Advertisement

Lok Sabha Election;ನಾನು ಅಭ್ಯರ್ಥಿ ಅಲ್ವೇ ಅಲ್ಲ: ಸಚಿವ ಡಾ.ಹೆಚ್.ಸಿ.ಮಹದೇವಪ್ಪ

04:23 PM Feb 09, 2024 | Team Udayavani |

ಮೈಸೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಸಿದ್ದತೆ ನಡೆಯುತ್ತಿದ್ದು, ಮಂತ್ರಿಗಳು ಸ್ಪರ್ಧಿಸಬೇಕೆಂದು ಎಲ್ಲೂ ಚರ್ಚೆಯಾಗಿಲ್ಲ.ಮಂತ್ರಿಗಳು ಸ್ಪರ್ಧಿಸಬೇಕೆಂಬ ಒತ್ತಾಯವಿಲ್ಲ. ಗೆಲ್ಲುವ ಅವಕಾಶ ಆಧರಿಸಿ ಅಭ್ಯರ್ಥಿಗಳ ಆಯ್ಕೆಯಾಗಲಿದೆ ಎಂದು ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಹೇಳಿಕೆ ನೀಡಿದ್ದಾರೆ.

Advertisement

ನಾನು ಲೋಕಸಭೆಗೆ ಅಭ್ಯರ್ಥಿಯಲ್ಲ,ಇದೆಲ್ಲ ಅಂತೆ ಕಂತೆಗಳು ಅಷ್ಟೆ. ನಾನು ಯಾರೇ ಅಭ್ಯರ್ಥಿಯಾದರೂ ಗೆಲುವಿಗೆ ಕೆಲಸ ಮಾಡುತ್ತೇನೆ.ನನ್ನ ಮಗ ಸುನಿಲ್ ಬೋಸ್ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ. ಸುನಿಲ್ ಬೋಸ್ ಗೆ ಮೂರು ಬಾರಿ ವಿಧಾನಸಭೆ ಚುನಾವಣೆಯ ಟಿಕೆಟ್ ಕೊಟ್ಟಿಲ್ಲ‌.ಆದರೂ ಬೇಸರ ಮಾಡಿಕೊಳ್ಳದೇ ಪಕ್ಷದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾನೆ ಎಂದರು.

”ಸಹಜವಾಗಿಯೇ ಅವನಿಗಿಂತ ಕಿರಿಯರು, ಪಕ್ಷದ ಸದಸ್ಯರಲ್ಲದವರೂ ಕಾಂಗ್ರೆಸ್ ನಲ್ಲಿ ಶಾಸಕರಾಗಿದ್ದಾರೆ.ನನ್ನ ಮಗನಿಗೇ ಟಿಕೆಟ್ ಕೊಡಿ ಎಂದು ನಾನು ಎಂದೂ ಶಿಫಾರಸ್ಸು ಮಾಡಿಲ್ಲ.ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಧ್ರುವನಾರಾಯಣ್ ಹಠಾತ್ ನಿಧನಾನಂತರ ಅವರ ಮಗ ದರ್ಶನ್ ಗೆ ಟಿಕೆಟ್ ನೀಡಲು ಶಿಫಾರಸ್ಸು ಮಾಡಿದೆ.ಸ್ವತಃ ಸುನಿಲ್ ಬೋಸ್ ದರ್ಶನ್ ಗೆ ಟಿಕೆಟ್ ಕೊಡುವಂತೆ ಹೇಳಿದ‌. ನಮ್ಮ ಪಕ್ಷದ ಸದಸ್ಯರಲ್ಲದ ಕಳಲೆ ಕೇಶವಮೂರ್ತಿಯನ್ನು ಕಾಂಗ್ರೆಸ್ ಗೆ ಕರೆತಂದಾಗ, ನಂಜನಗೂಡು ಉಪಚುನಾವಣೆಯಲ್ಲಿ ಸುನಿಲ್ ಬೋಸ್ ಕೆಲಸ ಮಾಡಿ ಗೆಲ್ಲಿಸಿದ್ದಾನೆ ಎನ್ನುವ ಮೂಲಕ ಪರೋಕ್ಷವಾಗಿ ಸುನಿಲ್ ಬೋಸ್ ಪರ ಬ್ಯಾಟ್ ಬೀಸಿದರು.

ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಚುನಾವಣ ಸಮಿತಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ.ಆದರೆ ಇದುವರೆಗೂ ಸಿಇಸಿ ಸಭೆಯೇ ನಡೆದಿಲ್ಲ‌.ಹಾಗಾಗಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿದೆ ಎಂಬ ವಿಚಾರ ಅಂತೆಕಂತೆ ಅಷ್ಟೇ‌ ಎಂದರು.

ಮಂಡ್ಯದ ಕೆರಗೋಡಿನಲ್ಲಿ ಧ್ವಜ ಸ್ತಂಭ ತೆರವು ವಿರೋಧಿಸಿ ಮಂಡ್ಯ ಬಂದ್ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಇದೆಲ್ಲ ಜನರ ವೈಯುಕ್ತಿಕ ವಿಚಾರ‌. ಧಾರ್ಮಿಕ ಆಚಾರ ವಿಚಾರಗಳನ್ನು ರಾಜಕೀಯಗೊಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ, ಸಂವಿಧಾನಕ್ಕೆ ಶೋಭೆ ತರುವುದಿಲ್ಲ.ಧರ್ಮ, ದೇವರ ಹೆಸರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಅವಕಾಶ ಮಾಡಿಕೊಡಬಾರದು.ಮಂಡ್ಯ ಪ್ರಗತಿಪರ ಜಿಲ್ಲೆಯಾಗಿದೆ. ಅಲ್ಲಿನ ಜನರು ಸೌಹಾರ್ದ ಒಗ್ಗಟ್ಟು ಕಾಪಾಡಿಕೊಳ್ಳಬೇಕು ಎಂದರು.

Advertisement

ಕಾಂಗ್ರೆಸ್ ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳ ಪಕ್ಷವಾಗಿದ್ದು ಜಾತಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದಿಲ್ಲ. ಬಿಜೆಪಿಯವರು ಜೆಡಿಎಸ್ ಜತೆ ಸೇರಿದ ಬಳಿಕ ಬಲ ಹೆಚ್ಚಿಸಿಕೊಳ್ಳಲು ಮುಗ್ದ ಜನರನ್ನು ಬಲಿಪಶು ಮಾಡುವುದು ಸರಿಯಲ್ಲ‌.ಮಂಡ್ಯದ ಜನರು ಪ್ರಬುದ್ದರಾಗಿದ್ದು ಸಂಯಮ ಕಾಯ್ದುಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next