ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸರು ಕಟ್ಟೆಚ್ಚರ ವಹಿಸಿದ್ದು ಆರ್‌ಪಿಎಫ್ ಮತ್ತು ರೈಲ್ವೇ ಪೊಲೀಸರ 20 ಪ್ರತ್ಯೇಕ ತಪಾಸಣ ತಂಡ ರಚಿಸಲಾಗಿದೆ.
ಕೇಂದ್ರ ಚುನಾವಣ ಆಯೋಗದ ಸೂಚನೆ ಮೇರೆಗೆ ರೈಲ್ವೇ ಡಿಐಜಿ ಎಸ್.ಡಿ. ಶರಣಪ್ಪ ಮತ್ತು ಎಸ್ಪಿ ಡಾ| ಸೌಮ್ಯಲತಾ ನೇತೃತ್ವದಲ್ಲಿ ಆರ್‌ಪಿಎಫ್ ಮತ್ತು ರೈಲ್ವೇ ಪೊಲೀಸರ ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಆರ್‌ಪಿಎಫ್ ಮತ್ತು ರೈಲ್ವೇ ಪೊಲೀಸರ 20 ಪ್ರತ್ಯೇಕ ತಪಾಸಣೆ ತಂಡ ರಚಿಸಲಾಗಿದ್ದು ಪ್ರತಿ ತಂಡದಲ್ಲಿ 5-6 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಲ್ಕು ದಿನಗಳಿಂದ ರಾಜ್ಯದ ಪ್ರಮುಖ ರೈಲ್ವೇ ನಿಲ್ದಾಣಗಳ ಪ್ರವೇಶ ದ್ವಾರ ಮತ್ತು ನಿರ್ಗಮಿಸುವ ದ್ವಾರದಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಪ್ರತಿ ರೈಲು ಮತ್ತು ಬೋಗಿಗಳಲ್ಲಿ ಬರುವ ಲಗೇಜ್, ಪ್ಯಾಕಿಂಗ್‌ಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ.
ರಾತ್ರಿ ವೇಳೆ ಪ್ರಯಾಣಿಸುವ ರೈಲುಗಳಲ್ಲಿ ಎಂದಿನಂತೆ ರೈಲ್ವೇ ಪೊಲೀಸ್ ಸಿಬಂದಿ ಕಾರ್ಯನಿರ್ವಹಿಸಲಿದ್ದಾರೆ. ಈ ವೇಳೆ ಹೆಚ್ಚುವರಿಯಾಗಿ ಯಾವುದಾದರೂ ಲಗೇಜ್‌ಗಳು ಕಂಡು ಬಂದರೆ, ತಪಾಸಣೆಗೆ ಸೂಚಿಸಲಾಗಿದೆ. ನಗದು ಅಥವಾ ಮದ್ಯದ ಬಾಟಲಿಗಳು ಕಂಡು ಬಂದರೆ ಕೂಡಲೆ ಸಮೀಪದ ರೈಲ್ವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಈ ಮಧ್ಯೆ ಮೂರು ದಿನಗಳ ಹಿಂದೆ ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿ 60ಕ್ಕೂ ಹೆಚ್ಚು ಕುಕ್ಕರ್‌ಗಳು ಪತ್ತೆಯಾಗಿದ್ದು, ಕುಕ್ಕರ್‌ಗಳ ಕೊಂಡೊಯ್ಯುತ್ತಿದ್ದ ವ್ಯಕ್ತಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ರೈಲ್ವೇ ಪೊಲೀಸರು ಮಾಹಿತಿ ನೀಡಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರೈಲುಗಳಲ್ಲಿ ತಪಾಸಣೆ ನಡೆಸಲು 20ಕ್ಕೂ ಹೆಚ್ಚು ತಪಾಸಣ ತಂಡ ರಚಿಸಲಾಗಿದ್ದು, ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ಕುಕ್ಕರ್‌ಗಳು ಪತ್ತೆಯಾಗಿವೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
– ಎಸ್.ಡಿ. ಶರಣಪ್ಪ, ರೈಲ್ವೇ ಡಿಐಜಿ