ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಏಪ್ರಿಲ್ 19ರವರೆಗೆ ಕಾದು ನೋಡಲು ಬಿಜೆಪಿ ನಿರ್ಧರಿಸಿದೆ.
ಶಿವಮೊಗ್ಗದಲ್ಲಿ ಈಶ್ವರಪ್ಪ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಎಷ್ಟೇ ಸಿಟ್ಟಿದ್ದರೂ ಈಶ್ವರಪ್ಪ ಪಕ್ಷದ ವಿರುದ್ಧ ಬಂಡಾಯ ಸ್ಪರ್ಧೆ ಮಾಡಲಾರರು ಎಂಬ ಪಕ್ಷದ ನಂಬಿಕೆ ಸದ್ಯಕ್ಕೆ ಹುಸಿಯಾಗಿದೆ. ಆದರೆ ನಾಮಪತ್ರ ಸಲ್ಲಿಸಿದರೂ ಅವರು ಅಂತಿಮವಾಗಿ ಕಣದಿಂದ ಹಿಂದಕ್ಕೆ ಸರಿಯುತ್ತಾರೆಂಬುದು ಸಂಘ ಪರಿವಾರದ ಹಿರಿಯರ ಬಲವಾದ ನಂಬಿಕೆಯಾಗಿದೆ.
ಹೀಗಾಗಿ ಏ.19ರವರೆಗೆ ಕಾದು ನೋಡಿ ಆ ಬಳಿಕ ಕ್ರಮ ತೆಗೆದುಕೊಳ್ಳಲು ಬಿಜೆಪಿ ನಿರ್ಧರಿಸಿದೆ.ಬಂಡಾಯ ಶಮನದ ಬಗ್ಗೆ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲಾ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು ಕೊನೆಯ ಕ್ಷಣದವರೆಗೂ ಕಾದು ನೋಡುವಂತೆ ಸೂಚನೆ ನೀಡಿದ್ದಾರೆ.
ಈ ಮಧ್ಯೆ ಸಂಘದ ಹಿರಿಯರು ತೆರೆಮರೆಯಲ್ಲಿ ಸಂಧಾನ ಕಾರ್ಯ ಪ್ರಾರಂಭಿಸಿದ್ದಾರೆ. ಒಂದು ವೇಳೆ ಸಂಧಾನ ಯಶಸ್ವಿಯಾಗದಿದ್ದರೆ ಪಕ್ಷದಿಂದ ಉಚ್ಚಾಟನೆಗೊಳ್ಳುವ ಸಾಧ್ಯತೆಗಳಿವೆ.