ಜೈಸಲ್ಮೇರ್: ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ಮುಂಬರುವ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಈಗಾಗಲೇ ಭರ್ಜರಿ ಬೆಟ್ಟಿಂಗ್ ಶುರುವಾಗಿದ್ದು, ರಾಜಸ್ತಾನದ ಜೋಧ್ ಪುರ್ ಸಮೀಪದ ಫಾಲೋಡಿಯ ಸಟ್ಟಾ ಮಾರ್ಕೆಟ್ ನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೇರಲಿದೆ ಎಂಬುದಾಗಿ ದೊಡ್ಡ ಕುಳಗಳು ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಬೆಟ್ಟಿಂಗ್ ಮಾರ್ಕೆಟ್ ಪ್ರಕಾರ, ಭಾರತೀಯ ಜನತಾ ಪಕ್ಷ ಒಟ್ಟು 250 ಸ್ಥಾನಗಳನ್ನು ಪಡೆಯಲಿದ್ದು, ಎನ್ ಡಿಎ ಮೈತ್ರಿಕೂಟ 300-301 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಅಷ್ಟೇ ಅಲ್ಲ ಸಟ್ಟಾ ಮಾರ್ಕೆಟ್ ಬೆಟ್ಟಿಂಗ್ ಭವಿಷ್ಯದ ಪ್ರಕಾರ ರಾಜಸ್ಥಾನದಲ್ಲಿ ಭಾರತೀಯ ಜನತಾ ಪಕ್ಷ 18ರಿಂದ 20 ಸ್ಥಾನಗಳಲ್ಲಿ ಜಯಗಳಿಸಿಲಿದೆಯಂತೆ. ರಾಜಸ್ಥಾನದಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರಗಳಿವೆ.
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿ ನಡೆದ ಬಳಿಕ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ಗೆ ನುಗ್ಗಿ ಏರ್ ಸ್ಟ್ರೈಕ್ ಮಾಡಿದ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತಷ್ಟು ಪ್ರಭಾವಿ ನಾಯಕರಾಗಿದ್ದಾರೆ. ಅಲ್ಲದೇ ಬಿಜೆಪಿ ಪರ ಮತದಾರರ ಒಲವು ಹೆಚ್ಚಿದೆ ಎಂಬುದು ಸಟ್ಟಾ ಮಾರ್ಕೆಟ್ ಅಭಿಪ್ರಾಯವ್ಯಕ್ತಪಡಿಸಿದೆ.
ಏರ್ ಸ್ಟ್ರೈಕ್ ಗೂ ಮುನ್ನ ಎನ್ ಡಿಎ ಮೈತ್ರಿಕೂಟ 280 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಫಾಲೋಡಿ ಬುಕ್ಕಿಗಳು ಭವಿಷ್ಯ ನುಡಿದಿದ್ದರು. ಭಾರತೀಯ ಜನತಾ ಪಕ್ಷ 200 ಸೀಟುಗಳಲ್ಲಿ ಜಯಗಳಿಸಲಿದೆ ಎಂದು ತಿಳಿಸಿತ್ತು. ಆದರೆ ಏರ್ ಸ್ಟ್ರೈಕ್ ಬಳಿಕ ಮತದಾರರ ಒಲವು ಬದಲಾಗಿದೆ ಎಂದು ವರದಿ ತಿಳಿಸಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 72ರಿಂದ 74 ಸ್ಥಾನ ಗೆಲ್ಲಬಹುದು ಎಂದು ಸಟ್ಟಾ ಮಾರ್ಕೆಟ್ ಭವಿಷ್ಯ ನುಡಿದಿದ್ದು, ಏರ್ ಸ್ಟ್ರೈಕ್ ನಡೆಯುವ ಮುನ್ನ ಕಾಂಗ್ರೆಸ್ 100 ಸ್ಥಾನ ಜಯ ಸಾಧಿಸಲಿದೆ ಎಂದು ತಿಳಿಸಿತ್ತು.