Advertisement

Lok Sabha Elections; ರಾಜ್ಯ ಬಿಜೆಪಿಗೆ 9 ತಲೆನೋವು: ಬದಲಾದೀತೇ ಕಾರ್ಯತಂತ್ರ?

11:19 PM Feb 19, 2024 | Team Udayavani |

ಬೆಂಗಳೂರು: ಮೋದಿ ಅಲೆಯಲ್ಲಿ ಯಾರನ್ನು ಬೇಕಾದರೂ ಅಖಾಡಕ್ಕೆ ಇಳಿಸಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿದ್ದ ರಾಜ್ಯ ಬಿಜೆಪಿ ನಾಯಕರಿಗೆ ರಾಷ್ಟ್ರೀಯ ವರಿಷ್ಠರ ಸೂಚನೆಯೊಂದು ಈಗ ತಲೆ ಬಿಸಿ ಮೂಡಿಸಿದೆ.

Advertisement

“ಕರ್ನಾಟಕ್‌ ಮೇ ಸಬ್‌ ಟೀಕ್‌ ನಹಿ’ ಎಂಬ ವರಿಷ್ಠರ ಸಂದೇಶ ರಾಜ್ಯ ಬಿಜೆಪಿ ತನ್ನ ಕಾರ್ಯತಂತ್ರವನ್ನೇ ಬದಲಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ತಂದೊಡ್ಡಿದೆ.

ರಾಜ್ಯದಲ್ಲಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಹೊಸ ಪದಾಧಿಕಾರಿಗಳು ತಂಡ ನೇಮಕಗೊಂಡ ಬಳಿಕ ಸಂಘಟನಾತ್ಮಕವಾಗಿ ಒಂದಿಷ್ಟು ಹೊಸ ಉಮೇದು ಸೃಷ್ಟಿಯಾಗಿದೆ. ಪಕ್ಷಕ್ಕೆ ಒಂದಿಷ್ಟು ಚಲನಶೀಲತೆ ಲಭಿಸಿದೆ. ಆದರೆ ಲೋಕಸಭಾ ಚುನಾವಣೆ ಗೆಲ್ಲುವುದಕ್ಕೆ ಮೋದಿ ನಾಮಬಲವೊಂದೇ ಸಾಕು ಎಂಬುದೇ ಬಹುತೇಕರ ಲೆಕ್ಕಾಚಾರವಾಗಿದೆ. ಆದರೆ ವರಿಷ್ಠರು ಸಂಗ್ರಹಿಸಿದ ಮಾಹಿತಿ ಪ್ರಕಾರ ಇವಿಷ್ಟೇ ಸಾಲದು. ಇದರ ಹೊರತಾಗಿ ಕರ್ನಾಟಕದಲ್ಲಿ ರಾಜಕೀಯ ಸಂಕಥನ ಸೃಷ್ಟಿಯಾಗುತ್ತಿದ್ದು, ಅದನ್ನು ಎದುರಿಸುವುದಕ್ಕೆ ಯೋಜನೆ ಏನು ಎಂಬ ಸ್ಪಷ್ಟನೆ ಕೋರಿದ್ದಾರೆ.

ಬಿಜೆಪಿ ಉನ್ನತ ಮೂಲಗಳ ಪ್ರಕಾರ, ಮಂಡ್ಯ ಸಹಿತ ಸುಮಾರು 9ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮೈತ್ರಿಕೂಟಕ್ಕೆ ಕಠಿನ ಸ್ಪರ್ಧೆ ಇದೆ. ದಿನಕಳೆದಂತೆ ಈ ನೇರಾನೇರ ಹಣಾಹಣಿಯ ಕಣಗಳ ಸಂಖ್ಯೆ 11ರ ವರೆಗೂ ಹೋಗಬಹುದು. ಹೀಗಾಗಿ 28 ಸ್ಥಾನ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದ ಪ್ರದರ್ಶನವನ್ನು ಕೇಸರಿಪಡೆಗಳು ಬಹಿರಂಗ ಪ್ರದರ್ಶನಕ್ಕೆ ಮಾತ್ರ ಮೀಸಲಿಟ್ಟಿದ್ದಾರೆಯೇ ವಿನಾ ಅಂತರಂಗದ ಪರಿಸ್ಥಿತಿ ಬೇರೆಯೇ ಇದೆ ಎಂದು ಹೇಳಲಾಗುತ್ತಿದೆ.

ತೃಪ್ತಿಕರವಿಲ್ಲ
ಜೆಡಿಎಸ್‌ ನಡೆಸಿದ ಆಂತರಿಕ ಸಮೀಕ್ಷೆಯಲ್ಲೂ ಹಳೆ ಮೈಸೂರು ಭಾಗದಲ್ಲಿ ಮೈತ್ರಿಕೂಟಕ್ಕೆ ತೃಪ್ತಿಕರ ವಾದ ಸ್ಥಿತಿ ಇಲ್ಲ ಎಂದೇ ತಿಳಿದು ಬಂದಿದೆ.

