Advertisement

Lok Sabha Polls: ಪ್ರಚಾರಕ್ಕೆ ಸರಕಾರಿ ವಾಹನಗಳ ಬಳಕೆ ಸಂಪೂರ್ಣ ನಿಷೇಧ

11:32 PM Mar 19, 2024 | Team Udayavani |

ಬೆಂಗಳೂರು: ಚುನಾವಣ ಪ್ರಚಾರ, ಚುನಾವಣ ಕೆಲಸ ಮತ್ತು ಚುನಾವಣ ಪ್ರಚಾರ ಸಂಬಂಧಿತ ಎಲ್ಲ ಚಟುವಟಿಕೆಗಳಲ್ಲಿ ಸರಕಾರಿ ವಾಹನಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

Advertisement

ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುತ್ತಿರುವಂತೆಯೇ ಚುನಾವಣ ಆಯೋಗದ ಸೂಚನೆಯಂತೆ ಆದೇಶ ಹೊರಡಿಸಿರುವ ಇಲಾಖೆಯ ಕಾರ್ಯದರ್ಶಿ ರಣದೀಪ್‌ ಡಿ. ಅವರು ಸರಕಾರಿ, ಸಾರ್ವಜನಿಕ ಸ್ವಾಮ್ಯದ, ಸಾರ್ವಜನಿಕ ಅಧೀನದ, ಸ್ಥಳೀಯ ಸಂಸ್ಥೆಗಳ, ಸಹಕಾರಿ ಸಂಘ ಸೇರಿ ಸಾರ್ವಜನಿಕ ನಿಧಿ ಬಳಸುವ ಸಂಸ್ಥೆಗಳ ಕಾರು, ಜೀಪುಗಳು, ಹೆಲಿಕಾಪ್ಟರ್‌, ವಿಮಾನ, ಸರಕು ಸಾಗಣೆ ವಾಹನಗಳು, ಇ-ವಾಹನ, ಇ-ರಿಕ್ಷಾ, ದ್ವಿಚಕ್ರ ವಾಹನ, ಬೋಟ್‌ ಇತ್ಯಾದಿಗಳನ್ನು ಬಳಸುವಂತಿಲ್ಲ.

ಆದರೆ ಸ್ವಾಯತ್ತ ಸಂಸ್ಥೆಗಳ ಮುಖ್ಯಸ್ಥರು, ಉಪಮುಖ್ಯಸ್ಥರು, ಅಧ್ಯಕ್ಷರು, ಉಪಾಧ್ಯಕ್ಷರು, ಆಯುಕ್ತರು ಮಂತಾದವರು ರಾಜ್ಯ ಸರಕಾರ ನೀಡಿರುವ ವಾಹನವನ್ನು ತಮ್ಮ ಮನೆಯಿಂದ ಕಚೇರಿಗೆ ಬಂದು ಹೋಗಲು ಮಾತ್ರ ಬಳಸಬಹುದು ಎಂಬ ವಿನಾಯಿತಿ ನೀಡಲಾಗಿದೆ.

ಸರಕಾರಿ ವಾಹನಗಳನ್ನು ಚುನಾವಣ ಪ್ರಕ್ರಿಯೆಯಲ್ಲಿ ಬಳಸಬಾರದೆಂಬ ನಿಯಮ ಲೋಕಸಭಾ ಚುನಾವಣೆಯ ಸಂದರ್ಭ ಲೋಕಸಭಾ ಸ್ಪೀಕರ್‌, ಉಪಸ್ಪೀಕರ್‌ ಮತ್ತು ರಾಜ್ಯಸಭೆಯ ಉಪಸ್ಪೀಕರ್‌ಗೂ ಅನ್ವಯವಾಗಲಿದೆ ಎಂದು ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

