Advertisement

ಕುಂದಾಪುರ: ಪಕ್ಷಕ್ಕಿಂತ ನಾಯಕತ್ವಕ್ಕೆ ಮಣೆ ಹಾಕುವ ಕ್ಷೇತ್ರ!

12:47 AM Mar 30, 2019 | Team Udayavani |

ಕುಂದಾಪುರ: ಒಂದೇ ಕಡೆ ಒಲವು ತೋರಿಸದೆ, ಕ್ಷೇತ್ರದ ಅಭ್ಯರ್ಥಿಯೇ ಆಗಬೇಕೆಂಬ ಹಠವೂ ಹಿಡಿಯದೆ ನಾಡಿಮಿಡಿತ ಅರ್ಥ ಮಾಡಿಕೊಳ್ಳಲು ಕಷ್ಟ ಕೊಡುವ ಕ್ಷೇತ್ರ ಕುಂದಾಪುರ. ಇಲ್ಲಿ ವಿಧಾನಸಭಾ ಚುನಾವಣೆ ಯಲ್ಲಿ ಒಂದು ಪಕ್ಷಕ್ಕೆ ಬಹುಮತ ದೊರೆತರೆ ಲೋಕಸಭಾ ಚುನಾವಣೆಯಲ್ಲಿ ಇನ್ನೊಂದಕ್ಕೆ ಸಿಗುತ್ತದೆ. ಮತಗಳು ಇದೇ ಪಕ್ಷಕ್ಕೆ ಸಿಗುತ್ತವೆ ಎಂದು ಲೆಕ್ಕಾಚಾರ ಕಷ್ಟ. ಅಂದಹಾಗೆ, ಈ ವಿಧಾನಸಭಾ ಕ್ಷೇತ್ರದ ಇಬ್ಬರು ಇದುವರೆಗೆ ಸಂಸದರಾಗಿದ್ದಾರೆ.

Advertisement

ಬಿಜೆಪಿ ತೆಕ್ಕೆಗೆ
ಉಡುಪಿ ಲೋಕಸಭಾ ಕ್ಷೇತ್ರ ಇದ್ದಾಗ ಕಾಂಗ್ರೆಸ್‌ ಬಳಿಯಿದ್ದ ಕ್ಷೇತ್ರ 2008ರಲ್ಲಿ ಉಡುಪಿ- ಚಿಕ್ಕಮಗಳೂರು ಆದ ಬಳಿಕ ಕೈ ಹಿಡಿತದಿಂದ ಜಾರಿತು. ಕ್ಷೇತ್ರ ವಿಂಗಡನೆ ಯಾದನಂತರ ಮೊದಲ ಸಂಸದರಾಗಿ ಬಿಜೆಪಿಯ ಡಿ.ವಿ. ಸದಾನಂದ ಗೌಡರು ಆಯ್ಕೆ ಯಾದರು. ಅವರು ಮುಖ್ಯಮಂತ್ರಿ ಯಾದಾಗ 2012ರಲ್ಲಿ ನಡೆದ ಉಪಚುನಾವಣೆ ಯಲ್ಲಿ ಜಯಪ್ರಕಾಶ್‌ ಹೆಗ್ಡೆ ಈ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್‌ಗೆ ಗೆಲ್ಲಿಸಿಕೊಟ್ಟರು. 2014ರಲ್ಲಿ ಶೋಭಾ ಕರಂದ್ಲಾಜೆ ಅವರ ಮೂಲಕ ಕ್ಷೇತ್ರ ಮತ್ತೆ ಬಿಜೆಪಿ ಪಾಲಾಯಿತು. ಹೀಗೆ ಒಮ್ಮೆ ಅತ್ತ- ಇನ್ನೊಮ್ಮೆ ಇತ್ತ ಒಲಿಯುವ ಚಹರೆಯ ಕ್ಷೇತ್ರವಿದು. ಒಟ್ಟು 16 ಲೋಕಸಭಾ ಚುನಾವಣೆಗಳಲ್ಲಿ 12 ಬಾರಿ ಕಾಂಗ್ರೆಸ್‌, ಮೂರು ಬಾರಿ ಬಿಜೆಪಿ ಗೆದ್ದಿವೆ. ಒಮ್ಮೆ ಸ್ವತಂತ್ರ ಅಭ್ಯರ್ಥಿ ಆಯ್ಕೆಯಾಗಿದ್ದರು.

ಮತ ಗಳಿಕೆ
2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ 71,695 ಮತಗಳು ದೊರೆತಿದ್ದರೆ, ಅನಂತರದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸದಾನಂದ ಗೌಡರಿಗೆ ದೊರೆತ ಮತಗಳು 60,174. ಅದೇ ಅವಧಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಅವರು ಡಿವಿ ಗಿಂತಲೂ ಹೆಚ್ಚು ಮತ ಪಡೆದು ಗೆದ್ದಿದ್ದರು. ಈ ದಾಖಲೆಯೂ ಉಳಿಯಲಿಲ್ಲ. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರು ಪಕ್ಷೇತರರಾಗಿ ಸ್ಪರ್ಧಿಸಿ 80,563 ಮತಗಳನ್ನು ಪಡೆದರು. ಆಗ ಈ ಕ್ಷೇತ್ರದಲ್ಲಿ ಬಿಜೆಪಿಗೆ ದೊರೆತ ಮತಗಳು 14,525. ಹಾಗೆಂದು ಇದನ್ನು ಲೋಕಸಭಾ ಚುನಾವಣೆಗೆ ಹೊಂದಾಣಿಸುವಂತಿಲ್ಲ. ಏಕೆಂದರೆ ತದನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ 85,110 ಮತಪಡೆದಿದ್ದರು. ಹಾಗಾಗಿ ಈ ಕ್ಷೇತ್ರ ಪಕ್ಷ ಆಧಾರಿತ ವಾಗಿ ಒಲಿಯುತ್ತದೆಯೋ ವ್ಯಕ್ತಿಗೋ ಎಂಬ ಜಿಜ್ಞಾಸೆಯಿದೆ.

