಳಿದವರಿಂದಲೂ ಹೊರ ವರ್ತುಲ ರಸ್ತೆ ತರಲು ಆಗಿಲ್ಲ. ನಾನು ರಾಜ್ಯದಲ್ಲಿ ಮೊದಲಾಗಿ ಮೈಸೂರಿಗೆ ಮೊದಲ ಪೆರಿಫೆರಲ್ ರಿಂಗ್ ರೋಡ್ ತರಲು ಮುಂದಾಗಿದ್ದೇನೆ ಎಂದರು.
ನನ್ನ ಕೆಲಸವೇ ನನಗೆ ಶ್ರೀರಕ್ಷೆಯಾಗಿದ್ದು, ಮೈಸೂರು-ಕೊಡಗು ಜನರು ನನ್ನ ಕೈ ಹಿಡಿಯುತ್ತಾರೆ. ತಾಯಿ ಚಾಮುಂಡಿ ನನ್ನ ಕೈ ಬಿಡುವುದಿಲ್ಲ. ಈ ಬಾರಿಯೂ ನಾನು 2ರಿಂದ 3 ಲಕ್ಷ ಮತಗಳಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಮಗೆ ಟಿಕೆಟ್ ನೀಡುವ ಬಗ್ಗೆ ಸ್ವಪಕ್ಷದವರಿಂದಲೇ ವಿರೋಧವಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷದಲ್ಲಿ ಎಲ್ಲರಿಗೂ ಟಿಕೆಟ್ ಕೇಳುವ ಹಕ್ಕಿದೆ. 10 ವರ್ಷ ನಿಯತ್ತಾಗಿ ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿ ದ್ವೇಷ ಅಸೂಯೆ ಇದ್ದೆ ಇರುತ್ತೆ. ಮೈಸೂರು-ಕೊಡಗು ಜನರ ಪ್ರೀತಿಯ ನಡುವೆ ಅಸೂಯೆ ಯಾವುದು ನಿಲ್ಲುವುದಿಲ್ಲ. ಪಕ್ಷದ ಯಾರು ಅಭ್ಯರ್ಥಿ ಆಗಬೇಕೆಂದು ಹೇಳಿದ್ದಾರೆ. ಅದರ ಶೀಟ್ ನೋಡಿದರೆ ಗೊತ್ತಾಗುತ್ತೆ ಎಂದರು.
ಬಿಜೆಪಿ ನನ್ನ ಕೈ ಬಿಡಲ್ಲ
ಜನರಿಗೆ ರೂಲರ್ ಬೇಡಾ, ಬೇಕಿರುವುದು ಕೆಲಸಗಾರ. ಪತ್ರಕರ್ತನಾಗಿದ್ದವನನ್ನು ಎರಡು ಬಾರಿ ಸಂಸದನನ್ನಾಗಿ ಮಾಡಿದ್ದು ಬಿಜೆಪಿ. ಕಾಂಗ್ರೆಸ್ ಅವರಿಗೆ ಅಭ್ಯರ್ಥಿ ಹುಡುಕಲಾಗುತ್ತಿಲ್ಲ. ಇದರಿಂದ ಪ್ರತಾಪ್ ಸಿಂಹ ಶಕ್ತಿ ಏನು ಎಂದು ಕಾಂಗ್ರೆಸ್ ಅವರಿಗೆ ಗೊತ್ತಿದೆ. ನಾನು ಮೈಸೂರು-ಕೊಡಗು ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಿ, ಗೆದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೀಟು ಅಲುಗಾಡುತ್ತೆ. ನನ್ನನ್ನು ಸೋಲಿಸಲು ಆಗಲ್ಲ ಎಂದು ಕಾಂಗ್ರೆಸ್‌ಗೂ ಗೊತ್ತಿದೆ. ಹೀಗಿರುವಾಗ ಕಾಂಗ್ರೆಸ್‌ಗೆ ನಮ್ಮ ಪಕ್ಷ ಹೇಗೆ ಸಪೋರ್ಟ್ ಮಾಡುತ್ತೆ ಎಂದರು.