ಜಿಲ್ಲಾಡಳಿತ ಸರಕಾರಿ ವಾಹನಗಳನ್ನು ಚುನಾವಣ ಉದ್ದೇಶಕ್ಕೆ ಬಳಸಲಾಗುತ್ತಿ ದೆಯೇ ಎಂದು ಕಣ್ಣಿಡಬೇಕು. ಒಂದು ವೇಳೆ ಚುನಾವಣ ಉದ್ದೇಶಕ್ಕೆ ದುರುಪ ಯೋಗಪಡಿಸಿಕೊಂಡರೆ ಅಂತಹ ವಾಹನಗಳನ್ನು ತತ್‌ಕ್ಷಣವೇ ವಶಕ್ಕೆ ಪಡೆದುಕೊಳ್ಳ ಬೇಕು. ಚುನಾವಣ ಪ್ರಕ್ರಿಯೆ ಪೂರ್ಣ ಗೊಳ್ಳುವ ತನಕ ಆ ವಾಹನವನ್ನು ವಶದಲ್ಲಿಟ್ಟುಕೊಳ್ಳಬೇಕು ಎಂದು ಮಾರ್ಗಸೂಚಿ ಯಲ್ಲಿ ನಿಯಮಗಳನ್ನು ಉಲ್ಲೇಖಿಸಲಾಗಿದೆ.
ಪ್ರಧಾನಮಂತ್ರಿ, ಭಯೋತ್ಪಾದಕ ಹಾಗೂ ಉಗ್ರಗಾಮಿಗಳಿಂದ ಜೀವ ಬೆದರಿಕೆ ಎದುರಿಸುತ್ತಿರುವ ರಾಜಕೀಯ ವ್ಯಕ್ತಿಗಳಿಗೆ ಮಾತ್ರ ಈ ವಾಹನ ನಿಷೇಧದಿಂದ ವಿನಾಯಿತಿ ನೀಡಲಾಗಿದೆ.

Advertisement

ಹಾಗೆಯೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಮತ್ತು ಅವರ ಪಕ್ಷದ ನಾಯಕರು ಬಳಸುವ ವಾಹನಗಳ ಮೇಲೆ ನಿಗಾ ಇಡಬೇಕು. ಇಂತಹ ವಾಹನಗಳನ್ನು ಮತದಾರರಿಗೆ ಬೆದರಿಕೆ ಒಡ್ಡಲು, ಆಮಿಷವೊಡ್ಡಲು, ಕಾನೂನು ಬಾಹಿರವಾಗಿ ಆಯುಧ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆಯೇ ಎಂಬುದರ ಮೇಲೆ ಕಣ್ಣಿಡಬೇಕು ಎಂದು ಸೂಚಿಸಲಾಗಿದೆ.

ಮಾಹಿತಿ ನೀಡಬೇಕು
ಭದ್ರತಾ ವಾಹನಗಳನ್ನು ಹೊರತುಪಡಿಸಿದ ಹತ್ತು ವಾಹನಗಳಿಗಿಂತ ಹೆಚ್ಚು ವಾಹನಗಳನ್ನು ಬೆಂಗಾವಲಾಗಿ ಬಳಸುವಂತಿಲ್ಲ. ವೀಡಿಯೋ ವಾಹನಗಳ ಬಳಕೆಗೆ ಚುನಾವಣ ಆಯೋಗದ ಅನುಮತಿ ಕಡ್ಡಾಯ. ಚುನಾವಣ ಪ್ರಚಾರ ಆರಂಭಕ್ಕೆ ಮುಂಚಿತವಾಗಿ ಪ್ರಚಾರಕ್ಕೆ ಬಳಸುವ ವಾಹನಗಳ ಮಾಹಿತಿಯನ್ನು ಜಿಲ್ಲಾ ಚುನಾವಣ ಅಧಿಕಾರಿಗೆ ನೀಡಬೇಕು. ಚುನಾವಣ ಪ್ರಚಾರಕ್ಕೆ ನೋಂದಾಯಿಸದ ವಾಹನ ಪ್ರಚಾರದಲ್ಲಿ ಪಾಲ್ಗೊಂಡರೆ ಅದನ್ನು ಅನಧಿಕೃತ ಪ್ರಚಾರ ಎಂದು ಪರಿಗಣಿಸಬೇಕು. ಸೈಕಲ್‌ ರಿಕ್ಷಾವನ್ನು ಸಹ ವಾಹನವೆಂದೇ ಪರಿಗಣಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಪ್ರಧಾನ ಮಂತ್ರಿಗಳಿಗೆ ಮಾತ್ರ ಸರಕಾರಿ ಏರ್‌ಕ್ರಾಫ್ಟ್ ಬಳಕೆಗೆ ಅವಕಾಶವಿದೆ. ಮುಖ್ಯಮಂತ್ರಿ ಸೇರಿ ಇತರರು ಸರಕಾರಿ ವಿಮಾನ ಬಳಸಬಹುದು. ಖಾಸಗಿ ವಿಮಾನ, ಹೆಲಿಕಾಫ್ಟರ್‌ ಬಳಕೆಯ ಬಗ್ಗೆ ಮೂರು ದಿನಗಳ ಮೊದಲೇ ಸಂಪೂರ್ಣ ಮಾಹಿತಿ ನೀಡಬೇಕು. ಚುಣಾವಣೆಯ ದಿನದಂದು ಸರ್ವೇಕ್ಷಣೆಗೆ ವಿಮಾನ ಬಳಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next