ಚಿತ್ರದುರ್ಗ: ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 23 ರಂದು ಬೆಳಿಗ್ಗೆ 8 ಗಂಟೆಯಿಂದ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದಲ್ಲಿ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕಸಭೆ ಚುನಾವಣೆಯ ಮತ ಎಣಿಕೆ ಮಾರ್ಗಸೂಚಿಗಳ ಕುರಿತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಸೋಮವಾರ ಏರ್ಪಡಿಸಲಾಗಿದ್ದ ಮಾಹಿತಿ ನೀಡಿಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಅನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ನಡೆಸಲು ಚುನಾವಣಾ ಆಯೋಗ ಸೂಚಿಸಿರುವ ನಿಯಮಗಳನ್ನು ಅಭ್ಯರ್ಥಿಗಳು ಹಾಗೂ ಏಜೆಂಟರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.
ಮತ ಎಣಿಕೆಯ ದಿನದಂದು ಅಭ್ಯರ್ಥಿಗಳು ಅಥವಾ ಅಭ್ಯರ್ಥಿಗಳ ಚುನಾವಣಾ ಏಜೆಂಟರು ಅನುಸರಿಸಬೇಕಾದ ನಿಯಮಗಳ ಬಗ್ಗೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಅದರ ಅನ್ವಯ ಅಭ್ಯರ್ಥಿಗಳು ಅಥವಾ ಏಜೆಂಟರು ಮೊಬೈಲ್, ಪೇಜರ್, ಎಲೆಕ್ಟ್ರಾನಿಕ್ ಗ್ಲಾಡ್‌ಗೇಟ್ಸ್‌ಗಳು, ಕ್ಯಾಲ್ಕುಲೇಟರ್, ಬೀಡಿ, ಸಿಗರೇಟ್, ಬೆಂಕಿಪೊಟ್ಟಣ, ಲೈಟರ್, ನೀರಿನ ಬಾಟಲಿ, ಛತ್ರಿ, ಯಾವುದೇ ಹರಿತವಾದ ಆಯುಧಗಳು, ಸ್ಫೋಟಕ ವಸ್ತುಗಳು, ಸಿಡಿಮದ್ದು, ಬೆಂಕಿ ಹತ್ತುವ ಪದಾರ್ಥಗಳು ಮತ್ತು ಇಂಕ್ ಪೆನ್ ಇವುಗಳನ್ನು ಮತ ಎಣಿಕೆ ಕೇಂದ್ರದೊಳಗೆ ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಹೇಳಿದರು.
ಮತ ಎಣಿಕೆ ಕೇಂದ್ರಗಳಿಗೆ ಅಭ್ಯರ್ಥಿಗಳ ಪರವಾಗಿ ಏಜೆಂಟರು ತಮಗೆ ನಿಗದಿಪಡಿಸಿದ ವಿಧಾನಸಭಾ ಸೆಗ್ಮೆಂಟ್ ಕೊಠಡಿ ಬಿಟ್ಟು ಬೇರೆ ಕೊಠಡಿಗಳಿಗೆ ಓಡಾಡುವುದು, ಏರಿದ ಧ್ವನಿಯಲ್ಲಿ ಮಾತನಾಡುವುದು, ಅನಗತ್ಯವಾಗಿ ಏಜೆಂಟರ ನಡುವೆ ಮಾತನಾಡಿ ಚರ್ಚಿಸುವಂತಿಲ್ಲ. ಮತ ಎಣಿಕೆ ನಂತರ ಪ್ರತಿ ವಿಧಾನಸಭಾ ಸೆಗ್ಮೆಂಟ್‌ನ 5 ಮತಗಟ್ಟೆಗಳ ವಿವಿ ಪ್ಯಾಟ್‌ಗಳನ್ನು ರ್‍ಯಾಂಡಮ್ ಆಗಿ ಆಯ್ಕೆ ಮಾಡಿ ಮತ ಎಣಿಕೆ ಮಾಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಕೆ. ಅರುಣ್ ಮಾತನಾಡಿ, ಮತ ಎಣಿಕೆ ಕೇಂದ್ರದ ಬಳಿ ಶಾಂತಿ ಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಗೆದ್ದ ಅಭ್ಯರ್ಥಿ ಮೆರವಣಿಗೆ, ವಿಜಯೋತ್ಸವ, ರ್ಯಾಲಿ ಮಾಡುವುದು ಹಾಗೂ ಪಟಾಕಿ ಹೊಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಮತ ಎಣಿಕೆ ಕೇಂದ್ರದ ಕಾಲೇಜು ಮೈದಾನದಲ್ಲಿ ಪ್ರತಿ ಸುತ್ತಿನ ಮತ ಎಣಿಕೆಯ ವಿವರವನ್ನು ಧ್ವನಿವರ್ಧಕದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ಸಹಾಯಕ ಚುನಾವಣಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಗಳು, ಅಭ್ಯರ್ಥಿಗಳು ಭಾಗವಹಿಸಿದ್ದರು.