ಕಾಸರಗೋಡು: ಈ ಬಾರಿಯ ಲೋಕಸಭೆ ಚುನಾವಣೆ ಮೂಲಕ ಜಿಲ್ಲೆಯಿಂದ ತೀರ್ಪು ನೀಡಲಿರುವವರು 10,11,031 ಮತದಾರರು.
ಇವರಲ್ಲಿ ಮಹಿಳೆಯರೇ ನಿರ್ಣಾಯಕ ಪಾತ್ರ ವಹಿಸಲಿರುವವರು. ಅನಿವಾಸಿ ಭಾರತೀಯರ ಸಹಿತ ಮತದಾರರಲ್ಲಿ ಮಹಿಳೆಯರು 5,15,941 ಮಂದಿ, ಪುರುಷರು 4,95,089 ಮಂದಿ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಒಬ್ಬ ಟ್ರಾನ್ಸ್‌ಜೆಂಡರ್ ಕೂಡ ಈ ಬಾರಿಯ ಮತದಾತರ ಪಟ್ಟಿಯಲ್ಲಿದ್ದಾರೆ.
115 ಮಹಿಳೆಯರ ಸಹಿತ 3276 ಮಂದಿ ಅನಿವಾಸಿ ಭಾರತೀಯ ಮತದಾರರು ಜಿಲ್ಲೆಯಲ್ಲಿದ್ದಾರೆ. ಕಾಸರಗೋಡು, ಮಂಜೇಶ್ವರ ವಿಧಾನಸಭೆ ಕ್ಷೇತ್ರಗಳಲ್ಲಿ ಪುರುಷ ಮತದಾರರು ಅ ಧಿಕವಾಗಿದ್ದಾರೆ. ಮಂಜೇಶ್ವರದಲ್ಲಿ 1,06,624 ಮಂದಿ ಪುರುಷರೂ, 1,05,462 ಮಂದಿ ಮಹಿಳೆಯರೂ ಮತದಾತರಿದ್ದು, ಒಟ್ಟು 2,12,086 ಮಂದಿ ಮತದಾರರಿದ್ದಾರೆ. ಕಾಸರ ಗೋಡು ವಿಧಾನಸಭೆ ಕ್ಷೇತ್ರದಲ್ಲಿ 96,742 ಪುರುಷರೂ, 96,233 ಮಹಿಳೆಯರು ಮತದಾರರಾಗಿದ್ದು, ಒಟ್ಟು 1,92,975 ಮತದಾರರು ಪಟ್ಟಿಯಲ್ಲಿದ್ದಾರೆ.
ಅನಿವಾಸಿ ಭಾರತೀಯ ಮತದಾರರು ಅತ್ಯಧಿಕ ಪ್ರಮಾಣದಲ್ಲಿರುವ ವಿಧಾನಸಭೆ ಕ್ಷೇತ್ರ ತ್ರಿಕ್ಕರಿಪುರವಾಗಿದೆ. ಇಲ್ಲಿ 1,181 ಮಂದಿ ಈ ಸಾಲಿನ ಮತದಾತರಿದ್ದಾರೆ. ಅತಿ ಕಡಿಮೆ ಅನಿವಾಸಿ ಭಾರತೀಯ ಮತದಾತರು ಇರುವ ವಿಧಾನಸಭೆ ಕ್ಷೇತ್ರ ಕಾಸರಗೋಡು ಆಗಿದೆ. ಇಲ್ಲಿ 239 ಮಂದಿ ಈ ಪಂಗಡದ ಮತದಾತರು. 1,500 ಮಂದಿ ಸರ್ವೀಸ್ ಮತದಾತರು ಜಿಲ್ಲೆಯಲ್ಲಿದ್ದಾರೆ.
ಅತ್ಯಧಿಕ ಪ್ರಮಾಣದ ಮತದಾರರಿರುವ ವಿಧಾನಸಭೆ ಕ್ಷೇತ್ರ ಮಂಜೇಶ್ವರವಾಗಿದೆ. ಇಲ್ಲಿ 1,06,624 ಮಂದಿ ಪುರುಷರೂ, 1,05,462 ಮಂದಿ ಮಹಿಳೆಯರೂ ಮತದಾರರಾಗಿದ್ದಾರೆ. ಒಟ್ಟು 2,12,086 ಮಂದಿ ಮತದಾತರು ಮಂಜೇಶ್ವರ ಕ್ಷೇತ್ರದಲ್ಲಿದ್ದಾರೆ. ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾರರಿರುವ ಕ್ಷೇತ್ರ ಕಾಸರಗೋಡು ಆಗಿದೆ. ಇಲ್ಲಿ 1,92,975 ಮಂದಿ ಮತದಾತರಾಗಿದ್ದಾರೆ. ಉದುಮ ವಿಧಾನಸಭೆ ಕ್ಷೇತ್ರದಲ್ಲಿ 1,03,684 ಮಂದಿ ಮಹಿಳೆಯರ ಸಹಿತ 2,03,669 ಮತದಾತರಿದ್ದಾರೆ. ಕಾಂಞಂಗಾಡ್ ಕ್ಷೇತ್ರದಲ್ಲಿ 1,08.935 ಮಹಿಳೆಯರು, ಒಬ್ಬ ಟ್ರಾನ್ಸ್ ಜೆಂಡರ್ ಸಹಿತ 2,09,158 ಮಂದಿ ಮತದಾರರಿದ್ದಾರೆ. ತ್ರಿಕ್ಕರಿಪುರದಲ್ಲಿ 1,01,627 ಮಂದಿ ಮಹಿಳೆಯರ ಸಹಿತ 1,93,143 ಮತದಾತರಿದ್ದಾರೆ.
ನೂತನ ಮತದಾರರು
ಈ ಬಾರಿಯ ಲೋಕಸಭೆ ಚುನಾವಣೆಗೆ ಸಂಬಂ ಧಿ ನೂತನವಾಗಿ ಮತದಾರರ ಪಟ್ಟಿಯಲ್ಲಿ 24,856 ಮಂದಿ ಸೇರ್ಪಡೆಗೊಂಡಿದ್ದಾರೆ. ಮಾ.25 ವರೆಗೆ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಸುವ ನಿಟ್ಟಿನಲ್ಲಿ ಆನ್‌ಲೈನ್ ಮೂಲಕ ಲಭಿಸಿದ ಅರ್ಜಿಗಳ ಸಹಿತ ಎ. 5ರ ವರೆಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದವರ ಗಣನೆ ನೀಡಲಾಗಿದೆ. 2019 ಜ.30ರಂದು ಪ್ರಕಟಿಸಿದ ಗಣನೆ ಪ್ರಕಾರ ಜಿಲ್ಲೆಯಲ್ಲಿ 9,86,172 ಮಂದಿ ಮತದಾರರಿದ್ದರು. ಈಗ ನೂತನವಾಗಿ 24,859 ಮಂದಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ 13,121 ಮಂದಿ ಪುರುಷರು, 11,739 ಮಹಿಳೆಯರು ಇದ್ದಾರೆ.