ಕಳೆದ ಲೋಕಸಭಾ ಚುನಾವಣೆ ಯಲ್ಲಿ ಮೋದಿ ನಾಯಕತ್ವವನ್ನು ಗಮನಿಸಿ ಜನ ಮತದಾನ ಮಾಡಿದ್ದಾರೆ, ಆಯ್ಕೆಯಾದ ಸಂಸದರು ಕ್ಷೇತ್ರಕ್ಕೆ ಕಡಿಮೆ ಭೇಟಿ ನೀಡಿದ್ದಾರೆಂಬ ಅಭಿಪ್ರಾಯದ ಮಧ್ಯೆ ಅವರೇ ಈ ಬಾರಿ ಕಣದಲ್ಲಿದ್ದಾರೆ. ಡಿ.ವಿ. ಸದಾನಂದ ಗೌಡ ಮತ್ತು ಶೋಭಾ ಕರಂದ್ಲಾಜೆ ಅವರನ್ನು ಗೆಲ್ಲಿಸುವಾಗ ಇಲ್ಲಿನ ಮತದಾರ ಹೊರಗಿನವರೆಂದು ನೋಡಿಲ್ಲ, ಜಯಪ್ರಕಾಶ್‌ ಹೆಗ್ಡೆ ಅವರನ್ನು ಸೋಲಿಸುವಾಗ ಊರಿನವರೆಂದು ಬಿಟ್ಟಿಲ್ಲ.

4 ಶಾಸಕರು, 2 ವಿ.ಪ. ಸದಸ್ಯರು, 2 ಸಂಸದರು
ಕುಂದಾಪುರದವರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಎಂ. ವೇದವ್ಯಾಸ ಕಾಮತ್‌ ಸಿದ್ದಾಪುರ, ವೈ. ಭರತ್‌ ಶೆಟ್ಟಿ ಯಡ್ತರೆ ಶಾಸಕರಾಗಿದ್ದಾರೆ. ಕೆ. ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ವಿಧಾನಪರಿಷತ್‌ನಲ್ಲಿದ್ದಾರೆ. ಮೂಡ್ಲಕಟ್ಟೆ ನಿವಾಸಿಯಾಗಿದ್ದ ಐ.ಎಂ. ಜಯರಾಮ ಶೆಟ್ಟಿ, ಕೊರ್ಗಿ ಜಯಪ್ರಕಾಶ್‌ ಹೆಗ್ಡೆ ಉಡುಪಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು.

Advertisement

ಹೆಗ್ಡೆ ಪರ ಟ್ವೀಟ್‌
ಮತ ಗಳಿಕೆಯಲ್ಲಿ ಇಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಸದಾ ಪೈಪೋಟಿಯಿದೆ. ಜೆಡಿಎಸ್‌ ಅಂತಹ ಪ್ರಬಲ ಸ್ಪರ್ಧೆ ಒಡ್ಡಿಲ್ಲ. ಈ ಬಾರಿ ಕಾಂಗ್ರೆಸ್‌ -ಜೆಡಿಎಸ್‌ ಜಂಟಿ ಅಭ್ಯರ್ಥಿ ಕಣದಲ್ಲಿರುವ ಕಾರಣ ಬಿಜೆಪಿ ರಣಸೂತ್ರ ಸಿದ್ಧಪಡಿಸುತ್ತಿದೆ. ಜಯಪ್ರಕಾಶ್‌ ಹೆಗ್ಡೆ ಆಕಾಂಕ್ಷಿಯಾಗಿದ್ದು, ಕೊನೆ ಕ್ಷಣದವರೆಗೂ ಅವರ ಹೆಸರು ಪಟ್ಟಿಯಲ್ಲಿತ್ತು. ಶೋಭಾ ಅವರೇ ಅಭ್ಯರ್ಥಿ ಯಾಗಿರುವ ಕಾರಣ ಹೆಗ್ಡೆ ಪರ ಟ್ವೀಟ್‌ ಮಾಡಿದವರು, ಅವರ ಬೆಂಬಲಿಗರ ನಡೆ ಏನು ಎನ್ನುವುದು ಕುತೂಹಲವಾಗಿ ಉಳಿದಿದೆ. ಹೆಗ್ಡೆಯವರು ಈ ಕುರಿತು ಈಗಾಗಲೇ ಸ್ಪಷ್ಟನೆ ನೀಡಿದ್ದು, ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವುದಾಗಿ ಹೇಳಿದ್ದಾರೆ.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next