Advertisement

ಮೆಗಾರ‍್ಯಾಲಿಯಲ್ಲಿ ಮಹಾ ಪ್ರದರ್ಶನ

12:30 AM Jan 20, 2019 | |

ಕೋಲ್ಕತಾ: ಲೋಕಸಭಾ ಚುನಾವಣೆಗಾಗಿ ಮೋದಿ ಸರ್ಕಾರದ ವಿರುದ್ಧ ಸಮರ ಸಾರಿರುವ ವಿರೋಧ ಪಕ್ಷಗಳ “ಮಹಾ ಘಟಬಂಧನ’ದ ಬೃಹತ್‌ ರ‍್ಯಾಲಿ ಕೋಲ್ಕತ್ತಾದಲ್ಲಿ ಶನಿವಾರ ನಡೆದಿದ್ದು, ವಿವಿಧ ಪ್ರಾದೇಶಿಕ ಪಕ್ಷಗಳ ನಾಯಕರು ಭಾಗವಹಿಸಿ ಮೈತ್ರಿಗೆ ಬೆಂಬಲ ಘೋಷಿಸಿದರು. ಸುಮಾರು ಏಳು ಲಕ್ಷ ಸಭಿಕರ ಸಾಮರ್ಥ್ಯದ ಇಲ್ಲಿನ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ನಡೆದ ಈ ಸಮ್ಮೇಳನವು, ಪ್ರತಿಪಕ್ಷಗಳ ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾಯಿತು.

Advertisement

ಖುದ್ದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೇ ಆಸ್ಥೆಯಿಂದ ಆಯೋಜಿಸಿದ್ದ, ವಿರೋಧ ಪಕ್ಷಗಳ ಬಲ ಪ್ರದರ್ಶನವೆಂದೇ ಪರಿಗಣಿಸಲ್ಪಟ್ಟಿದ್ದ ಈ ಸಮಾರಂಭದಲ್ಲಿ, ಮಾಜಿ ಪ್ರಧಾನಿ, ಜೆಡಿಎಸ್‌ ಧುರೀಣ ಎಚ್‌.ಡಿ. ದೇವೇಗೌಡ, ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉತ್ತರ ಪ್ರದೇಶದ ಮಾಜಿ ಸಿಎಂ ಅಖೀಲೇಶ್‌ ಯಾದವ್‌, ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌, ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಮುಂತಾದವರು ಭಾಗವಹಿಸಿದ್ದರು. ಕಾಂಗ್ರೆಸ್‌ನ ಪ್ರತಿನಿಧಿಗಳಾಗಿ ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಅಭಿಷೇಕ್‌ ಸಿಂ Ì ಪಾಲ್ಗೊಂಡಿದ್ದರು. ಇದೆಲ್ಲದರ ಜತೆಗೆ, ಬಿಜೆಪಿಯ ಹಾಲಿ ಸಂಸದ ಶತ್ರುಘ್ನ ಸಿನ್ಹಾ ಮತ್ತು ಬಿಜೆಪಿಯ ಮಾಜಿ ನಾಯಕರಾದ ಅರುಣ್‌ ಶೌರಿ, ಯಶವಂತ್‌ ಸಿನ್ಹಾ ಕೂಡ ಭಾಗವಹಿಸಿದ್ದು ಗಮನ ಸೆಳೆಯಿತು.

ಯಾರ್ಯಾರು ಏನೇನಂದ್ರು?
ವೇದಿಕೆಯಲ್ಲಿ ಮಾತನಾಡಿದ ದೇವೇಗೌಡರು, “”ಚುನಾವಣೆ ಸನ್ನಿಹಿತವಾಗುತ್ತಿರುವುದರಿಂದ ಎಲ್ಲಾ ವಿಪಕ್ಷಗಳೂ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮರೆತು, ಒಟ್ಟಾಗಿ ಚುನಾವಣೆ ಎದುರಿಸಬೇಕು” ಎಂದು  ಕರೆ ನೀಡಿದರೆ, ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ, “”ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವುದಾಗಿ ಹೇಳುವ ಬಿಜೆಪಿಯ ನಾಯಕರೇ ಕರ್ನಾಟಕದಲ್ಲಿ ಶಾಸಕರ ಖರೀದಿಗೆ ಮುಂದಾಗಿದ್ದಾರೆ” ಎಂದು ಕಿಡಿಕಾರಿದರು. ಮಮತಾ ಬ್ಯಾನರ್ಜಿ ಮಾತನಾಡಿ, “”ಮೋದಿ ಸರ್ಕಾರದ ಎಕ್ಸ್‌ಪೈರಿ ದಿನಾಂಕ ಮುಗಿದಿದೆ. ಹಾಗಾಗಿ, ಅದನ್ನು ಬದಲಾಯಿಸಲೇಬೇಕಿದೆ” ಎಂದರು.

“”ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯಿಂದ ಆಡಳಿತ ವೈಖರಿಗೆ ದೇಶದ ಆರ್ಥಿಕ ಮತ್ತು ರಾಜಕೀಯ ಸಂಸ್ಥೆಗಳು ಹಾಳಾಗಿವೆ” ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರೆ, ಚಂದ್ರಬಾಬು ನಾಯ್ಡು ಮಾತನಾಡಿ, “”ಮೋದಿಯವರು ಕೆಲಸ ಮಾಡುವ ಪ್ರಧಾನಿಯಲ್ಲ, ಪ್ರಚಾರ ಪ್ರಿಯ ಪ್ರಧಾನಿಯಾಗಿದ್ದು, ಅವರ ಅನೇಕ ನೀತಿಗಳು ಜನರಿಗೆ ಮಾರಕವಾಗಿವೆ” ಎಂದರು.

ಇನ್ನು, ಅಖೀಲೇಶ್‌ ಯಾದವ್‌ ಮಾತನಾಡಿ, “”ಇಡೀ ದೇಶವೇ ಬಿಜೆಪಿ ವಿರುದ್ಧ ನಿಂತಿದೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿಯಿಂದ ಕನಿಷ್ಠ ಒಂದು ಸ್ಥಾನವನ್ನಾದರೂ ಗೆಲ್ಲುವ ಭರವಸೆ ಬಿಜೆಪಿಗೆ ಇಲ್ಲ” ಎಂದರು. ಸ್ಟಾಲಿನ್‌ ಅವರು ತಮ್ಮ ಭಾಷಣದಲ್ಲಿ, “”ದೇಶದಲ್ಲಿ ಕೋಮುವಾದದ ಹೆಸರಲ್ಲಿ ಹರಡುತ್ತಿರುವ ವಿಷವನ್ನು ತಡೆಯಬೇಕು” ಎಂದು ಆಗ್ರಹಿಸಿದರು.

Advertisement

ಲೂಟಿ ಮಾಡುವ ಅವಕಾಶ ಕಳೆದುಕೊಂಡವರು ಒಟ್ಟಾಗಿ ಮಹಾ ಘಟಬಂಧನಕ್ಕೆ ಮುಂದಾಗಿದ್ದಾರೆ. ಕೋಲ್ಕತ್ತಾದ ವೇದಿಕೆಯಲ್ಲಿ ಅವರು “ಅಯ್ಯೋ ನಮ್ಮನ್ನು ಕಾಪಾಡಿ, ನಮ್ಮನ್ನು ಕಾಪಾಡಿ’ ಎಂದು ಬೇಡಿಕೊಂಡಂತೆ ಭಾಸವಾಗುತ್ತಿದೆ.
– ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next