Advertisement

ಎಚ್‌.ಡಿ.ಕುಮಾರಸ್ವಾಮಿಯವರನ್ನು ಮಂಡ್ಯದಿಂದ ಕಣಕ್ಕೆ ಇಳಿಸಿದರೆ ಫ‌ಲಿತಾಂಶ ಪಡೆಯಬಹುದೆಂಬುದು ಬಿಜೆಪಿ ನಾಯಕರ ಅಂಬೋಣ. ಆದರೆ ಕುಮಾರಸ್ವಾಮಿಗೆ ಸಂಸತ್‌ ಪ್ರವೇಶದ ಮನಸಿಲ್ಲ. ಹೀಗಾಗಿ ಮಂಡ್ಯ ಲೋಕಸಭೆಯ ಅಭ್ಯರ್ಥಿ ಯಾರೆಂಬುದನ್ನು ನಿರ್ಧರಿಸುವುದು ಇನ್ನೂ ಸ್ವಲ್ಪ ಕಾಲ ಬಿಜೆಪಿಗೆ ಜಟಿಲವಾದೀತು ಎನ್ನಲಾಗುತ್ತಿದೆ.

ಯಾವುದು ಕಠಿನ ?
ಬಿಜೆಪಿಯ ಆಂತರಿಕ ಲೆಕ್ಕಾಚಾರದ ಪ್ರಕಾರ ಬಿಜೆಪಿಗೆ ಈ ಬಾರಿ ಬೀದರ್‌, ಬಳ್ಳಾರಿ, ರಾಯಚೂರು, ಕೊಪ್ಪಳ, ದಾವಣಗೆರೆ, ಹಾವೇರಿ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಠಿನ ಪರಿಸ್ಥಿತಿ ಇದೆ. ಇದು ಅಪಾಯದ ದೃಷ್ಟಿಯಿಂದ “ಎ’ ಪಟ್ಟಿಯಲ್ಲಿ ಇರುವ ಕ್ಷೇತ್ರಗಳು. ಅದೇ ರೀತಿ ಚಿತ್ರದುರ್ಗ, ಬೆಂಗಳೂರು ಕೇಂದ್ರ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ತುಸು ಬಿಕ್ಕಟ್ಟು ಇದೆ. ಒಟ್ಟಾರೆಯಾಗಿ ಕನಿಷ್ಠ ಹನ್ನೊಂದು ಕ್ಷೇತ್ರಗಳನ್ನು ಸುಲಭವಾಗಿ ಪರಿಗಣಿಸುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಹೀಗಾಗಿ ಈ ಕ್ಷೇತ್ರಗಳ ಬಗ್ಗೆ ಈಗ ಬಿಜೆಪಿ ಹೆಚ್ಚು ತಲೆಕಡಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹಾವೇರಿ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಅಭ್ಯರ್ಥಿ ಬದಲಾಯಿಸುವುದು ಶತಃಸಿದ್ಧ ಎಂಬುದು ಬಿಜೆಪಿ ಮೂಲಗಳ ಅಭಿಪ್ರಾಯ. ಆದರೆ ಸೋಲಿನ ಭೀತಿ ಎದುರಿಸುತ್ತಿರುವ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಬದಲಾವಣೆಗೂ ರಾಜ್ಯ ಬಿಜೆಪಿ ನಾಯಕರು ಧೈರ್ಯ ಮಾಡುತ್ತಿಲ್ಲ. ಯಾವುದನ್ನು ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾಗಿದೆಯೋ ಆ ಕ್ಷೇತ್ರದಲ್ಲಿ ಸ್ಥಳೀಯ ಕಾರಣಗಳಿಗಾಗಿ ಅಭ್ಯರ್ಥಿ ಬದಲಾವಣೆಯ ಪ್ರಶ್ನೆ ಉದ್ಭವವಾಗಿದೆ. ಗೆಲುವಿನ ಪಟ್ಟಿಯಿಂದ ಜಾರುತ್ತಿರುವ ಜಾಗದಲ್ಲಿ ಅಭ್ಯರ್ಥಿ ಕೊರತೆ, ಗೆಲ್ಲುವ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಹೆಚ್ಚಳವೇ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದ್ದು, ಮುಂದಿನ ವಾರದಿಂದ ಅಭ್ಯರ್ಥಿ ಆಯ್ಕೆ ಬಗ್ಗೆ ಪಕ್ಷದಲ್ಲಿ ಅಧಿಕೃತವಾಗಿಯೇ ಪ್ರಕ್ರಿಯೆಗಳು ಪ್ರಾರಂಭವಾಗಲಿದೆ.

-ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next