ಚೆನ್ನೈ: ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಗೆ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕಾಂಗ್ರೆಸ್ ಮತ್ತುಖ್ಯಾತ ನಟ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯಂ ಜತೆ ಮಾರ್ಚ್ 9 ರಂದು ಸೀಟು ಹಂಚಿಕೆ ಒಪ್ಪಂದ ನಡೆದಿದೆ.
ಚೆನ್ನೈನಲ್ಲಿ ಮೈತ್ರಿ ಘೋಷಣೆ ಮಾಡಿದ ಕಮಲ್ ಹಾಸನ್ “ನಾನು ಮತ್ತು ನನ್ನ ಪಕ್ಷ ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಈ ಮೈತ್ರಿಗೆ ನಾವು ಎಲ್ಲಾ ಸಹಕಾರ ನೀಡುತ್ತೇವೆ. ಇದು ಕೇವಲ ಸ್ಥಾನಕ್ಕಾಗಿ ಅಲ್ಲ ರಾಷ್ಟ್ರಕ್ಕಾಗಿ ನಾವು ಕೈಜೋಡಿಸಿದ್ದೇವೆ” ಎಂದು ಹಾಸನ್ ಹೇಳಿದರು.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ರಾಜ್ಯ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಚೆನ್ನೈನಲ್ಲಿರುವ ಡಿಎಂಕೆ ಕಚೇರಿಯಲ್ಲಿ ಭೇಟಿಯಾದರು. ಎಂಎನ್‌ಎಂ ಲೋಕಸಭೆಯಲ್ಲಿ ಯಾವುದೇ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ.ಪಕ್ಷವು ಬೆಂಬಲಿಸುತ್ತದೆ ಮತ್ತು ಪ್ರಚಾರ ಮಾಡುತ್ತದೆ. ರಾಜ್ಯಸಭೆಯಲ್ಲಿ ಎಂಎನ್‌ಎಂಗೆ ಒಂದು ಸ್ಥಾನ (2025ರಲ್ಲಿ)” ನೀಡಲಾಗುತ್ತಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣಾಚಲಂ ಹೇಳಿದ್ದಾರೆ.
ತಮಿಳುನಾಡಿನಲ್ಲಿ 39 ಲೋಕಸಭಾ ಸ್ಥಾನಗಳಿದ್ದು, ಕಾಂಗ್ರೆಸ್, ಸಿಪಿಐ, ಸಿಪಿಐ (ಎಂ), ವಿದುತಲೈ ಚಿರುತೈಕಲ್ (ವಿಸಿಕೆ) ಮತ್ತು ಸಣ್ಣ ಪಕ್ಷಗಳನ್ನು ಒಳಗೊಂಡಿರುವ ಡಿಎಂಕೆ ನೇತೃತ್ವದ ಮೈತ್ರಿಕೂಟವು 2019 ರಲ್ಲಿ 39 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗಳಿಸಿ ಅಮೋಘ ಜಯ ಸಾಧಿಸಿತ್ತು. ಕೇವಲ ಒಂದು ಸ್ಥಾನವನ್ನು ಎಐಎಡಿಎಂಕೆ ಗೆದ್ದಿತ್ತು. ಬಿಜೆಪಿ ವೈಫಲ್ಯ ಅನುಭವಿಸಿತ್ತು.
ಮಕ್ಕಳ್ ನೀಧಿ ಮೈಯಂ (MNM) ಪಕ್ಷವನ್ನು 2018ರಲ್ಲಿ ಖ್ಯಾತ ನಟ ಹುಟ್ಟುಹಾಕಿದ್ದರು. 2019 ರಲೋಕಸಭಾ ಚುನಾವಣೆಯಲ್ಲಿ 37 ಸ್ಥಾನಗಳಲ್ಲಿ ಸ್ಪರ್ಧಿಸಿ ಎಲ್ಲಾ ಕ್ಷೇತ್ರಗಳಲ್ಲಿ ಸೋತಿತ್ತು. 3.72% ಮತಗಳನ್ನು ಪಡೆದಿತ್ತು. 2021 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕೊಯಮತ್ತೂರು ದಕ್ಷಿಣದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ವನತಿ ಶ್ರೀನಿವಾಸನ್ ವಿರುದ್ಧ ಕಡಿಮೆ ಅಂತರದಿಂದ ಸೋತು ಕಮಲ ಹಾಸನ್ ರಾಜಕೀಯವಾಗಿ ವಿಫಲರಾಗಿದ್ದರು.