ಹೊಸದಿಲ್ಲಿ: 2024 ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪೂರ್ಣ ಬಹುಮತ ಪಡೆದು ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಹವಣಿಕೆಯಲ್ಲಿರುವ ಬಿಜೆಪಿಗೆ ಉತ್ತರ ಭಾರತದ ಮೂರು ರಾಜ್ಯಗಳ ಚುನಾವಣ ಫಲಿತಾಂಶ ಉತ್ಸಾಹ ಇಮ್ಮಡಿಗೊಳಿಸಿದೆ.
ಎಲ್ಲ ಸವಾಲುಗಳನ್ನು, ಸಮೀಕ್ಷೆಗಳನ್ನೂ ಮೀರಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ದಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ಉತ್ತರ ಭಾರತದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಲೆಕ್ಕಾಚಾರ ಹಾಕಿಯೇ ಜಿದ್ದಿಗೆ ಬಿದ್ದು ರಣತಂತ್ರ ರೂಪಿಸಿತ್ತು. ಕೇಂದ್ರ ಸಚಿವರು, ಸಂಸದರನ್ನು ಕಣಕ್ಕಿಳಿಸಿತ್ತು.
ಕೇಸರಿ ಪಾಳಯದ ನಿರೀಕ್ಷೆ ಮೀರಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ದಲ್ಲಿ ಮತದಾರ ಪ್ರಭುಗಳು ಬಿಜೆಪಿಯ ಕೈಹಿಡಿದಿದ್ದಾರೆ. ಮೂರು ರಾಜ್ಯಗಳಲ್ಲಿ ಒಟ್ಟು ಇರುವ ಲೋಕಸಭಾ ಕ್ಷೇತ್ರಗಳು ಒಟ್ಟು 65, ಮಧ್ಯಪ್ರದೇಶ(29), ರಾಜಸ್ಥಾನ( 25) ಮತ್ತು ಛತ್ತೀಸ್ ಗಢ ದಲ್ಲಿ(11) ಸ್ಥಾನಗಳಿವೆ. ಈ ಎಲ್ಲಾ ಸ್ಥಾನಗಳನ್ನು ಕ್ಲೀನ್ ಸ್ವೀಪ್ ಮಾಡುವ ಗುರಿಯನ್ನು ಬಿಜೆಪಿ ಇಟ್ಟುಕೊಂಡಿದೆ. 2019 ರಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ 28 ಸ್ಥಾನಗಳನ್ನು , ರಾಜಸ್ಥಾನದಲ್ಲಿ 24 ಮತ್ತು ಛತ್ತೀಸ್ ಗಢ ದಲ್ಲಿ 9 ಗೆದ್ದಿತ್ತು. ಈ ಫಲಿತಾಂಶ ಈ ಸ್ಥಾನಗಳನ್ನು ಉಳಿಸಿಕೊಳ್ಳುವ ವಿಶ್ವಾಸ ತುಂಬಿದೆ.
ಬಿಜೆಪಿ ಗೆದ್ದಿರುವ ಮೂರು ರಾಜ್ಯಗಳಲ್ಲಿ ನೇರ ಹಣಾಹಣಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ಇತ್ತು. ಇಂಡಿಯಾ ಮೈತ್ರಿ ಕೂಟದ ಇತರ ಪಾಲುದಾರ ಪಕ್ಷಗಳು ಇಲ್ಲಿ ಅಷ್ಟೊಂದು ಪ್ರಾಬಲ್ಯ ಹೊಂದಿರಲಿಲ್ಲ. ಕಾಂಗ್ರೆಸ್ ಗೆ ಇದೊಂದು ದೊಡ್ಡ ಹೊಡೆತವಾಗಿದ್ದು, ಮೂರು ತಿಂಗಳ ಹಿಂದೆ ಗೆಲ್ಲುವ ಪೂರ್ಣ ವಿಶ್ವಾಸ ಹೊಂದಿದ್ದ ಮಧ್ಯಪ್ರದೇಶವೂ ತಪ್ಪಿ ಹೋಗಿದೆ. ಸಮೀಕ್ಷೆಗಳು ಗೆಲುವು ಸಿಗಲಿದೆ ಎಂದಿದ್ದ ಛತ್ತೀಸ್ ಗಢವೂ ಕೈತಪ್ಪಿ ಹೋಗಿದೆ. ರಾಜಸ್ಥಾನದಲ್ಲಿ ಆಂತರಿಕ ಸಂಘರ್ಷ ಪೂರ್ಣ ಪ್ರಮಾಣದಲ್ಲಿ ಮುಳುವಾಗಿದೆ.
ಸವಾಲು
ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಸಮರ್ಥ ನಾಯಕತ್ವವನ್ನು ಆಯ್ಕೆ ಮಾಡಿ ಯಾವುದೇ ಭಿನ್ನಾಭಿಪ್ರಾಯಗಳು ಪಕ್ಷದಲ್ಲಿ ಉಲ್ಬಣವಾಗದಂತೆ ನೋಡಿಕೊಳ್ಳುವುದು ಪ್ರಮುಖ ಆದ್ಯತೆಯಾಗಿದ್ದು , ಪಾಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ಈಡೇರಿಸುವುದು ಸವಾಲಾಗಿದೆ.